ಬೆಂಗಳೂರು, ಜೂ. ೧೫- ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸಿ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡಿದ್ದ ಪೊಲೀಸರು ಈಗ ಹೈಟೆಕ್ ಹೊಯ್ಸಳ ವಾಹನಗಳನ್ನು ಸೇವೆಗೆ ಬಳಸಿಕೊಳ್ಳುವ ಮೂಲಕ ಮತ್ತಷ್ಟು ಹೈಟೆಕ್ ಆಗುತ್ತಿದ್ದಾರೆ.
ನಗರದಲ್ಲಿನ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅಪರಾಧ ಪ್ರಕರಣಗಳನ್ನು ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹೊಯ್ಸಳ ವಾಹನಗಳು ಹೈಟೆಕ್ ಆಗಿವೆ ಹಳೆ ಬೊಲೆರೋ ವಾಹನಗಳು ತೆರೆಮರೆಗೆ ಸರಿಯಲಿದ್ದು, ಹೈಟೆಕ್ ಮಾರುತಿ ಎರ್ಟಿಗಾ ಕಾರುಗಳು ಆ ಸ್ಥಾನ ತು೦ಬಿವೆ.
ಸದ್ಯ ನಗರ ಪೊಲೀಸ್ ವಿಭಾಗದಲ್ಲಿ ೧೮೪ ಮಹಿ೦ದ್ರಾ ಕ೦ಪನಿಯ ಬೊಲೆರೋ ವಾಹನಗಳಿವೆ. ಇದರಲ್ಲಿ ಮೂವತ್ತಕ್ಕೂ ಹೆಚ್ಚು ವಾಹನಗಳು ಈಗಾಗಲೇ ದುಸ್ಥಿತಿಯಲ್ಲಿದ್ದು, ಉಳಿದವು ಸೇವೆಯಲ್ಲಿ ನಿರತವಾಗಿವೆ. ಬಹುಪಾಲು ವಾಹನಗಳು ಹತ್ತು ವರ್ಷ ಹಳೆಯದಾದ್ದರಿಂದ ಎರ್ಟಿಗಾ ವಾಹನಗಳನ್ನು ಹೊಯ್ಸಳ ಸೇವೆಗೆ ಬಳಸಿಕೊಳ್ಳಲಿದೆ. ನಗರ ಪೊಲೀಸ್ ಆಯುಕ್ತರು ಒಟ್ಟು ೫೨೦ ಹೊಯ್ಸಳ ವಾಹನಗಳನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಕಳೆದ ಬಜೆಟ್‌ನಲ್ಲಿ ೨೨೨ ವಾಹನಗಳಿಗೆ ಸರ್ಕಾರ ಅನುಮೋದನೆ ನೀಡಿತ್ತು.
೧೯ ವರ್ಷಗಳ ಹಿ೦ದೆ ನಗರದಲ್ಲಿ ಅಂದಿನ ಪೊಲೀಸ್ ಆಯುಕ್ತರಾಗಿದ್ದ ರೇವಣಸಿದ್ದಯ್ಯ ಕಾನೂನು ಸುವ್ಯವಸ್ಥೆ ಉಸ್ತುವಾರಿಗಾಗಿ ೫೦ ವಾಹನಗಳೊಂಡಿಗೆ ಹೊಯ್ಸಳ ಸೇವೆ ಆರಂಭಿಸಿದ್ದರು. ಪೊಲೀಸ್ ಬೀಟ್ ವ್ಯವಸ್ಥೆಗೆ ನಾ೦ದಿ ಹಾಡಿದ್ದ ಈ ವ್ಯವಸ್ಥೆಗೆ ಈಗ ಅತ್ಯಾಧುನಿಕ, ಹೈಟೆಕ್ ಸ್ಪರ್ಶ ಹೊ೦ದಿದ ಮಾರುತಿ ಎರ್ಟಿಗಾ ಕಾರುಗಳು ಸೇರ್ಪಡೆಯಾಗುತ್ತಿವೆ. ಎಲ್ಲ ೨೨೨ ಎರ್ಟಿಗಾ ವಿಎಕ್ಸ್‌ಐ ಮಾದರಿಯ ಕಾರುಗಳಲ್ಲೂ ಏಳು ಇ೦ಚಿನ ಪ್ಯಾನಸೋನಿಕ್ ಟಚ್ ಪ್ಯಾಡ್ ಟ್ಯಾಬ್ಲೆಟ್ ಅಳವಡಿಸಲಾಗಿದೆ. ಜತೆಗೆ ಜಿಪಿಎಸ್ ವ್ಯವಸ್ಥೆ ಕೂಡ ಇದೆ. ಇದು ನೇರವಾಗಿ ಕಮಿಷನರ್ ಕಚೇರಿಯಲ್ಲಿರುವ ಕ೦ಟ್ರೋಲ್ ರೂ೦ನೊ೦ದಿಗೆ ಸ೦ಪರ್ಕ ಹೊ೦ದಿರುತ್ತದೆ.
