ಮನೋರಂಜನೆ

ನಾಕೌಟ್‌ ಆಸೆ ಜೀವಂತವಾಗಿರಿಸಿದ ಆರ್‌ಸಿಬಿ ! ಕೆಕೆಅರ್ ವಿರುದ್ಧ 9ವಿಕೆಟ್‌ಗಳ ಭರ್ಜರಿ ಗೆಲುವು; ಮತ್ತೆ ಮೋಡಿ ಮಾಡಿದ ಕೊಹ್ಲಿ, ಡಿವಿಲಿಯರ್ಸ್‌ ಜೋಡಿ

Pinterest LinkedIn Tumblr

abd-kohli

ಕೋಲ್ಕತ್ತ: ಕ್ರಿಸ್‌ ಗೇಲ್‌, ವಿರಾಟ್‌ ಕೊಹ್ಲಿ ಮತ್ತು ಡಿವಿಲಿ ಯರ್ಸ್‌ ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದಾಗಿ ಆರ್‌ಸಿಬಿ ತಂಡ ಕೋಲ್ಕತ್ತ ನೈಟ್‌ ರೈಡರ್ಸ್ ಎದುರಿನ ಐಪಿಎಲ್‌ ಪಂದ್ಯದಲ್ಲಿ ಒಂಬತ್ತು ವಿಕೆಟ್‌ಗಳ ಭರ್ಜರಿ ಗೆಲುವು ಪಡೆದಿದೆ.

ಇದರಿಂದ ಆರ್‌ಸಿಬಿ ತಂಡ ‘ಪ್ಲೇ ಆಫ್‌’ ಪ್ರವೇಶಿಸಲು ಇರುವ ಅವಕಾಶವನ್ನು ಹೆಚ್ಚಿಸಿಕೊಂಡಿದೆ. ಹಿಂದಿನ ಪಂದ್ಯದಲ್ಲಿ ಗುಜರಾತ್‌ ಲಯನ್ಸ್ ಮತ್ತು ಸೋಮವಾರ ರೈಡರ್ಸ್‌ ವಿರುದ್ಧ ಬೆಂಗಳೂರಿನ ತಂಡ ಉತ್ತಮ ರನ್‌ರೇಟ್‌ ಅಂತರದಿಂದ ಗೆಲುವು ಪಡೆದಿದ್ದು ಮುಂದಿನ ಸುತ್ತು ಅರ್ಹತೆ ಗಳಿಸಲು ನೆರವಾಗಲಿದೆ.

ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಟಾಸ್‌ ಗೆದ್ದ ಆರ್‌ಸಿಬಿ ನಾಯಕ ಕೊಹ್ಲಿ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡರು. ತವರಿನ ಅಂಗಳದಲ್ಲಿ ಮೊದಲು ಬ್ಯಾಟ್‌ ಮಾಡಲು ಸಿಕ್ಕ ಅವಕಾಶವನ್ನು ರೈಡರ್ಸ್‌ ಚೆನ್ನಾಗಿಯೇ ಬಳಸಿಕೊಂಡಿತು. ಗೌತಮ್‌ ಗಂಭೀರ್‌ ಸಾರಥ್ಯದ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 183ರನ್‌ ಪೇರಿಸಿತು.

ಬಲಿಷ್ಠ ಬ್ಯಾಟಿಂಗ್ ಹೊಂದಿರುವ ಆರ್‌ಸಿಬಿ ತಂಡ ಗುರಿ ಬೆನ್ನತ್ತಿ ಯಶಸ್ಸು ಪಡೆಯುವಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ರೈಡರ್ಸ್‌ ವಿರುದ್ಧ ಆಡಿದ ಅಮೋಘ ಆಟವೇ ಸಾಕ್ಷಿ. ಬೆಂಗಳೂರಿನ ತಂಡ 18.4 ಓವರ್‌ಗಳಲ್ಲಿ ಕ್ರಿಸ್‌ ಗೇಲ್‌ ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು.

ಉತ್ತಪ್ಪ ವೈಫಲ್ಯ: ರೈಡರ್ಸ್ ತಂಡ ರಾಬಿನ್‌ ಉತ್ತಪ್ಪ (2) ಅವರನ್ನು ಬೇಗನೆ ಕಳೆದುಕೊಂಡಿತು. ಕರ್ನಾಟಕದ ಉತ್ತಪ್ಪ, ಸ್ಪಿನ್ನರ್‌ ಇಕ್ಬಾಲ್‌ ಅಬ್ದುಲ್ಲಾ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಬಳಿಕ ಒಂದಾದ ಗಂಭೀರ್‌ (51; 34ಎ, 7ಬೌಂ) ಮತ್ತು ಮನೀಷ್‌ ಪಾಂಡೆ (50; 35ಎ, 5ಬೌಂ, 2ಸಿ) ಅಪೂರ್ವ ಇನಿಂಗ್ಸ್‌ ಕಟ್ಟಿದರು.

