
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನ ತೀರ್ಪುಗಾರರ ಸ್ಥಾನದಿಂದ ಕೈ ಬಿಟ್ಟಿರುವುದಕ್ಕೆ ನಟಿ ಹಾಗೂ ಬಾಲಭವನ ಅಧ್ಯಕ್ಷೆ ಭಾವನಾ ರಾಮಣ್ಣ ಬೇಸರ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಝಿ ವಾಹಿನಿಯ ನಾನ್ಫಿಕ್ಷನ್ ವಿಭಾಗದ ರಾಘವೇಂದ್ರ ಹುಣಸೂರು ಅವರು ನನ್ನನ್ನು ತೀರ್ಪುಗಾರರಾಗಿ ಬರುವಂತೆ ಒತ್ತಾಯಿಸಿದ್ದರು. ನಾನು ಕೆಲವು ಷರತ್ತುಗಳನ್ನು ವಿಧಿಸಿ ಒಪ್ಪಿಕೊಂಡಿದ್ದೆ. ಆದರೆ, ಅವರು ಹೇಳಿದಂತೆ ನಡೆದುಕೊಂಡಿಲ್ಲ ಎಂದು ದೂರಿದರು. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮಕ್ಕಳ ಕಾರ್ಯ ಕ್ರಮ ಆಗಿರಬಾರದು. ಕಾರ್ಯಕ್ರಮಕ್ಕೂ ಮೊದಲೇ ಸ್ಕ್ರಿಪ್ಟ್ ನೀಡಬೇಕು, ನಿಯಮ ಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಹೇಳಿದ್ದೆ. ಆದರೆ, ಅದೆಲ್ಲವೂ ಉಲ್ಲಂಘನೆಯಾಗಿದೆ.
ಮೊದಲ ಕಂತಿನಲ್ಲೇ ಬಹಳಷ್ಟು ಮಕ್ಕಳು ಭಾಗವಹಿಸಿದ್ದರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹೀಗೇ ಮಾತನಾಡಬೇಕು, ಅನಿಸಿಕೆಯನ್ನು ಹೀಗೇ ಹೇಳಬೇಕು ಎಂದು ಸ್ಪರ್ಧಿಗಳಿಗೆ ಒತ್ತಾಯಿಸುತ್ತಾರೆ. ತೀರ್ಪುಗಾರರನ್ನು ಸೆಟ್ಗೆ ಮೊದಲೇ ಬರಲು ಹೇಳಿ ಗಂಟೆಗಟ್ಟಲೆ ಕಾಯಿಸಿದ್ದಾರೆ. ಅಲ್ಲದೆ, ಬೆಳಗಿನ ಜಾವದವರೆಗೂ ಶೂಟಿಂಗ್ ಮಾಡುತ್ತಾರೆ. ಜತೆಗೆ ಅಪಾಯಕಾರಿ ಸ್ಟಂಟ್ಗಳಿಗೆ ತರಬೇತುದಾರರಿಗೆ ಕುಮ್ಮಕ್ಕು ನೀಡುತ್ತಾರೆ ಎಂದು ದೂರಿದರು.
ನಿರ್ದೇಶಕರಲ್ಲಿ ವೃತ್ತಿಪರತೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ ಭಾವನಾ, ನನಗೆ ಝಿ ವಾಹಿನಿಯ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯವಿದೆ. ಆದರೆ, ಈ ಕಾರ್ಯಕ್ರಮದ ಬಗ್ಗೆ ಮಾತ್ರ ನನ್ನ ಅಸಮಾಧಾನವಿದೆ ಎಂದು ಸ್ಪಷ್ಟಪಡಿಸಿದರು. ಕ್ಷುಲ್ಲಕ ಕಾರಣದಿಂದ ನನ್ನನ್ನು ಕಾರ್ಯಕ್ರಮದಿಂದ ಕೈ ಬಿಡಲಾಗಿದೆ. ಇದುವರೆಗೂ ಸಂಭವಾನೆಯನ್ನೂ ನೀಡಿಲ್ಲ. ಕಾರ್ಯಕ್ರಮಕ್ಕೂ ಮೊದಲು ಮಾಡಿಕೊಂಡಿದ್ದ ಒಪ್ಪಂದದ ಪ್ರತಿ ಕೂಡ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿ ನನ್ನ ಸಮಯ ವ್ಯರ್ಥವಾಗಿದ್ದು, ನನ್ನ ಕಾರ್ಯಕ್ರಮಗಳು ಹಾಳಾಗಿವೆ ಎಂದು ಹೇಳಿದರು. ಭಾವನಾ ಪರ ವಕೀಲ ರಾಜೇಶ್ ಮಾತನಾಡಿ, ಈ ರಿಯಾಲಿಟಿ ಶೋದಿಂದ ವಿನಾಕಾರಣ ಭಾವನಾ ಅವರನ್ನು ಕೈಬಿಡಲಾಗಿದೆ. ರಾಘವೇಂದ್ರ ಹುಣಸೂರು ಅವರಿಗೆ ನೋಟಿಸ್ ನೀಡಿ ಪೆನಾಲ್ಟಿ ಕೊಡುವಂತೆ ಒತ್ತಾಯಿಸಲಾಗುತ್ತದೆ ಎಂದು ಹೇಳಿದರು.
Comments are closed.