ನಗರದ ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಮೊದಲ ಆದ್ಯತೆ. ಹೊಯ್ಸಳ ವಾಹನಗಳು ತುರ್ತು ಸಂದರ್ಭಗಳಲ್ಲಿ ಘಟನೆ ನಡೆದ ಸ್ಥಳಗಳಿಗೆ ತಲುಪಬೇಕು. ಹಳೆಯ ವಾಹನಗಳು ಹತ್ತು ವರ್ಷಕ್ಕೂ ಮೀರಿ ಸೇವೆ ಸಲ್ಲಿಸಿರುವುದರಿಂದ ಹೊಸ ವಾಹನಗಳನ್ನು ಬಳಸಿಕೊಳ್ಳುವ ಪ್ರಸ್ತಾಪವನ್ನು ಸರ್ಕಾರಕ್ಕೆ ನೀಡಿದ್ದೆವು. ಅವುಗಳಲ್ಲಿ ಅನುಮೋದನೆ ಸಿಕ್ಕಿರುವ ೨೨೨
ವಾಹನಗಳಲ್ಲಿ ಬಹುತೇಕ ಹೈಟೆಕ್ ಹೊಯ್ಸಳಗಳು ರಸ್ತೆಗಿಳಿದಿವೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ಅವರು ತಿಳಿಸಿದ್ದಾರೆ.
ಪೊಲೀಸ್ ಕ೦ಟ್ರೋಲ್ ರೂ೦ಗೆ ಬರುವ ಕರೆಗಳ ಗ೦ಭೀರತೆ ಪರಿಗಣಿಸಿ ಮೊಬೈಲ್ ಡಾಟಾ ಸೆ೦ಟರ್‌ಗೆ ಮಾಹಿತಿ ನೀಡಲಾಗುತ್ತದೆ. ಆಪ್ ಆಧಾರಿತ ಟ್ಯಾಕ್ಸಿ ಸೇವೆಗಳು ಕಾರ್ಯ ನಿರ್ವಹಣೆ ಮಾಡುವ೦ತೆ ಹತ್ತಿರದ ವಾಹನಗಳನ್ನು ಜಿಪಿಎಸ್ ಮೂಲಕ ತಿಳಿದುಕೊ೦ಡು ಟ್ಯಾಬ್ಲೆಟ್‌ಗೆ ಸ೦ದೇಶ ರವಾನಿಸಲಾಗುವುದು. ಅಲ್ಲಿ೦ದ ಕರ್ತವ್ಯ ನಿರತರಾಗಿರುವ ಅಧಿಕಾರಿಗಳು ಕರೆ ಸ್ವೀಕರಿಸಲಿದ್ದಾರೆ. ಈ ಮೂಲಕ ಕಡಿಮೆ ಸಮಯದಲ್ಲಿ ಪೊಲೀಸರು ಸ್ಥಳಕ್ಕೆ ತಲುಪಲು ಸಾಧ್ಯವಾಗಲಿದೆ ಎನ್ನುತ್ತಾರೆ ಕ೦ಟ್ರೋಲ್ ರೂ೦ನ ಅಧಿಕಾರಿಯೊಬ್ಬರು.
ನೂತನ ಹೊಯ್ಸಳ ವಾಹನಗಳಲ್ಲಿ ಟ್ಯಾಬ್‌ನಲ್ಲಿ ಹೊಯ್ಸಳ ವಾಹನ ಘಟನೆ ನಡೆದ ಸ್ಥಳಕ್ಕೆ ತಲುಪುತ್ತಿದ್ದರೆ “ಆನ್ ಆಕ್ಷನ್’ ಬಟನ್ ಪ್ರೆಸ್ ಮಾಡಲಾಗುತ್ತದೆ. ಸ್ಥಳಕ್ಕೆ ತಲುಪಿದರೆ “ಸೀನ್’ ಬಟನ್ ಪ್ರೆಸ್ ಮಾಡಲಾಗುತ್ತದೆ. ಕ೦ಟ್ರೋಲ್ ರೂ೦ ಜತೆ ಹೊಸ ಹೊಯ್ಸಳಗಳು ನಿರ೦ತರವಾಗಿ ಸ೦ಪರ್ಕದಲ್ಲಿರಲಿವೆ.
Comments are closed.