ಆರ್‌ಸಿಬಿ ಬೌಲರ್‌ಗಳನ್ನು ಮನ ಬಂದಂತೆ ದಂಡಿಸಿದ ಈ ಜೋಡಿ ಎರಡನೇ ವಿಕೆಟ್‌ಗೆ 49 ಎಸೆತಗಳಲ್ಲಿ 9.30ರ ಸರಾಸರಿಯಲ್ಲಿ 76ರನ್‌ ಪೇರಿಸಿ ತಂಡವನ್ನು ಆರಂಭಿಕ ಸಂಕಷ್ಟದಿಂದ ಪಾರು ಮಾಡಿತು. ಅಬ್ದುಲ್ಲಾ ಹಾಕಿದ 11ನೇ ಓವರ್‌ನ ಮೂರನೇ ಎಸೆತದಲ್ಲಿ ಗಂಭೀರ್‌ ರನ್‌ಔಟ್‌ ಆದರು. ಇದರೊಂದಿಗೆ ಸುಂದರ ಜತೆಯಾಟಕ್ಕೂ ತೆರೆಬಿತ್ತು. ಆದರೆ ಮನೀಷ್‌ ಛಲದ ಆಟ ಮುಂದುರಿಸಿದರು.

ಎಸ್‌.ಅರವಿಂದ್ ಬೌಲ್‌ ಮಾಡಿದ 14ನೇ ಓವರ್‌ನ ಮೊದಲ ಎಸೆತವನ್ನು ಪಾಯಿಂಟ್‌ನತ್ತ ಬೌಂಡರಿಗಟ್ಟಿದ ಮನೀಷ್‌, ಮರು ಎಸೆತದಲ್ಲಿ ಒಂದು ರನ್‌ ಗಳಿಸಿ ಅರ್ಧಶತಕ ಪೂರೈಸಿದರು. ಇದೇ ಓವರ್‌ನ ನಾಲ್ಕನೇ ಎಸೆತವನ್ನು ಪಾಂಡೆ ಆಫ್‌ಸೈಡ್‌ನತ್ತ ಸಿಕ್ಸರ್‌ಗಟ್ಟಲು ಮುಂದಾದರು. ಮುಗಿಲೆತ್ತರಕ್ಕೆ ಚಿಮ್ಮಿದ ಚೆಂಡನ್ನು ಡಿವಿಲಿಯರ್ಸ್ ಸುಲಭವಾಗಿ ಹಿಡಿತಕ್ಕೆ ಪಡೆದರು.

ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್‌ ಆ್ಯಂಡ್ರೆ ರಸೆಲ್‌, ಅಂತಿಮ ಓವರ್‌ಗಳಲ್ಲಿ ಅಬ್ಬರಿಸಿ ಅಭಿಮಾನಿಗಳ ಖುಷಿಗೆ ಕಾರಣರಾದರು. ಆರ್‌ಸಿಬಿ ಬೌಲರ್‌ಗಳ ಬೆವರಿಳಿಸಿದ ರಸೆಲ್‌ 19 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್‌ ಸಹಿತ 39 ರನ್‌ ಕಲೆಹಾಕಿ ಅಜೇಯವಾಗುಳಿದರು.

ಬ್ಯಾಟಿಂಗ್ ಮೋಡಿ: ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದ್ದ ಕೊಹ್ಲಿ ಮತ್ತು ಡಿವಿಲಿಯರ್ಸ್‌ ಅವರ ಅಮೋಘ ಬ್ಯಾಟಿಂಗ್ ಇಲ್ಲೂ ಮುಂದುವರಿಯಿತು. ಇದಕ್ಕೂ ಮೊದಲು ಅಭಿಮಾನಿಗಳಿಗೆ ಬ್ಯಾಟಿಂಗ್ ಸೊಬಗು ಉಣಬಡಿಸಿದ್ದು ಕೊಹ್ಲಿ ಮತ್ತು ಕ್ರಿಸ್‌ ಗೇಲ್‌ ಜುಗಲ್‌ಬಂದಿ.

ಹಿಂದಿನ ಪಂದ್ಯಗಳಲ್ಲಿ ನಿರಾಸೆ ಕಂಡಿದ್ದ ಗೇಲ್‌ ರೈಡರ್ಸ್‌ ಬೌಲರ್‌ಗಳಿಗೆ ಚಳ್ಳೆಹಣ್ಣು ತಿನ್ನಿಸಿದರು. ಕೇವಲ 31 ಎಸೆತಗಳಲ್ಲಿ ಐದು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ ಸೇರಿದಂತೆ 49 ರನ್ ಕಲೆ ಹಾಕಿದರು. ಕೊಹ್ಲಿ (ಔಟಾಗದೆ 75, 51 ಎಸೆತ, 5 ಬೌಂಡರಿ, 3 ಸಿಕ್ಸರ್‌) ಕೂಡ ಅಬ್ಬರ ಮುಂದುವರಿಸಿದರು.

