ಮೊನ್ನೆ ಮೊನ್ನೆಯಷ್ಟೇ ಅನಂತ್ನಾಗ್ ಅವರು, “45 ವರ್ಷದ ಬಳಿಕ ಕನಸಿನ ಪಾತ್ರವೊಂದರಲ್ಲಿ ನಟಿಸುವ ಆಸೆ ಈಡೇರಿತು’ ಅಂತ “ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ಪಾತ್ರ ಕುರಿತು ಹೇಳಿಕೊಂಡಿದ್ದರು. ಈಗ ಹಿರಿಯ ನಟ ಸುಂದರ್ರಾಜ್ ಅವರ ಸರದಿ. ಹೌದು, ಸುಂದರ್ರಾಜ್ 42 ವರ್ಷದ ನಂತರ ಚಿತ್ರವೊಂದರಲ್ಲಿ ಕಥಾನಾಯಕನಾಗಿ ನಟಿಸುವ ಆಸೆ ಈಡೇರಿಸಿಕೊಂಡಿದ್ದಾರೆ! ಅದು “ಲಿಫ್ಟ್ಮ್ಯಾನ್’ ಚಿತ್ರದ ಮೂಲಕ. ಈ ಚಿತ್ರಕ್ಕೆ ಕಾರಂಜಿ ಶ್ರೀಧರ್ ನಿರ್ದೇಶಕರು. ಇಡೀ ಚಿತ್ರ ಸುಂದರ್ರಾಜ್ ಅವರ ಸುತ್ತವೇ ಸಾಗುತ್ತದೆ. ಆ ಚಿತ್ರದ ಹೈಲೈಟ್ ಕೂಡ ಸುಂದರ್ರಾಜ್ ಎಂಬುದು ಕಾರಂಜಿ ಶ್ರೀಧರ್ ಮಾತು. ಅಂದಹಾಗೆ, ಇದು ಚಂದ್ರ ಬಾಕೂìರ್ ಅವರ “ಲಿಫ್ಟ್ಮ್ಯಾನ್’ ಕಾದಂಬರಿ ಆಧರಿತ ಚಿತ್ರ. ವಿಶೇಷವೆಂದರೆ, “ಲಿಫ್ಟ್ಮ್ಯಾನ್’ ಸುಂದರ್ರಾಜ್ ಅವರ 200 ನೇ ಚಿತ್ರ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಜುಲೈನಲ್ಲಿ ತೆರೆಗೆ ಬರಲು ಸಜ್ಜಾಗಿದೆ.
“ಲಿಫ್ಟ್ ಮ್ಯಾನ್’ ಬಗ್ಗೆ “ಉದಯವಾಣಿ’ ಜತೆ ಮಾತನಾಡಿದ ನಿರ್ದೇಶಕ ಕಾರಂಜಿ ಶ್ರೀಧರ್, “ಕಳೆದ ನವೆಂಬರ್ನಲ್ಲಿ ಚಿತ್ರ ಶುರುವಾಗಿ ಡಿಸೆಂಬರ್ ಹೊತ್ತಿಗೆ ಮುಕ್ತಾಯವಾಗಿತ್ತು. ಈಗ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ. ಇದೊಂದು ಲಿಫ್ಟ್ ಆಪರೇಟರ್ ಕಥೆ. ವಿಧಾನಸೌಧದಲ್ಲಿ ಕಾವೇರಪ್ಪ ಎಂಬಾತ ಲಿಫ್ಟ್ ಆಪರೇಟರ್ ಆಗಿ ಕಳೆದ ಎರಡು ದಶಕಗಳಿಂದಲೂ ಕೆಲಸ ಮಾಡುತ್ತಿದ್ದಾರೆ. ಆತನ ಬಗ್ಗೆ ಚಂದ್ರ ಬಾಕೂìರ್ “ಲಿಫ್ಟ್ ಮ್ಯಾನ್’ ಕುರಿತ ಕಾದಂಬರಿ ಬರೆದರು. ಅದೇ ಈಗ “ಲಿಫ್ಟ್ಮ್ಯಾನ್’ ಹೆಸರಲ್ಲಿ ಚಿತ್ರವಾಗಿದೆ’ ಎಂದರು ನಿರ್ದೇಶಕ ಶ್ರೀಧರ್.
