ನಿಮ್ಮದು ಧಾರಾಳ ಮನಸು ಇರಬಹುದು. ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಮನಸು ಸದಾ ತುಡಿಯಬಹುದು. ನೀವು ನಿತ್ಯವೂ ಸಮಾಜಸೇವೆ ಮಾಡಿ ಧನ್ಯತಾ ಭಾವ ಹೊಂದಬಹುದು. ಆದರೆ, ನೀವು ಕೆಲಸ ಮಾಡುವ ಕಂಪನಿಯಲ್ಲಿ ಇಂಥ ಉದಾರತನ ತೋರಿದರೆ ನಿಮ್ಮ ವೃತ್ತಿಯಲ್ಲಿ ಏಳಿಗೆಯಾಗದು, ಹುಷಾರ್..! ಈ ಮಾತನ್ನ ಯಾವುದೋ ಜ್ಯೋತಿಷಿ ಹೇಳುತ್ತಿಲ್ಲ. ಅಮೆರಿಕದ ಮಿಚಿಗನ್ ವಿವಿಯ ಸಂಶೋಧಕರು ಹಲವು ವರ್ಷಗಳ ಕಾಲ ಅಧ್ಯಯನ ಮಾಡಿ ಈ ವಿಷಯವನ್ನು ಪತ್ತೆಹಚ್ಚಿದ್ದಾರೆ.
ನೀವು ಮಾಡಿದ ಸಹಾಯ ಎಷ್ಟು ಉಪಯುಕ್ತವಾಗಿರುತ್ತದೆ ಎಂಬ ಬಗ್ಗೆ ಅನೇಕ ಸಮೀಕ್ಷೆಗಳು, ಅಧ್ಯಯನಗಳು ಬಂದಿವೆ. ಆದರೆ, ಸಹಾಯ ಮಾಡಿದವನಿಗೆ ಮಾನಸಿಕ ನೆಮ್ಮದಿ ಹೊರತಾಗಿ ಬೇರಿನ್ನಾವ ಲಾಭ ಸಿಗುತ್ತದೆ ಎಂಬ ಬಗ್ಗೆ ಅಧ್ಯಯನ ನಡೆದಿರುವುದು ಅಪರೂಪ.
“ಸಹವರ್ತಿಗಳಿಗೆ ನೆರವು ನೀಡುವುದು ಬಹಳ ತ್ರಾಸದ ಕೆಲಸವಾದೀತು.
ಉದಾರವಾಗಿ ಸಹಾಯ ಮಾಡುವ ಗುಣವಿರುವವರಿಗಂತೂ ಇದು ಅಕ್ಷರಶಃ ಅನ್ವಯಿಸುತ್ತದೆ… ಸಹಾಯ ಮಾಡುವುದರಲ್ಲೇ ತಮ್ಮ ಸಮಯ ವ್ಯಯವಾಗಿ ಹೋಗುತ್ತದೆ. ಇದರಿಂದ ಅವರ ವೃತ್ತಿಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ನಮ್ಮ ಕೆಲಸಗಳನ್ನು ಸರಿಯಾಗಿ ನಿಭಾಯಿಸಲು ಕಷ್ಟವಾಗುತ್ತದೆ. ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಬಳಲಿಹೋಗಿಬಿಡುವ ಅಪಾಯವುಂಟು” ಎಂದು ಮಿಶಿಗನ್ ಯೂನಿವರ್ಸಿಟಿಯ ಸಂಶೋಧಕ ರಸೆಲ್ ಜಾನ್ಸನ್ ಹೇಳುತ್ತಾರೆ.
ವಿವಿಧ ಉದ್ಯಮದಲ್ಲಿರುವ 68 ಉದ್ಯೋಗಿಗಳನ್ನು 15 ದಿನಗಳ ಕಾಲ ಅಧ್ಯಯನ ನಡೆಸಿ ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿ ಈ ವಿಚಾರವನ್ನು ವ್ಯಕ್ತ ಮಾಡಲಾಗಿದೆ.
ಏನು ಮಾಡಬೇಕು?
* ಸಹಾಯ ಮಾಡುವವರು ಹೆಚ್ಚು ಆಯಾಸವಾಗದಂತೆ ಆಗಾಗ ಕಿರುನಿದ್ರೆ, ವಾಕಿಂಗ್ ಮೊದಲಾದ ಚಟುವಟಿಕೆ ನಡೆಸಬೇಕು.
* ಧಾರಾಳವಾಗಿ ಸಹಾಯ ಮಾಡುತ್ತಾರೆಂದು ಮನಸಿಗೆ ಬಂದಂತೆ ನೆರವು ಯಾಚಿಸಬಾರದು.
* ಸಹಾಯ ಪಡೆದವರು ಧನ್ಯವಾದ ಹೇಳುವುದನ್ನು ಮರೆಯಬಾರದು. ಸಹಾಯ ಮಾಡಿದ್ದು ಎಲ್ಲರಿಗೂ ಗೊತ್ತಾಗುವಂತೆ ಮಾಡಬೇಕು.
(PTI)
Comments are closed.