ಈ ಜೋಡಿ ಮೊದಲ ವಿಕೆಟ್‌ಗೆ 71 ರನ್ ಕಲೆ ಹಾಕಿ ಜಯದ ಹಾದಿಯನ್ನು ಸುಲಭ ಮಾಡಿತ್ತು. ಇದಕ್ಕಾಗಿ ಇವರು ತೆಗೆದುಕೊಂಡಿದ್ದು 45 ಎಸೆತ! ವೇಗವಾಗಿ ರನ್ ಗಳಿಸುತ್ತಿದ್ದ ಗೇಲ್‌ ಸ್ಪಿನ್ನರ್‌ ಸುನಿಲ್‌ ನಾರಾಯಣ್‌ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ನಂತರ ಶುರುವಾಗಿದ್ದೇ ‘ಕೊಹ್ಲಿ–ಎಬಿಡಿ’ ಬ್ಯಾಟಿಂಗ್ ಮೋಡಿ.

ಎಂಟನೇ ಓವರ್‌ನಲ್ಲಿ ಒಂದಾದ ಈ ಜೋಡಿ ರೈಡರ್ಸ್‌ ಬೌಲರ್‌ಗಳಿಗೆ ಕಿಂಚಿತ್ತೂ ವಿಶ್ರಾಂತಿ ನೀಡಲಿಲ್ಲ. ಡಿವಿಲಿಯರ್ಸ್‌ (ಔಟಾಗದೆ 59, 31 ಎಸೆತ, 5 ಬೌಂಡರಿ, 3 ಸಿಕ್ಸರ್‌) ಕೊಹ್ಲಿ ಆಟಕ್ಕೆ ಉತ್ತಮ ಬೆಂಬಲ ನೀಡಿದರು. ಈ ಜೋಡಿ ಎರಡನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 115 ರನ್ ಕಲೆ ಹಾಕಿತು. ಆರ್‌ಸಿಬಿ ತಂಡ ಆರಂಭದಿಂದಲೇ ಉತ್ತಮ ರನ್‌ ರೇಟ್‌ ಕಾಪಾಡಿಕೊಂಡು ವೇಗವಾಗಿ ರನ್ ಕಲೆ ಹಾಕಿದ್ದರಿಂದ ಪಂದ್ಯ ಯಾವ ಹಂತದಲ್ಲಿಯೂ ಕುತೂಹಲ ಉಳಿಸಿಕೊಂಡಿರಲಿಲ್ಲ.

* 752 ಈ ಬಾರಿಯ ಟೂರ್ನಿಯಲ್ಲಿ ಕೊಹ್ಲಿ ಗಳಿಸಿದ ಒಟ್ಟುರನ್‌. ಐಪಿಎಲ್‌ನ ಮಟ್ಟಿಗೆ ಇದು ದಾಖಲೆ. 2012ರಲ್ಲಿ ಗೇಲ್‌ 733ರನ್‌ ಗಳಿಸಿದ್ದು ಹಿಂದಿನ ದಾಖಲೆಯಾಗಿತ್ತು.

* 05 9ನೇ ಆವೃತ್ತಿಯಲ್ಲಿ ಕೊಹ್ಲಿ–ಡಿವಿಲಿಯರ್ಸ್ ನಡುವೆ ಮೂಡಿ ಬಂದ ಶತಕದ ಜತೆಯಾಟ.

* 800 ಈ ಬಾರಿಯ ಟೂರ್ನಿಯಲ್ಲಿ ಕೊಹ್ಲಿ–ಡಿವಿಲಿಯರ್ಸ್‌ ಪೇರಿಸಿದ ಒಟ್ಟು ರನ್‌.

* 20 ಟ್ವೆಂಟಿ–20 ಯಲ್ಲಿ ಗಂಭೀರ್‌ ರನ್‌ಔಟ್‌ ಆಗಿದ್ದು.

* 58* ಆರನೇ ವಿಕೆಟ್‌ಗೆ ರಸೆಲ್‌ ಮತ್ತು ಶಕೀಬ್‌ ಅವರಿಂದ ಮೂಡಿಬಂದ ಜತೆಯಾಟ.

