ಬೆಂಗಳೂರು, ಜೂ. ೧೫- ಒಂದನೇ ತರಗತಿಯಿಂದ ನಾಲ್ಕನೇ ತರಗತಿವರೆಗೆ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲೇ ನೀಡುವ ಸಂಬಂಧ ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ನಿಯೋಗವೊಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡಲು ಇಂದಿಲ್ಲಿ ನಡೆದ ತಜ್ಞರ ಸಭೆಯಲ್ಲಿ ಒಕ್ಕೊರಲ ಕೂಗು ಕೇಳಿ ಬಂತು.
ಭಾಷಾ ಮಾಧ್ಯಮದ ಸುಪ್ರೀಂಕೋರ್ಟ್ನ ಇಬ್ಬರು ನ್ಯಾಯಾಧೀಶರ ಪೀಠ ನೀಡಿದ್ದ ಆದೇಶವನ್ನು ಐವರು ನ್ಯಾಯಾಧೀಶರ ಪೀಠ ಮಾಧ್ಯಮದ ಆಯ್ಕೆಯನ್ನು ಪೋಷಕರಿಗೆ ಬಿಡುವ ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಅದರ ಪುನರ್ ಪರಿಶೀಲನೆಗೆ ಅರ್ಜಿ ಸಲ್ಲಿಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುವುದು ಸೇರಿದಂತೆ ಹಲವು ಉಪಯುಕ್ತ ಸಲಹೆ ಸೂಚನೆಗಳು ವ್ಯಕ್ತವಾದವು.
ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿಂದು ಹಮ್ಮಿಕೊಂಡಿದ್ದ ಸರ್ವೋಚ್ಛ ನ್ಯಾಯಾಲಯ ನೀಡಿರುವ ಶಿಕ್ಷಣ ಮಾಧ್ಯಮ ತೀರ್ಪಿನ ಬಗ್ಗೆ ಮುಂದೆ ಕೈಗೊಳ್ಳಬೇಕಾದ ಕ್ರಮದ ಕುರಿತು ಚರ್ಚಾ ಸಭೆಯಲ್ಲಿ ಭಾಗವಹಿಸಿದ ನ್ಯಾಯಮೂರ್ತಿಗಳಾದ ಎಂ. ರಮಾ ಜೋಯಿಸ್, ಎ.ಜೆ. ಸದಾಶಿವ, ನಾಗಮೋಹನ್ ದಾಸ್, ನ್ಯಾಯವಾದಿ ಹೇಮಲತಾ ಮಹಿಷಿ, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ, ಪ್ರೊ. ಸಿದ್ದಲಿಂಗಯ್ಯ, ಮುಖ್ಯಮಂತ್ರಿ ಚಂದ್ರು, ಪ್ರೊ. ನಿರಂಜನ ಆರಾಧ್ಯ, ಮಾಜಿ ಸಚಿವರಾದ ಲೀಲಾದೇವಿ ಆರ್. ಪ್ರಸಾದ್, ಬಿ.ಟಿ. ಲಲಿತಾ ನಾಯಕ್ ಸೇರಿದಂತೆ ಹೋರಾಟಗಾರರು, ಕನ್ನಡ ಪರ ಚಿಂತಕರು ಸೇರಿದಂತೆ ಅನೇಕ ತಜ್ಞರು ಸಂವಿಧಾನದ ತಿದ್ದುಪಡಿಯ ಮೂಲಕ ಮಾತೃ ಭಾಷೆಯಲ್ಲೇ ಶಿಕ್ಷಣ ನೀಡುವಂತಾಗಲು, ಅಗತ್ಯವಿದ್ದರೆ ಜನಾಂದೋಲನವನ್ನು ರೂಪಿಸುವ ಬಗ್ಗೆ ಸಲಹೆ ಸೂಚನೆಗಳು ಕೇಳಿ ಬಂದವು.
