ಹೊಸದಿಲ್ಲಿ, ಜೂ.15: ದೇಶದ ಹಲವು ರಾಜ್ಯಗಳಲ್ಲಿ ಶಿಶುಮರಣ ಪ್ರಮಾಣ ನಿಧಾನವಾಗಿ ಕಡಿಮೆಯಾಗುತ್ತಿದ್ದರೂ, ಕೆಲ ರಾಜ್ಯಗಳಲ್ಲಿ ಆತಂಕಕಾರಿ ಸನ್ನಿವೇಶ ಮುಂದುವರಿದಿರುವುದು ಜನಗಣತಿ ಇಲಾಖೆ ಬಿಡುಗಡೆ ಮಾಡಿದ ಅಂಕಿ ಅಂಶಗಳಿಂದ ವ್ಯಕ್ತವಾಗಿದೆ.
ವಾರ್ಷಿಕ ಸ್ಯಾಂಪಲ್ ಸರ್ವೇ ಮಾಹಿತಿಯನ್ನು ಆಧರಿಸಿದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲಾಗಿದ್ದು, ಇದರ ಪ್ರಕಾರ, ಕೆಲ ತೀರಾ ಹಿಂದುಳಿದ ರಾಜ್ಯಗಳಾದ ಸಿಕ್ಕಿಂ, ಜಾರ್ಖಂಡ್, ಛತ್ತೀಸ್ಗಢ, ಶಿಶುಮರಣ ಪ್ರಮಾಣ ಕಡಿಮೆ ಮಾಡುವಲ್ಲಿ ಗಣನೀಯ ಸಾಧನೆ ಮಾಡಿವೆ. ಆದರೆ ಮಧ್ಯಪ್ರದೇಶ, ಗುಜರಾತ್, ಒಡಿಶಾ, ರಾಜಸ್ಥಾನ ಹಾಗೂ ಉತ್ತರಾಖಂಡದಲ್ಲಿ ಆತಂಕಕಾರಿ ಪರಿಸ್ಥಿತಿ ಇದೆ.
ಜನಾರೋಗ್ಯ ಹಾಗೂ ಆರೋಗ್ಯ ಸೇವೆ ವ್ಯವಸ್ಥೆಯ ದಕ್ಷತೆಯನ್ನು ಅಳೆಯುವಲ್ಲಿ ಶಿಶುಮರಣ ಪ್ರಮಾಣ ಪ್ರಮುಖ ಮಾನದಂಡವಾಗಿದೆ. ಸುಸಜ್ಜಿತ ಹೆರಿಗೆ ಕೊಠಡಿಗಳು ಇಲ್ಲದಿರುವುದು ಮತ್ತು ವೈದ್ಯರು ಇಲ್ಲದಿರುವುದು ಅಥವಾ ತಾಯಿ ಹಾಗೂ ಮಗು ದುರ್ಬಲವಾಗಿರುವುದು ಶಿಶುಮರಣಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.
ಆದರೆ 36 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ ಕೇವಲ 23 ರಾಜ್ಯಗಳ ಮಾಹಿತಿ ಬಿಡುಗಡೆ ಮಾಡಲಾಗಿದೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಹಾಗೂ ದಕ್ಷಿಣ ರಾಜ್ಯಗಳ ಮಾಹಿತಿ ಇಲ್ಲ. ಈ ರಾಜ್ಯಗಳ ಮಾಹಿತಿ ಇನ್ನೂ ಬರಬೇಕಿದೆ ಎಂದು ಉಪ ಪ್ರಧಾನ ರಿಜಿಸ್ಟ್ರಾರ್ ರೋಹಿತ್ ಭಾರಧ್ವಜ್ ಹೇಳಿದರು.
ರಾಜಸ್ಥಾನ ಹಾಗೂ ಬಿಹಾರದ ಗ್ರಾಮೀಣ ಪ್ರದೇಶಗಳಲ್ಲಿ ಶಿಶುಮರಣ ಪ್ರಮಾಣ ಹೆಚ್ಚುತ್ತಿದ್ದರೆ, ಗುಜರಾತ್ ಹಾಗೂ ಮಧ್ಯಪ್ರದೇಶದಲ್ಲಿ ಕಳೆದ ವರ್ಷದ ಚಿತ್ರಣ ಬದಲಾಗಿಲ್ಲ. ಗುಜರಾತ್, ಜಾರ್ಖಂಡ್ ಹಾಗೂ ರಾಜಸ್ಥಾನ ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣುಶಿಶುಗಳ ಮರಣ ಪ್ರಮಾಣ ಆತಂಕಕಾರಿಯಾಗಿ ಹೆಚ್ಚುತ್ತಿದೆ.
Comments are closed.