ಕರಾವಳಿ

ಕಪ್ಪು ಹಣ ನಿಯತ್ರಣ ಕಾಯ್ದೆ ಜ್ಯಾರಿ – ವಿದೇಶಕ್ಕೆ ದನದ ಮಾಂಸ ರಫ್ತು ನಿಷೇಧ : ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌

Pinterest LinkedIn Tumblr

Nirmala_Mnister_1

ಮಂಗಳೂರು : ವಿದೇಶಿ ಬ್ಯಾಂಕ್‌ಗಳಲ್ಲಿ ಇರಿಸಿದ ಕಪ್ಪು ಹಣವನ್ನು ತಡೆಯಲು ಕೇಂದ್ರ ಸರಕಾರ ಬಹು ಆಯಾಮಗಳ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದೆ. ಇದಕ್ಕಾಗಿ ನೂತನ ಕಪ್ಪು ಹಣ ನಿಯಂತ್ರಣ ಕಾಯ್ದೆಯನ್ನು ರೂಪಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಖಾತೆ ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರು ತಿಳಿಸಿದ್ದಾರೆ.

ಬುಧವಾರ ಮಂಗಳೂರಿನ ಪ್ರತಿಷ್ಠಿತ ಹೊಟೇಲೊಂದರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ವಿದೇಶಿ ಬ್ಯಾಂಕ್‌ಗಳಲ್ಲಿ ಇರಿಸಿದ ಕಪ್ಪು ಹಣ ತರಿಸುವುದು ಅಷ್ಟೊಂದು ಸುಲಭದ ಮಾತಲ್ಲ. ವಿಶೇಷ ತನಿಖಾ ತಂಡದ ಹಲವಾರು ಶಿಫಾರಸುಗಳನ್ನು ಜಾರಿಗೊಳಿಸಲಾಗಿದೆ.ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಹೇಳಿದರು.

Nirmala_Mnister_2

ಕಪ್ಪು ಹಣ ನಿಯಂತ್ರಣ ಕಾಯ್ದೆಯನ್ನು ರೂಪಿಸಲಾಗಿದೆ ಜೊತೆಗೆ ಮಾರಿಷಸ್‌ ತೆರಿಗೆ ಒಪ್ಪಂದದಲ್ಲಿ ದಶಕಗಳಿಂದ ಇದ್ದ ಲೋಪದೋಷಗಳನ್ನು ಯಶಸ್ವೀ ಮಾತುಕತೆಯ ಮೂಲಕ ಬಗೆಹರಿಸಲಾಗಿದೆ. 2 ಲಕ್ಷ ರೂ. ಗಳಿಗಿಂತ ಹೆಚ್ಚಿನ ಮೊತ್ತದ ಎಲ್ಲ ವ್ಯವಹಾರಗಳಿಗೆ ಪಾನ್‌ ಕಾರ್ಡ್‌ ಕಡ್ಡಾಯಗೊಳಿಸಲಾಗಿದೆ. ಬೆಲೆ ಬಾಳುವ ಕಾರುಗಳಿಗೆ ಸ್ಥಳದಲ್ಲಿಯೇ ತೆರಿಗೆ ಸಂಗ್ರಹಿಸಲಾಗುತ್ತಿದೆ. ದೇಶೀಯ ಕಪ್ಪು ಹಣಕ್ಕೆ ಸಂಬಂಧಿಸಿ ಹೊಸ ಆದಾಯ ಘೋಷಣೆ ಯೋಜನೆ ಜಾರಿಗೆ ತರಲಾಗಿದೆ ಎಂದು ವಿವರಿಸಿದರು.

ಸುಧಾರಿತ ಅನುಷ್ಠಾನ ಕ್ರಮಗಳಿಂದಾಗಿ ತೆರಿಗೆ ಪಾವತಿ ಮಾಡದೆ ತಪ್ಪಿಸಿಕೊಳ್ಳಲು ಯತ್ನಿಸಿದ 50,000 ಕೋಟಿ ರೂ. ಪರೋಕ್ಷ ತೆರಿಗೆ ಹಾಗೂ 21,000 ಕೋಟಿ ರೂ. ಅಪ್ರಕಟಿತ ಆದಾಯವನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ. ಅಕ್ರಮವಾಗಿ ಸಾಗಿಸಲು ಯತ್ನಿಸಿದ 3,963 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ಕಳೆದ ಎರಡು ವರ್ಷಗಳಲ್ಲಿ ವಶ ಪಡಿಸಿ ಕೊಳ್ಳಲಾಗಿದೆ. 1,466 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ ಎಂದರು.

