ಯಶ್ ಈಗ ಕೆಜಿಎಫ್ನತ್ತ ಮುಖ ಮಾಡಿದ್ದಾರೆ! ಅರೇ, ಕೆಜಿಎಫ್ ಕಡೆ ಯಾಕೆ ಹೊರಟ್ರಾ ಅನ್ನೋ ಗೊಂದಲ ಬೇಡ. ಈಗಾಗಲೇ “ಕೆಜಿಎಫ್’ ಬಗ್ಗೆ ಗೊತ್ತೇ ಇದೆ. ಇದು ಯಶ್ ಅಭಿನಯದ ಸಿನಿಮಾ. ಈ ಚಿತ್ರದ ಟೈಟಲ್ ಬಗ್ಗೆ ಗೊತ್ತಾಗುತ್ತಿದ್ದಂತೆಯೇ ಎಲ್ಲರಿಗೂ ಕುತೂಹಲ ಮೂಡಿದ್ದು ಸುಳ್ಳಲ್ಲ. “ಕೆಜಿಎಫ್’ ಬಗ್ಗೆ ಒಂದಷ್ಟು ನಿರೀಕ್ಷೆ ಹೆಚ್ಚಿದ್ದು ನಿಜಾನೇ. ಚಿತ್ರ ಯಾವಾಗ ಸೆಟ್ಟೇರುತ್ತೆ ಎಂಬ ಬಗ್ಗೆ ಗಾಂಧಿನಗರದಲ್ಲಿ ಹಲವು ಪ್ರಶ್ನೆಗಳು ಹರಿದಾಡುತ್ತಿದ್ದವು. ಈಗ ಚಿತ್ರಕ್ಕೆ ಮುಹೂರ್ತ ನೆರವೇರಿದೆ.
ಜೂನ್ 9 ರಂದು ಚಿತ್ರಕ್ಕೆ ಮಹಾಲಕ್ಷ್ಮೀ ಬಡಾವಣೆಯಲ್ಲಿರುವ ಪಂಚಮುಖೀ ಗಣೇಶ ಸನ್ನಿಧಿಯಲ್ಲಿ ಮುಹೂರ್ತ ನಡೆದಿದೆ. ಅಂದಹಾಗೆ, “ಕೆಜಿಎಫ್’ ಮೇಲೆ ನಿರೀಕ್ಷೆ ಯಾಕೆಂದರೆ, ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶಕರು. “ಉಗ್ರಂ’ ನಂತರ ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಕೈ ಹಾಕಿದ್ದಾರೆ. ಒಂದು ಕಡೆ ಯಶ್ ಹೀರೋ, ಇನ್ನೊಂದು ಕಡೆ ಪ್ರಶಾಂತ್ ನೀಲ್ ನಿರ್ದೇಶಕರು. ಇಬ್ಬರೂ ಯಶಸ್ಸು ಕಂಡವರು. ಅಷ್ಟೇ ಅಲ್ಲ, ಈ ಚಿತ್ರದ ನಿರ್ಮಾಪಕರು ಸಹ ಸಕ್ಸಸ್ ಕಂಡವರು. ಯಶ್ ಅಭಿನಯದಲ್ಲಿ ಮೂಡಿಬಂದ “ಮಾಸ್ಟರ್‌ಪೀಸ್’ ನಿರ್ಮಿಸಿದ್ದ ವಿಜಯ್ ಕಿರಗಂದೂರು ಅವರೇ ತಮ್ಮ ಹೊಂಬಾಳೆ ಫಿಲಮ್ಸ್ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಲ್ಲಿಗೆ ಸಕ್ಸಸ್ ಟೀಮ್, ಮತ್ತೂಂದು ಗೆಲುವಿನ ಚಿತ್ರ ಕೊಡೋಕೆ ಸಜ್ಜಾಗಿದೆ. ಸದ್ಯಕ್ಕೆ ಸರಳವಾಗಿ ಮುಹೂರ್ತ ನಡೆದಿದೆ.
ಇನ್ನೇನಿದ್ದರೂ, ಅದ್ಧೂರಿಯಾಗಿ ಚಿತ್ರೀಕರಣಗೊಳ್ಳಬೇಕಿದೆ. ಮುಹೂರ್ತ ಸಂದರ್ಭದಲ್ಲಿ ನಾಯಕ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು, ಸಂಗೀತ ನಿರ್ದೇಶಕ ರವಿ ಬಸ್ರೂರ್ ಸೇರಿದಂತೆ ಚಿತ್ರತಂಡದ ಬಹುತೇಕ ಸದಸ್ಯರು ಹಾಜರಿದ್ದರು. ಈ ಚಿತ್ರಕ್ಕೆ ಭುವನ್‌ಗೌಡ ಕ್ಯಾಮೆರಾ ಹಿಡಿಯುತ್ತಿದ್ದಾರೆ. ರವಿ ಸಂತೇಹಕ್ಲು ಮತ್ತು ಸುರೇಶ್ ದೊಡ್ಡಮನಿ ಕಲಾನಿರ್ದೇಶನವಿದೆ. ರವಿವರ್ಮ ಚಿತ್ರಕ್ಕೆ ಸ್ಟಂಟ್ ಮಾಡಲಿದ್ದಾರೆ.
-ಉದಯವಾಣಿ
Comments are closed.