ಕರ್ನಾಟಕ

ಡೆಲ್ಲಿ ದೌಡು : ಸಂಪುಟ ಪ್ರವೇಶಕ್ಕೆ ನೂಕು ನುಗ್ಗಲು ಆಕಾಂಕ್ಷಿಗಳ ತಳಮಳ-ಶಂಕಿತರ ಕಳವಳ

Pinterest LinkedIn Tumblr

siddaramaiah-1.jpgaaaಬೆಂಗಳೂರು, ಜೂ. ೧೬- ಬಹು ನಿರೀಕ್ಷಿತ ಸಚಿವ ಸಂಪುಟ ಪುನಱ್ರಚಿಸಲು ಭಾರಿ ಉತ್ಸಾಹದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳುತ್ತಿದ್ದಂತೆ ಸಚಿವ ಸ್ಥಾನದ ಆಕಾಂಕ್ಷಿಗಳು ಹಾಗೂ ಸಚಿವ ಸ್ಥಾನ ಉಳಿಸಿಕೊಳ್ಳಲು ಕೆಲವು ಸಚಿವರು ದೆಹಲಿಗೆ ದೌಡಾಯಿಸಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ರಾಜಕೀಯ ಬೆಳವಣಿಗೆಗಳು ದೆಹಲಿಗೆ ಸ್ಥಳಾಂತರಗೊಂಡಿದೆ.

ಇಲ್ಲಿಂದ ಮಧ್ಯಾಹ್ನ ಹೈಕಮಾಂಡ್ ಭೇಟಿ ಮಾಡಲು ದೆಹಲಿಗೆ ಪಯಣ ಬೆಳೆಸಿದ ಸಿದ್ದರಾಮಯ್ಯರವರು ಇಂದು ಸಂಜೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರನ್ನು ಭೇಟಿ ಮಾಡಿ ಸಂಪುಟ ಪುನಱ್ರಚನೆ ಕುರಿತಂತೆ ಚರ್ಚೆ ನಡೆಸಲಿದ್ದಾರೆ.

ದೆಹಲಿಯಲ್ಲಿ ಬೀಡು ಬಿಟ್ಟಿರುವ ಕಾಂಗ್ರೆಸ್ ನಾಯಕರು ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸಿದ್ದಾರೆ. ಕರ್ನಾಟಕ ಭವನ ಕಾಂಗ್ರೆಸ್ ನಾಯಕರಿಂದ ತುಂಬಿ ತುಳುಕುತ್ತಿದೆ. ಸಚಿವ ಸ್ಥಾನ ಕಳೆದುಕೊಳ್ಳುವವರು ಯಾರು? ಹಾಗೂ ಹೊಸದಾಗಿ ಸಂಪುಟ ಸೇರುವವಱ್ಯಾರು ಎಂಬ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ.

ಸಚಿವಾಕಾಂಕ್ಷಿಗಳಲ್ಲದೆ ಕೆಲ ಸಚಿವರು ದೆಹಲಿಗೆ ತೆರಳಿ ತಮ್ಮ `ಗಾಡ್ ಫಾದರ್’ಗಳ ಮನೆ ಬಾಗಿಲಿಗೆ ಎಡತಾಕುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಸಂಪುಟ ಪುನಾರಚನೆ ಖಚಿತ ಎಂಬುದು ಗೊತ್ತಾಗುತ್ತಿದ್ದಂತೆ ಆಕಾಂಕ್ಷಿಗಳಲ್ಲಿ ತಳಮಳ- ಕಳವಳ ಹೆಚ್ಚಾಗಿದೆ.

ನಾಳೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ಪಡೆಯಲಿದ್ದಾರೆ. ಸೋನಿಯಾ ಗಾಂಧಿ ಅವರ ಭೇಟಿ ಸಂದರ್ಭದಲ್ಲಿ ಒಪ್ಪಿಗೆ ದೊರೆತರೆ ಒಂದೆರೆಡು ದಿನಗಳಲ್ಲಿ ಸಚಿವ ಸಂಪುಟ ಪುನಾರಚನೆಗೆ ಮುಹೂರ್ತ ನಿಗದಿಯಾಗಲಿದೆ.