Nirmala_Mnister_3

ಕೇಂದ್ರದ ಎನ್‌ಡಿಎ ಸರಕಾರವು ದೇಶದಲ್ಲಿ ಕಳೆದ 60 ವರ್ಷಗಳಿಂದಿದ್ದ ವ್ಯವಸ್ಥೆಯನ್ನು ಬದಲಾಯಿಸಿ, ನೂತನ ವ್ಯವಸ್ಥೆಯನ್ನು ರೂಪುಗೊಳಿಸಲು ಪ್ರಯತ್ನಿಸುತ್ತಿದೆ. ಇಡೀ ಜಗತ್ತು ಭಾರತದತ್ತ ನೋಡುತ್ತಿದೆ. ತನ್ನ ಯಾವುದೇ ಯೋಜನೆಯಲ್ಲಿ ಇತರರಿಗೆ ಮಧ್ಯಪ್ರವೇಶಕ್ಕೆ ಅವಕಾಶ ನೀಡದೆ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ದೇಶಕ್ಕೆ ಎನ್‌ಎಸ್‌ಜಿ ಸದಸ್ಯತ್ವ ನೀಡಲು ಇತರ ದೇಶಗಳು ಬೆಂಬಲ ಸೂಚಿಸಿವೆ ಹಾಗೂ ಇಲ್ಲಿಯವರೆಗೆ ದೇಶದಲ್ಲಿ ಹೂಡಿಕೆ ಮಾಡಲು ಮುಂದೆ ಬಾರದಂಥ ದೇಶಗಳು ಕೂಡ ಪ್ರಸ್ತುತ ಭಾರತಧಿದಲ್ಲಿ 25 ವಿವಿಧ ಕ್ಷೇತ್ರದಲ್ಲಿ “ಮೇಕ್‌ ಇನ್‌ ಇಂಡಿಯಾ’ ಯೋಜನೆಯಡಿ ಹೂಡಿಕೆ ಮಾಡಲು ಮುಂದೆ ಬರುತ್ತಿವೆ. ಇದರಿಂದ ಎಫ್‌ಡಿಎ ಶೇ. 42ರಷ್ಟು ಹೆಚ್ಚಾಗಿದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು.