ನ್ಯಾಯಮೂರ್ತಿ ರಮಾ ಜೋಯಿಸ್ ಮಾತನಾಡಿ, ಒಂದನೇ ತರಗತಿಯಿಂದ ನಾಲ್ಕನೇ ತರಗತಿವರೆಗೆ ಕಡ್ಡಾಯವಾಗಿ ಮಾತೃಭಾಷೆಯಲ್ಲೇ ಶಿಕ್ಷಣ ಇರಬೇಕು. ಆದರೆ ಇತ್ತೀಚಿನ ಹಣಬಲ, ಇಂಗ್ಲೀಷ್ ಶಾಲೆಗಳ ಹಠಮಾರಿತನ, ಆರ್ಥಿಕ ಬಲದಿಂದಾಗಿ ಇದು ಸಾಧ್ಯವಾಗುತ್ತಿಲ್ಲ. ಈ ಸಂಬಂಧ ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಒತ್ತಡೆ ಹೇರುವ ಜೊತೆಗೆ, ಈ ಮುಂಚೆ ಇಬ್ಬರು ನ್ಯಾಯಾಧೀಶರ ಪೀಠ ನೀಡಿದ್ದ ಆದೇಶವನ್ನೇ ಪುನಃ ಬರುವಂತೆ ನೋಡಿಕೊಳ್ಳಲು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಇದಕ್ಕೆ ಇತರ ನ್ಯಾಯಮೂರ್ತಿಗಳು ಕೂಡ ದನಿಗೂಡಿಸಿ ಸಂವಿಧಾನದ ತಿದ್ದುಪಡಿಯಾಗುವಂತೆ ನೋಡಿಕೊಳ್ಳುವ ಜೊತೆಗೆ ರಾಷ್ಟ್ರೀಯ ನೀತಿಯನ್ನು ತರುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು.
ರಾಜ್ಯದ ಕೇಂದ್ರ ಸಚಿವರು ಸಂಸದರ ಸಹಕಾರ ಪಡೆದು ಪ್ರಧಾನಿಗೆ ಮಾತೃಭಾಷೆಯ ಶಿಕ್ಷಣದ ಬಗ್ಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದು ಹೇಳಿದರು.
ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಮಾತನಾಡಿ, ಕನಿಷ್ಠ 10 ಮಕ್ಕಳು ಯಾವ ಭಾಷೆಯಲ್ಲಿ ಮಾತನಾಡುತ್ತಾರೋ ಆ ಭಾಷೆಯಲ್ಲೇ ಶಿಕ್ಷಣ ನೀಡುವಂತಾಗಬೇಕು ಎಂದರು.
ಬಿ.ಟಿ. ಲಲಿತಾ ನಾಯಕ್ ಮಾತನಾಡಿ, ರಾಜ್ಯದಲ್ಲಿ ಹಲವು ಉಪಭಾಷೆಗಳಿವೆ. ಹಾಗಾಗಿ ಒಬ್ಬೊಬ್ಬರದು ಒಂದೊಂದು ಮಾತೃಭಾಷೆ. ಮಾತೃಭಾಷೆಯ ಬದಲು ನಾಡಭಾಷೆ ಎಂದು ಬದಲಿಸಬೇಕು ಎಂದರು.
ಮುಖ್ಯಮಂತ್ರಿ ಚಂದ್ರು ಮಾತನಾಡಿ, ಸಂವಿಧಾನದ ತಿದ್ದುಪಡಿ ಸದ್ಯದ ಮಾರ್ಗ. ಇದಕ್ಕೆ ರಾಜಕಾರಣಿಗಳ ಇಚ್ಛಾಶಕ್ತಿ ಅಗತ್ಯವಿದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತ ರಾಜಜ್ಯಗಳು ಮಾತೃಭಾಷೆ ಉಳಿವಿಗೆ ಕೇಂದ್ರದ ಮೇಲೆ ಒತ್ತಡ ಹಾಕಬೇಕು. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಪುನರ್ ಪರಿಶೀಲಿಸುವ ಅರ್ಜಿ ಸಲ್ಲಿಸುವ ಅಗತ್ಯವಿದೆ ಎಂದರು.
ಸಂಶೋಧಕ ಚಿದಾನಂದಮೂರ್ತಿ ಮಾತನಾಡಿ, ಕಾನೂನು ವಿಷಯ ತಜ್ಞರು ಸೇರಿದಂತೆ ವಿವಿಧ ತಜ್ಞರ ಸಲಹಾ ಸಮಿತಿ ರಚಿಸಿ ಅವರ ಮಾರ್ಗದರ್ಶನದಂತೆ ಮುನ್ನಡೆಯುವ ಅಗತ್ಯವಿದೆ. ಪ್ರಧಾನಿ ನರೇಂದ್ರ ಮೋದಿಯ ಬಳಿಗೆ ನಿಯೋಗ ಕೊಂಡೊಯ್ದು ಮನವರಿಕೆ ಮಾಡಿಕೊಡಬೇಕೆಂದು ಹೇಳಿದರು.
