ಬೆಂಗಳೂರು, ಜೂ. ೧೫- ಜೆಡಿಎಸ್ ಪಕ್ಷದಲ್ಲಿ ಉಂಟಾಗಿರುವ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದ್ದು, ಪಕ್ಷದಿಂದ ಅಮಾನತ್ತಾಗಿರುವ 8 ಮಂದಿ ಬಂಡಾಯ ಶಾಸಕರು ತಮ್ಮ ತಾಕತ್ತನ್ನು ಪ್ರದರ್ಶಿಸಲು ಮುಂದಾಗಿದ್ದು, ಏಟಿಗೆ ಎದಿರೇಟು ಎಂಬಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರ ಸ್ವಕ್ಷೇತ್ರ ರಾಮನಗರದಲ್ಲೇ ಬೃಹತ್ ಕಾರ್ಯಕರ್ತರ ಸಮಾವೇಶವನ್ನು ನಡೆಸಲು ಮುಂದಾಗಿದ್ದಾರೆ.
ಪಕ್ಷಕ್ಕಾಗಿ ದುಡಿದ ತಮ್ಮ ವಿರುದ್ಧ ತಿಥಿ ಕಾರ್ಡ್ ಹಂಚಿ, ಪ್ರತಿಕೃತಿಗಳಿಗೆ ಚಪ್ಪಲಿ ಹಾರ ಹಾಕಿ ಕಾರ್ಯಕರ್ತರನ್ನು ಎತ್ತಿಕಟ್ಟಿ ಪ್ರತಿಭಟನೆ ನಡೆಸಲು ಕಾರಣರಾದ ವರಿಷ್ಠ ನಾಯಕರ ವಿರುದ್ಧ ಕೆಂಡಮಂಡಲವಾಗಿರುವ ಈ ಬಂಡಾಯ ಶಾಸಕರುಗಳು ಸಮಾವೇಶ ನಡೆಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಈ 8 ಮಂದಿ ಬಂಡಾಯ ಶಾಸಕರು ತಮ್ಮ ಶಕ್ತಿ ಪ್ರದರ್ಶನಕ್ಕೆ ಆಯ್ಕೆಮಾಡಿಕೊಂಡಿರುವುದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರ ಕ್ಷೇತ್ರವಾಗಿರುವ ರಾಮನಗರವನ್ನು ಸದ್ಯದಲ್ಲಿಯೇ ರಾಮನಗರದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಆಯೋಜಿಸಲು ಈ ಶಾಸಕರುಗಳು ತೀರ್ಮಾನಿಸಿದ್ದಾರೆ.
ಈ ಕಾರ್ಯಕರ್ತರ ಬೃಹತ್ ಸಮಾವೇಶದ ಮೂಲಕ ಜೆಡಿಎಸ್ ವರಿಷ್ಠರಿಗೆ ಉತ್ತರ ನೀಡಲು ಪಕ್ಷದಿಂದ ಅಮಾನತ್ತಾಗಿರುವ ಶಾಸಕರಾದ ಜಮೀರ್ ಅಹ್ಮದ್ ಖಾನ್, ಚೆಲುವರಾಯಸ್ವಾಮಿ, ಎಚ್.ಸಿ. ಬಾಲಕೃಷ್ಣ, ಗೋಪಾಲಯ್ಯ, ರಮೇಶ್ ಬಂಡಿ ಸಿದ್ದೇಗೌಡ, ಇಕ್ಬಾಲ್ ಅನ್ಸಾರಿ, ಅಖಂಡ ಶ್ರೀನಿವಾಸಮೂರ್ತಿ, ಭೀಮನಾಯಕ್ ಇವರುಗಳು ಸಿದ್ಧರಾಗಿದ್ದು, ಎಲ್ಲರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರ ಜೊತೆಗೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಸೇರಿದಂತೆ ವರಿಷ್ಠರ ವಿರುದ್ಧ ಸಿಡಿದೆದ್ದಿರುವ ಹಲವು ಮುಖಂಡರು ಕೈಜೋಡಿಸಿದ್ದಾರೆ.