Nirmala_Mnister_4

ಮೋದಿ ನೇತೃತ್ವದ ಎನ್‌ಡಿಎ ಸರಕಾರವು ಹಲವಾರು ಪ್ರಥಮಗಳ ಸರಕಾರವಾಗಿದೆ. ಬಡವರಿಗೆ ಹೊಗೆ ರಹಿತ ಜೀವನಕ್ಕಾಗಿ ಪ್ರಧಾನ ಮಂತ್ರಿ ಉಜ್ವಲ್‌ ಯೋಜನೆ ಯಡಿ 5 ಕೋಟಿ ಬಿಪಿಎಲ್‌ ಕುಟುಂಬಗಳಿಗೆ (ಮಹಿಳೆಯರ ಹೆಸರಿನಲ್ಲಿ) ಗ್ಯಾಸ್‌ ಸಂಪರ್ಕ, ಬಡವರಿಗೆ ಆರೋಗ್ಯ ವಿಮೆ, ಬ್ಯಾಂಕ್‌ ಖಾತೆ ಇಲ್ಲದವರಿಗೆ ಬ್ಯಾಂಕ್‌ ಖಾತೆ; ಸಾಮಾಜಿಕ ಸುರಕ್ಷೆ ಒದಗಿಸುವ ಪಿಎಂಎಸ್‌ಬಿವೈ, ಪಿಎಂಜೆಜೆಬಿವೈ, ಎಪಿವೈ ಎಂಬ ಮೂರು ಯೋಜನೆಗಳು (ಈ ಯೋಜನೆಗಳ ಮೂಲಕ 12 ಕೋಟಿ ಜನರಿಗೆ ಸಾಮಾಜಿಕ ಸುರಕ್ಷೆ), ಎಲ್‌ಪಿಜಿ, ಎಂಜಿಎನ್‌ಆರ್‌ಇಜಿಎಸ್‌ ಮತ್ತು ಇತರ ಯೋಜನೆಗಳಿಗೆ ಸಂಬಂಧಿಸಿ 61,822 ಕೋಟಿ ರೂ. ಸಬ್ಸಿಡಿ ನೇರ ವರ್ಗಾವಣೆ, 3 ಕೋಟಿ ಸಣ್ಣ ಉದ್ದಿಮೆದಾರರಿಗೆ ಸಾಲ ವಿತರಣೆ, ಸ್ವತ್ಛ ಭಾರತ ಅಭಿಯಾನ ಯೋಜನೆ ಜಾರಿ ಮತ್ತು ಈ ಮೂಲಕ ದೇಶದಲ್ಲಿ ಅಲ್ಪಾವಧಿಯಲ್ಲಿಯೇ 2.07 ಕೋಟಿ ಶೌಚಾಲಯ ನಿರ್ಮಾಣ, 4 ದಶಕಗಳಿಂದ ಬಾಕಿ ಇದ್ದ ಬಾಂಗ್ಲಾ ದೇಶ ಗಡಿ ಒಪ್ಪಂದದ ಅನುಷ್ಠಾನ, ವಿದ್ಯುತ್‌ ಸಂಪರ್ಕ ಇಲ್ಲದ 18,000 ಹಳ್ಳಿಗಳಿಗೆ 1,000 ದಿನಗಳಲ್ಲಿ ವಿದ್ಯುತ್‌ ಸಂಪರ್ಕ, ಸೈನಿಕರಿಗೆ ವನ್‌ ರ್‍ಯಾಂಕ್‌ ವನ್‌ ಪೆನ್ಶನ್‌, 4 ಲಕ್ಷ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ, ನೇತಾಜಿ ಸುಭಾಸ್‌ಚಂದ್ರ ಬೋಸ್‌ ಅವರಿಗೆ ಸಂಬಂಧಿಸಿದ ಕಡತಗಳ ಬಿಡುಗಡೆ- ಇವು ಈ ಸರಕಾರದ ಪ್ರಥಮಗಳು ಎಂದರು.

ಎನ್‌ಡಿಎ ಸರಕಾರವು ಸ್ಟಾರ್ಟ್‌ ಅಪ್‌ ಯೋಜನೆಗೆ ಕೂಡ ಪ್ರೋತ್ಸಾಹ ನೀಡುತ್ತಿದೆ. ದೇಶದ ಪ್ರಧಾನಿ ಸೈನಿಕರ ಜತೆ ದೀಪಾವಳಿ ಆಚರಿಸುವುದನ್ನು ನೋಡಿರಲಿಕ್ಕಿಲ್ಲ. ಆದರೆ, ಪ್ರಧಾನಿ ಮೋದಿಯವರು 2 ವರ್ಷವೂ ದೀಪಾವಳಿಯನ್ನು ಯೋಧರ ಜತೆಯೇ ಆಚರಿಸಿಕೊಂಡಿದ್ದಾರೆ. ವಿಶ್ರಾಂತಿಧಿಯನ್ನೇ ಪಡೆಯದೆ ವಿವಿಧ ದೇಶಗಳಿಗೆ ಪ್ರಧಾನಿ ಭೇಟಿ ನೀಡುತ್ತಿದ್ದು, ಇತರ ದೇಶಗಳು ಕೂಡ ತುಂಬಾ ಗಂಭೀರವಾಗಿ ಮಹತ್ವದ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿವೆ ಎಂದರು. ಗೋಡಂಬಿ, ಅಡಿಕೆ ಹಾಗೂ ರಬ್ಬರ್‌ ಕುರಿತು ಅಹವಾಲು ಸ್ವೀಕರಿಸಿದ ನಿರ್ಮಲಾ ಅವರು ಇವುಗಳ ಅಭಿವೃದ್ಧಿ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೀಫ್‌ ರಫ್ತು ನಿಷೇಧ :