ಪ್ರೊ. ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ಸರ್ಕಾರ ಪ್ರಾಥಮಿಕ ಶಾಲೆಗಳ ಬಗ್ಗೆ ತೋರಿರುವ ನಿರ್ಲಕ್ಷ್ಯವೇ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕೊ ಬೇಡವೋ ಎನ್ನುವ ಗೊಂದಲಕ್ಕೆ ಸಿಲುಕಿಸಿದ್ದಾರೆ. ಇದು ದೂರವಾಗಬೇಕಾದರೆ ಆಯಾ ರಾಜ್ಯದ ಸಾರ್ವಭೌಮ ಭಾಷೆಯಾದ ಮಾತೃಭಾಷೆಯಲ್ಲೇ ಮಕ್ಕಳಿಗೆ ಶಿಕ್ಷಣ ನೀಡುವಂತಾಗಬೇಕು ಎಂದರು.
ಹಿರಿಯ ನ್ಯಾಯವಾದಿ ಹೇಮಲತಾ ಮಹಿಷಿ, ರಾಷ್ಟ್ರಮಟ್ಟದಲ್ಲಿ ಏಕರೂಪದ ಭಾಷಾ ನೀತಿಯನ್ನು ರೂಪಿಸಬೇಕು. ನಮಗೂ ರಾಜಕೀಯ ಮಾಡಲು ಬರುತ್ತದೆ ಎನ್ನುವುದನ್ನು ತೋರಿಸಿಕೊಡಲು ರಾಜ್ಯ ಸರ್ಕಾರ ಹಾಗೂ ಜನಪ್ರತಿನಿಧಿಗಳು ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂದು ಹೇಳಿದರು.
ಪ್ರೊ. ಚಂದ್ರಶೇಖರ್ ಮಾತನಾಡಿ, ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯ ಕಾರಣ ಜನಶಕ್ತಿಯ ಬೆಂಬಲವೂ ಅಗತ್ಯವಿದೆ. ಕನ್ನಡಪರ ಹೋರಾಟಗಾರರು ಮಾತೃಭಾಷೆಯ ಶಿಕ್ಷಣದ ಕುರಿತು ಹೋರಾಟಕ್ಕೂ ಸಿದ್ಧ ಎಂದರು.
ಡಾ. ಎಲ್. ಹನುಮಂತಯ್ಯ ಮಾತನಾಡಿ, ಮುಂದಿನ ತಿಂಗಳ 2 ರಂದು ಶ್ರೇಷ್ಠ ಭಾಷಾ ತಜ್ಞರೊಂದಿಗೆ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಅಲ್ಲಿ ವ್ಯಕ್ತವಾಗುವ ಅಭಿಪ್ರಾಯವನ್ನು ಆಧರಿಸಿ ಕೇಂದ್ರ ಮೇಲೆ ಒತ್ತಡ ಹಾಕಲಾಗುವುದು ಎಂದು ಹೇಳಿದರು.
ಪ್ರೊ. ನಿರಂಜನಾರಾಧ್ಯ ಮಾತನಾಡಿ, ಸರ್ಕಾರಿ ಶಾಲೆಗಳು ಕಳಪೆ, ಖಾಸಗಿ ಶಾಲೆಗಳು ಸರ್ವಶ್ರೇಷ್ಠ, ಇಂಗ್ಲೀಷ್ ಶ್ರೇಷ್ಠ, ಉಳಿದ ಭಾಷೆಗಳು ಕನಿಷ್ಟ ಎನ್ನುವ ನೀತಿಯೇ ಇಂತಹದ್ದಕ್ಕೆ ಕಾರಣ. ಆಂಗ್ಲ ಶಾಲೆಗಳ ಯಜಮಾನಿಕೆಯಿಂದಾಗಿ ನ್ಯಾಯಾಲಯಗಳು ವ್ಯತಿರಿಕ್ತ ತೀರ್ಪು ನೀಡುತ್ತಿವೆ. ನ್ಯಾಯಾಧೀಶರು ಸಂಶೋಧನೆಯ ಬಗ್ಗೆ ಕನಿಷ್ಠ ಜ್ಞಾನವು ಇಲ್ಲ. ಸರ್ಕಾರಿ ಶಾಲೆಗಳ ಸ್ಥಿತಿಗೆ ಸರ್ಕಾರವೇ ಕಾರಣ ಎಂದು ಹೇಳಿದರು.
ಹಲವು ತಜ್ಞರು ಅಭಿಪ್ರಾಯಗಳನ್ನು ಹಂಚಿಕೊಂಡರು.
Comments are closed.