ತಮ್ಮ ಮೇಲೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿರುವ ವರಿಷ್ಠ ನಾಯಕರ ಎಲ್ಲಾ ಹುಳುಕುಗಳನ್ನು ಈ ಶಾಸಕರುಗಳು ಈ ಸಮಾವೇಶದಲ್ಲಿ ಹೊರ ಹಾಕಲಿದ್ದಾರೆ.
ಪಕ್ಷದಿಂದ ಅಮಾನತ್ತು ಮಾಡಿರುವ ನಮ್ಮ ವಿರುದ್ಧ ಟೀಕೆಗಳನ್ನು ಮಾಡದೆ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ. ಇಲ್ಲದಿದ್ದರೆ ಎಲ್ಲಾ ಸತ್ಯಗಳನ್ನು ಹೇಳಬೇಕಾಗುತ್ತದೆ ಎಂದು ಎರಡು ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ಈ ಬಂಡಾಯ ಶಾಸಕರು ಜೆಡಿಎಸ್ ವರಿಷ್ಠರಿಗೆ ಎಚ್ಚರಿಕೆ ನೀಡಿದರು. ಆದರೂ ಜೆಡಿಎಸ್ ಪಕ್ಷದ ಕೆಲ ಮುಖಂಡರು ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವುದರಿಂದ ಆಕ್ರೋಶಗೊಂಡ ಈ ಶಾಸಕರುಗಳು ಕಾರ್ಯಕರ್ತರ ಸಮಾವೇಶದ ಮೂಲಕ ಈ ಎಲ್ಲಾ ಆರೋಪಗಳಿಗೆ ಉತ್ತರ ನೀಡಲು ಮುಂದಾಗಿದ್ದಾರೆ.
ಈ ಸಮಾವೇಶದಲ್ಲಿ ಪಕ್ಷದ ವರಿಷ್ಠ ನಾಯಕರಾದ ಮಾಜಿ ಪ್ರಧಾನಿ ದೇವೇಗೌಡ, ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಶಾಸಕ ಎಚ್.ಡಿ. ರೇವಣ್ಣ ಇವರುಗಳ ವಿರುದ್ಧ ಭಿನ್ನಮತೀಯರು ವಾಗ್ದಾಳಿ ನಡೆಸಿ ಕೆಲ ಸತ್ಯಗಳನ್ನು ಕಾರ್ಯಕರ್ತರಿಗೆ ತಿಳಿಸಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕಾರ್ಯಕ್ಷೇತ್ರದಲ್ಲಿ ನಡೆಯುತ್ತಿರುವ ಈ ಸಮಾವೇಶ ರಾಜಕೀಯವಾಗಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಮಂಡ್ಯ ಸಮಾವೇಶಕ್ಕೆ ಚೆಲುವರಾಯಸ್ವಾಮಿ ನೇತೃತ್ವ ವಹಿಸಲಿದ್ದು, ರಾಮನಗರದಲ್ಲಿ ನಡೆಯುವ ಸಮಾವೇಶಕ್ಕೆ ಬಾಲಕೃಷ್ಣ ನೇತೃತ್ವ ವಹಿಸಲಿದ್ದಾರೆ. ಇನ್ನು ಬೆಂಗಳೂರಿನಲ್ಲಿ ನಡೆಯುವ ಸಮಾವೇಶಕ್ಕೆ ಜಮೀರ್ ಅಹಮದ್ ಖಾನ್, ಗೋಪಾಲಯ್ಯ ಹಾಗೂ ಅಖಂಡ ಶ್ರೀನಿವಾಸಮೂರ್ತಿ ನೇತೃತ್ವ ವಹಿಸಲಿದ್ದಾರೆ ಎಂದು ಗೊತ್ತಾಗಿದೆ.
Comments are closed.