ಕೇಂದ್ರ ಸರಕಾರವು ದನ ಹಾಗೂ ಕರುವಿನ ಮಾಂಸ ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ಉತ್ಪನ್ನಗಳನ್ನು ಹೊರದೇಶಕ್ಕೆ ರಫ್ತು ಮಾಡುತ್ತಿಲ್ಲ. ಅಂತಹವುಗಳನ್ನು ಸಂಪೂರ್ಣವಾಗಿ ನಿಷೇಧ ಮಾಡಿದೆ. ಭಾರತದ ಹಲವು ರಾಜ್ಯಗಳಲ್ಲಿ ದನದ ಕಸಾಯಿಖಾನೆಗಳನ್ನು ಮುಚ್ಚಸಲಾಗಿದ್ದು, ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಇನ್ನೂ ನಡೆಯುತ್ತಿವೆ. ಬೀಫ್‌ (ದನ ಅಥವಾ ಕರುವಿನ ಮಾಂಸ) ರಫ್ತು ಕುರಿತಂತೆ ಸರಕಾರದ ಕ್ರಮದ ಕುರಿತು ವಿಹಿಂಪದ ಮುಖಂಡ ಎಂ.ಬಿ. ಪುರಾಣಿಕ್‌ ಅವರು ಪ್ರಶ್ನಿಸಿದಾಗ, ಗೋ ರಕ್ಷಣೆಯು ಆಯಾಯ ರಾಜ್ಯ ಸರಕಾರಗಳಿಗೆ ಸಂಬಂಧ ಪಟ್ಟದ್ದು. ದನ ಹಾಗೂ ಕರುವಿನ ಮಾಂಸ ರಫ್ತು, ಇವುಗಳ ಮಾಂಸ ಹಾಗೂ ಇತರ ಭಾಗಗಳಿಂದ ತಯಾಧಿರಿಸಲಾಗುವ ಯಾವುದೇ ಉತ್ಪನ್ನಗಳನ್ನು ನಿರ್ಬಂಧಿಸಲಾಗಿದ್ದು, ರಫ್ತು ನಿಷೇಧಿಸಲಾಗಿದೆ ಎಂದರು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದ್ದು, ಅದರಿಂದಾಗಿ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ಆದರೆ ದರ ಇಳಿಕೆಯ ಪೂರ್ತಿ ಪ್ರಯೋಜನವನ್ನು ಗ್ರಾಹಕರಿಗೆ ಹಸ್ತಾಂತರಿಸಿಲ್ಲ; ಬದಲಾಗಿ ಇದರಿಂದ ಬರುವ ಹಣವನ್ನು ಸಾರಿಗೆ ಸಂಪರ್ಕ ಉತ್ತಮ ಪಡಿಸಲು ಮತ್ತು ಇತರ ಮೂಲ ಸೌಲಭ್ಯ ಸೃಷ್ಟಿಗೆ ವಿನಿಯೋಗಿಸಲಾಗುತ್ತಿದೆ ಎಂದು ತಿಳಿಸಿದರು.

ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿ ಈ ಹಿಂದಿನ ಕಾಂಗ್ರೆಸ್‌ ಹಣ ಒದಗಿಸುತ್ತಿತ್ತೇ ಹೊರತು ಕೆಲಸ ಮಾಡುತ್ತಿರಲಿಲ್ಲ. ಯುಪಿಎ ಸರಕಾರದ ಅವಧಿಯಲ್ಲಿ ಆರಂಭವಾಗಿ ಅರ್ಧದಲ್ಲಿರುವ ಹಲವಾರು ಯೋಜನೆಗಳನ್ನು ಎನ್‌ಡಿಎ ಸರಕಾರ ಸಮಸ್ಯೆಗಳಿಗೆ ಪರಿಹಾರ ಹುಡುಕಿ ಪೂರ್ತಿಗೊಳಿಸಿದೆ. ಕೆಲವು ಕಾಮಗಾರಿಗಳು ಕಾನೂನು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹರಿಭಾಯಿ ಚೌಧುರಿ, ರಾಷ್ಟ್ರೀಯ ಎಸ್‌ಸಿ ಮೋರ್ಚಾದ ಮಾಜಿ ಅಧ್ಯಕ್ಷ ದುಷ್ಯಂತ್‌ ಕುಮಾರ್‌ ಗೌತಮ್‌, ಸಂಸದ ನಳಿನ್‌ ಕುಮಾರ್‌ ಕಟೀಲು, ವಿಧಾನ ಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌, ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್‌ಸಿಂಹ ನಾಯಕ್‌, ರಾಷ್ಟ್ರೀಯ ಎಸ್‌ಸಿ ಮೋರ್ಚಾದ ಮಾಜಿ ಅಧ್ಯಕ್ಷ ದುಷ್ಯಂತ್‌ ಕುಮಾರ್‌ ಗೌತಮ್‌ ಮೊದಲಾದವರು ಉಪಸ್ಥಿತರಿದ್ದರು.

Comments are closed.