ಕಾವೇರಪ್ಪ ಇಪ್ಪತ್ತು ವರ್ಷದಿಂದಲೂ ಒಂದೇ ಲಿಫ್ಟ್ನಲ್ಲಿ ಕೆಲಸ ಮಾಡುತ್ತಿರುವುದರಿಂದ ಸಾಕಷ್ಟು ಮಿನಿಸ್ಟರ್ಗಳು, ಅಧಿಕಾರಿಗಳನ್ನೆಲ್ಲಾ ನೋಡಿದ್ದಾರೆ. ಅವರ ಬಗ್ಗೆ ತಿಳಿದುಕೊಂಡಿದ್ದಾರೆ. ಆದರೆ, ಆತನ ಬಗ್ಗೆ ಅಲ್ಲಿ ಬರೋರ್ಯಾರೂ ತಿಳಿದುಕೊಂಡಿಲ್ಲ. ಅಂತಹ ಅಪರೂಪದ ವ್ಯಕ್ತಿಯ ಹಿಂದಿನ ಕಥೆಯೇ ಚಿತ್ರವಾಗಿದೆ. ಆ ಪಾತ್ರಕ್ಕೆ ಸುಂದರ್ರಾಜ್ ಅವರೇ ಸೂಕ್ತವೆನಿಸಿದ್ದರಿಂದ ಅವರನ್ನು ಆಯ್ಕೆ ಮಾಡಲಾಯಿತು. ಆದರೆ, ಅವರಿಗೆ ಇದು 200 ನೇ ಚಿತ್ರ ಎಂಬುದನ್ನು ಕೇಳಿ ಖುಷಿಯಾಯ್ತು. ಅವರ 42 ವರ್ಷಗಳ ವೃತ್ತಿ ಜೀವನದಲ್ಲಿ ಕಥಾನಾಯಕನಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಅವರಿಗೂ ಹೆಮ್ಮೆ ಇದೆ ಎಂಬುದು ಶ್ರೀಧರ್ ಮಾತು.
ಇದು ಸಂಪೂರ್ಣ ಲಿಫ್ಟ್ನಲ್ಲೇ ನಡೆಯುವ ಕಥೆಯಾಗಿರುವುದರಿಂದ ಕನಕಪುರ ಬಳಿ ಇರುವ ಸ್ಟುಡಿಯೋದಲ್ಲಿ ಲಿಫ್ಟ್ ಸೆಟ್ ಹಾಕಿ ಚಿತ್ರೀಕರಿಸಲಾಗಿದೆ. ಇಲ್ಲಿ ಎಲ್ಲೂ ವಿಧಾನಸೌಧ ತೋರಿಸಿಲ್ಲ. ಆದರೆ, ಸರ್ಕಾರಿ ಕಚೇರಿ ಎಂಬ ಬಿಲ್ಡಿಂಗ್ ತೋರಿಸಿ, ಅಲ್ಲಿ ಲಿಫ್ಟ್ಮ್ಯಾನ್ ಆಗಿ ಕೆಲಸ ನಿರ್ವಹಿಸುವ ಪಾತ್ರವನ್ನು ಚಿತ್ರಿಸಲಾಗಿದೆ. ಮೂರು ಹೊತ್ತು ಲಿಫ್ಟ್ನಲ್ಲೇ ಕಾಲ ಕಳೆಯೋ, ವ್ಯಕ್ತಿಯ ಬದುಕು, ಬವಣೆ, ತಳಮಳ, ತಲ್ಲಣ ಹಾಗು ಫ್ಯಾಮಿಲಿ ಜತೆಯಲ್ಲಿ ಕಾಲ ಕಳೆಯಲಾಗದೆ ಒದ್ದಾಡುವ ಮನಸ್ಥಿತಿ ಚಿತ್ರದಲ್ಲಿ ಅಡಕವಾಗಿದೆ. ಆ ಲಿಫ್ಟ್ಮ್ಯಾನ್ಗೆ ಲಿಫೆrà ಪ್ರಪಂಚ. ಅದನ್ನು ಬಿಟ್ಟರೆ ಹೊರಗಿನ ಪ್ರಪಂಚ ಗೊತ್ತಿಲ್ಲ. ಅಂತಹ ವ್ಯಕ್ತಿಯನ್ನು ಕುರಿತು ಮಾಡಿರುವ ಚಿತ್ರವಿದು. ಇಲ್ಲಿ ಸುಂದರ್ರಾಜ್ಗೆ ಮೂರು ಶೇಡ್ಸ್ ಇದೆ. ಚಿತ್ರದಲ್ಲಿ ಸುರೇಶ್ ಹೆಬ್ಳೀಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರೆ, ಶೀತಲ್ಶೆಟ್ಟಿ ಕೂಡ ಇಲ್ಲಿ ಸುದ್ದಿ ವಾಚಕಿಯಾಗಿ ನಟಿಸಿದ್ದಾರೆ’ ಎಂದು ವಿವರ ಕೊಡುತ್ತಾರೆ ಶ್ರೀಧರ್.
ಸುಮಾರು 20 ದಿನಗಳ ಕಾಲ ಚಿತ್ರೀಕರಣಗೊಂಡಿರುವ ಈ ಚಿತ್ರಕ್ಕೆ ನಾಣಿ ಕ್ಯಾಮೆರಾ ಹಿಡಿದಿದ್ದಾರೆ. ಪ್ರವೀಣ್ ಗೋಡ್ಖಿಂಡಿ ಸಂಗೀತ ನೀಡಿದ್ದಾರೆ.
-ಉದಯವಾಣಿ
Comments are closed.