ಕರ್ನಾಟಕ

ಎತ್ತಿನಹೊಳೆ ಯೋಜನೆಗೆ ವಿರೋಧ, ಚಕಮಕಿ

Pinterest LinkedIn Tumblr

vishvaಬೆಂಗಳೂರು, ಜೂ. ೫ – ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದಲ್ಲಿ ಇಂದು ಆಯೋಜಿಸಿದ್ದ `ಮರಗಳ ಮಾರಣಹೋಮದ ಮೇಲೆ ಎತ್ತಿನ ಹೊಳೆ ಯೋಜನೆಯೇ?’ ಕುರಿತ ಛಾಯಾಚಿತ್ರ ಪ್ರದರ್ಶನ, ಮಾತಿನ ಚಕಮಕಿ, ವಾಗ್ವಾದಕ್ಕೆ ಕಾರಣವಾಯಿತು.
ಮರಗಳ ಮಾರಣಹೋಮದ ಮೇಲೆ ಎತ್ತಿನಹೊಳೆ ಜಾರಿ ಕುರಿತಂತೆ ಚಿತ್ರ ಪ್ರದರ್ಶನ ಆಯೋಜಿಸಿರುವುದು ಯೋಜನೆಯನ್ನು ವಿರೋಧಿಸುತ್ತಿರುವವರು ಮಾಡುತ್ತಿರುವ ಕುತಂತ್ರ. ಬಯಲುಸೀಮೆ ಭಾಗಗಳಿಗೆ ನೀರೊದಗಿಸುವ ಯೋಜನೆಯ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದೆ. ಈ ಯೋಜನೆ ಬರುವ ಮಾರ್ಗ ಮಧ್ಯದಲ್ಲಿ ಮರಗಳ ಮಾರಣಹೋಮ ಆಗಿಲ್ಲ ಎಂದು ನೀರಾವರಿ ತಜ್ಞ ಹಾಗೂ ಎತ್ತಿನಹೊಳೆ ಯೋಜನೆ ರೂವಾರಿಗಳಲ್ಲಿ ಒಬ್ಬರಾದ ನರಸಿಂಹಯ್ಯ ಛಾಯಾಚಿತ್ರ ಪ್ರದರ್ಶನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿ ಸುಧೀರ್ ಶೆಟ್ಟಿ, ಮರಗಳ ಮಾರಣಹೋಮ ಆಗಿದೆ ಎನ್ನುವುದಕ್ಕೆ ಇಲ್ಲಿರುವ ಛಾಯಾಚಿತ್ರಗಳೇ ಸಾಕ್ಷಿ ಎಂದು ಹೇಳಿದ್ದುದು ಇಬ್ಬರ ನಡುವೆ ಮಾತಿನ ಚಕಮಕಿ, ವಾಗ್ವಾದ, ಗದ್ದಲಕ್ಕೆ ವೇದಿಕೆಯಾಯಿತು.
ಎರಡು ದಿನಗಳ ಕಾಲ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಏರ್ಪಡಿಸಿ ಮರಗಳ ಮಾರಣಹೋಮದ ಮೇಲೆ ಎತ್ತಿನಹೊಳೆ ಯೋಜನೆ ಹಾಗೂ ಕರ್ನಾಟಕದ ಬರದ ಮೇಲೆ ಒಂದು ಕಣ್ಣೋಟ ಕುರಿತ ಛಾಯಾಚಿತ್ರ ಪ್ರದರ್ಶನದಲ್ಲಿ ಭಾಗವಹಿಸಿದ್ದ ನರಸಿಂಹಯ್ಯ, ಆಯೋಜಕರನ್ನು ತರಾಟೆಗೆ ತೆಗೆದುಕೊಂಡು ಇಂತಹ ಯೋಜನೆಯನ್ನು ವಿರೋಧಿಸುವ ಎಷ್ಟೇ ಷಡ್ಯಂತ್ರಗಳು ನಡೆದರೂ ಎತ್ತಿನಹೊಳೆ ಯೋಜನೆಯನ್ನು ಜಾರಿಯಾಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಗುಡುಗಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಯೋಜನೆಗೆ ಹಣ ನೀಡಿ ಕಾಮಗಾರಿಯನ್ನು ಆರಂಭಿಸಲಾಗಿದೆ. ಈ ವರ್ಷಾಂತ್ಯದೊಳಗೆ ಎತ್ತಿನ ಹೊಳೆಯನ್ನು ಕೋಲಾರ, ಚಿಕ್ಕಬಳ್ಳಾಪುರ ಭಾಗ ಜಿಲ್ಲೆಗಳಿಗೆ ನೀರೊದಗಿಸಲು ಕಾರ್ಯ ಆರಂಭವಾಗಲಿದೆ.
1-2 ವರ್ಷದಲ್ಲೇ ಈ ಭಾಗಗಳಿಗೆ ನೀರು ಬರವಿದೆ. ಇದನ್ನು ಯಾರಿಂದ ಎಷ್ಟೇ ವಿರೋಧವಾದರೂ ಯೋಜನೆ ಜಾರಿಯಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಎತ್ತಿನ ಹೊಳೆ ಯೋಜನೆಯಿಂದ ಕೋಲಾರ, ಚಿಕ್ಕಬಳ್ಳಾಪುರ ಭಾಗಗಳಿಗೆ ಕೇವಲ 24 ಟಿಎಂಸಿ ನೀರನ್ನು ಮಾತ್ರ ತರಲಾಗುತ್ತಿದೆ. ಆ ಭಾಗದಲ್ಲಿ 2400ಕ್ಕೂ ಹೆಚ್ಚು ಟಿಎಂಸಿ ನೀರು ಲಭ್ಯವಿದೆ. ಇದರಿಂದ ದಕ್ಷಿಣ ಕನ್ನಡ ಜನರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆಗಿದ್ದರೂ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸುವುದು ಸರಿಯಲ್ಲ ಎಂದು ಹೇಳಿದರು.
ಅಷ್ಟಕ್ಕೂ ಎತ್ತಿನಹೊಳೆ ಯೋಜನೆಯ ನೀರು ತರುತ್ತಿರುವುದು ಸಕಲೇಶಪುರದ ಕುಮಾರದಾರದ ಎತ್ತಿನಹೊಳೆ, ಕಾಡುಮನೆ, ಎಲೆಹಳ್ಳಗಳಿಂದಲೇ ಹೊರತು, ದಕ್ಷಿಣ ಕರ್ನಾಟಕದಿಂದಲ್ಲ ಎಂದು ಹೇಳಿದರು.
ಛಾಯಾಗ್ರಾಹಕ ಸುಧೀರ್ ಶೆಟ್ಟಿ ಮಾತನಾಡಿ, ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿ ಪರಿಸರದ ಬಗ್ಗೆ ಅರಿವು ಮೂಡಿಸಲಿಕ್ಕಾಗಿ, ಎತ್ತಿನಹೊಳೆ ಯೋಜನೆಯಲ್ಲಿ ಮರಗಳ ಮಾರಣಹೋಮವೇ ನಡೆಯುತ್ತಿವೆ. ಎತ್ತಿನಹೊಳೆ ಯೋಜನೆಯಲ್ಲಿ ಮರಗಳನ್ನು ಕಡಿದಿರುವ ಬಗ್ಗೆ ಖುದ್ದು ಛಾಯಾಚಿತ್ರಗಳನ್ನು ತೆಗೆದಿರುವುದಾಗಿ ಹೇಳಿದರು.

Comments are closed.