ಸ್ಕೋರ್‌ಕಾರ್ಡ್‌

ಕೋಲ್ಕತ್ತ ನೈಟ್‌ ರೈಡರ್ಸ್‌ 5ಕ್ಕೆ 183 (20 ಓವರ್‌ಗಳಲ್ಲಿ)
ರಾಬಿನ್‌ ಉತ್ತಪ್ಪ ಸಿ ಮತ್ತು ಬಿ ಇಕ್ಬಾಲ್‌ ಅಬ್ದುಲ್ಲಾ 02
ಗೌತಮ್‌ ಗಂಭೀರ್‌ ರನ್‌ಔಟ್‌ (ವ್ಯಾಟ್ಸನ್‌/ಇಕ್ಬಾಲ್‌ ಅಬ್ದುಲ್ಲಾ) 51
ಮನೀಷ್‌ ಪಾಂಡೆ ಸಿ ಡಿವಿಲಿಯರ್ಸ್‌ ಬಿ ಎಸ್‌.ಅರವಿಂದ್‌ 50
ಯೂಸುಫ್‌ ಪಠಾಣ್‌ ಸ್ಟಂಪ್ಡ್‌ ಕೆ.ಎಲ್‌.ರಾಹುಲ್‌ ಬಿ ಯಜುವೇಂದ್ರ ಚಾಹಲ್‌ 06
ಆ್ಯಂಡ್ರೆ ರಸೆಲ್‌ ಔಟಾಗದೆ 39
ಸೂರ್ಯಕುಮಾರ್‌ ಯಾದವ್‌ ಸಿ ಇಕ್ಬಾಲ್‌ ಅಬ್ದುಲ್ಲಾ ಬಿ ಎಸ್‌. ಅರವಿಂದ್‌ 05
ಶಕೀಬ್‌ ಅಲ್‌ ಹಸನ್‌ ಔಟಾಗದೆ 18

ಇತರೆ: (ಲೆಗ್‌ಬೈ 6, ವೈಡ್‌ 6) 12

ವಿಕೆಟ್‌ ಪತನ: 1–71 (7.3).

ಬೌಲಿಂಗ್‌: ಆ್ಯಂಡ್ರೆ ರಸೆಲ್‌ 2.3–0–32–0, ಮಾರ್ನೆ ಮಾರ್ಕೆಲ್‌ 2–0–20–0, ಸುನಿಲ್‌ ನಾರಾಯಣ 4–0–34–1, ಪಿಯೂಷ್‌ ಚಾವ್ಲಾ 3.1–0–32–0, ಅಂಕಿತ್‌ ರಜಪೂತ್‌ 3–0–28–0, ಶಕೀಬ್‌ ಅಲ್‌ ಹಸನ್‌ 4–0–39–0.

ಆರ್‌ಸಿಬಿ 1ಕ್ಕೆ 186 (18.4 ಓವರ್‌ಗಳಲ್ಲಿ)
ಕ್ರಿಸ್‌ ಗೇಲ್‌ ಎಲ್‌ಬಿಡಬ್ಲ್ಯು ಬಿ ಸುನಿಲ್‌ ನಾರಾಯಣ 49
ವಿರಾಟ್‌ ಕೊಹ್ಲಿ ಔಟಾಗದೆ 75
ಎಬಿ ಡಿವಿಲಿಯರ್ಸ್ ಔಟಾಗದೆ 59

ಇತರೆ: (ಲೆಗ್‌ ಬೈ 1, ವೈಡ್‌ 1, ನೋಬಾಲ್‌ 1) 03

ವಿಕೆಟ್‌ ಪತನ: 1–14 (ಉತ್ತಪ್ಪ; 2.2), 2–90 (ಗಂಭೀರ್‌; 10.3), 3–113 (ಮನೀಷ್‌; 13.4), 4–118 (ಪಠಾಣ್‌; 14.1), 5–125 (ಸೂರ್ಯಕುಮಾರ್‌; 15.2).

ಬೌಲಿಂಗ್‌: ಸ್ಟುವರ್ಟ್‌ ಬಿನ್ನಿ 1–0–8–0, ಎಸ್‌.ಅರವಿಂದ್‌ 4–0–41–2, ಇಕ್ಬಾಲ್‌ ಅಬ್ದುಲ್ಲಾ 4–0–22–1, ಶೇನ್‌ ವ್ಯಾಟ್ಸನ್‌ 4–0–46–0, ಯಜುವೇಂದ್ರ ಚಾಹಲ್‌ 4–0–38–1, ಕ್ರಿಸ್‌ ಜೋರ್ಡಾನ್‌ 3–0–22–0.

ಫಲಿತಾಂಶ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ 9 ವಿಕೆಟ್‌ ಗೆಲುವು.

ಪಂದ್ಯಶ್ರೇಷ್ಠ: ವಿರಾಟ್‌ ಕೊಹ್ಲಿ

Write A Comment