ಅದಕ್ಷರನ್ನು, ದೈಹಿಕ ಸಮಸ್ಯೆ ಹಾಗೂ ಪದೇ ಪದೇ ವಿವಾದಗಳಿಗೆ ಸಿಲುಕುವ ಸುಮಾರು ಡಜನ್‌ಗೂ ಹೆಚ್ಚು ಮಂತ್ರಿಗಳನ್ನು ಕೈಬಿಟ್ಟು ಆ ಸ್ಥಾನಗಳಿಗೆ ಹೊಸಬರನ್ನು ನೇಮಕ ಮಾಡಿಕೊಳ್ಳುವ ಮೂಲಕ ಸದೃಢ ಸಚಿವ ಸಂಪುಟ ರಚನೆಗೆ ಮುಖ್ಯಮಂತ್ರಿ ಮುಂದಾಗಿದ್ದು, ಸೋನಿಯಾ ಗಾಂಧಿ ಅವರ ಒಪ್ಪಿಗೆ ಮೇಲೆ ಪುನಾರಚನೆ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ಇಲ್ಲವಾದಲ್ಲಿ ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ.

ಜು. 4 ರಿಂದ ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಅದಕ್ಕೆ ಮುನ್ನವೇ ಸಂಪುಟ ಪುನಾರಚನೆ ಮಾಡಬೇಕೆಂಬುದು ಸಿದ್ದರಾಮಯ್ಯನವರ ಇಂಗಿತವಾಗಿದೆ. ಸರಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸಿದ್ದು, ಇನ್ನೆರೆಡು ವರ್ಷಗಳಲ್ಲಿ ಸರಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಸಂಪುಟ ಪುನಾರಚನೆಗೆ ಚಿಂತನೆ ನಡೆದಿದೆ.

ಸಂಪುಟದಿಂದ ಕೈಬಿಡುವ ಮತ್ತು ಸೇರ್ಪಡೆ ಮಾಡಿಕೊಳ್ಳುವ ಸಂಭವನೀಯರ ಪಟ್ಟಿಯೊಂದಿಗೆ ದೆಹಲಿಗೆ ತೆರಳಿರುವ ಮುಖ್ಯಮಂತ್ರಿ, ಪಟ್ಟಿಗೆ ಹೈಕಮಾಂಡ್ ಒಪ್ಪಿಗೆ ನೀಡಿದಲ್ಲಿ ಕಾಂಗ್ರೆಸ್ ಸರಕಾರದಲ್ಲಿ `ಹೊಸ ಪರ್ವ’ಕ್ಕೆ ನಾಂದಿಯಾಗಲಿದೆ.

ಜಾತಿವಾರು, ಪ್ರಾದೇಶಿಕವಾರು ಪಕ್ಷಕ್ಕೆ ನಿಷ್ಠಾವಂತರಾಗಿ ದುಡಿದವರು, ಅನುಭವಿಗಳು ಸೇರಿದಂತೆ ಯುವಕರಿಗೂ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಲು ಸಿದ್ದರಾಮಯ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಸಂಪುಟದಲ್ಲಿರುವ ಕೆಲವರನ್ನು ಕೈಬಿಟ್ಟರೆ ಅಸಮಾಧಾನ ಹೊರ ಹಾಕಲು ಅವಕಾಶ ನೀಡದಂತೆ ಎಲ್ಲರನ್ನು ಸಮಾಧಾನಪಡಿಸುವ ಪ್ರಯತ್ನಕ್ಕೆ ಅವರು ಮುಂದಾಗಿದ್ದಾರೆ.

ಸಂಪುಟ ಪುನಾರಚನೆಗೆ ಎಲ್ಲರ ಸಹಕಾರ ಅಗತ್ಯವನ್ನು ನಿನ್ನೆ ನಡೆದ ಮಂತ್ರಿ ಪರಿಷತ್ ಸಭೆಯಲ್ಲಿ ಒತ್ತಿ ಹೇಳಿದ್ದ ಮುಖ್ಯಮಂತ್ರಿ, ತಮ್ಮ ಮುಂದಿನ ಯೋಜನೆಯನ್ನು ಕಾರ್ಯರೂಪಕ್ಕಿಳಿಸಲು ಮುಂದಾಗಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಅವರು ದೆಹಲಿ ಪ್ರವಾಸ ಕೈಗೊಂಡಿದ್ದಾರೆ.

Comments are closed.