
ಮುಂಬೈ: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಸದ್ಯ ಐಪಿಎಲ್ ನಲ್ಲಿ ಮಿಂಚು ಹರಿಸುತ್ತಿರುವ ವಿರಾಟ್ ಕೊಹ್ಲಿ ಸರ್ವ ಶ್ರೇಷ್ಠ ಆಟಗಾರ ಎಂದು ನ್ಯೂಜಿಲೆಂಡ್ ತಂಡದ ನಾಯಕ ಮತ್ತು ಸನ್ ರೈಸರ್ಸ್ ಹೈದರಾಬಾದ್ ಸ್ಟಾರ್ ಬ್ಯಾಟ್ಸ್ ಮನ್ ಕೇನ್ ವಿಲಿಯಮನ್ಸ್ ಹೇಳಿದ್ದಾರೆ.
ಕೆಲ ತಿಂಗಳುಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ರಾಷ್ಟ್ರೀಯ ಹಾಗೂ ಐಪಿಎಲ್ ನಲ್ಲಿ ಭರ್ಜರಿ ಫಾರ್ಮ್ ನಲ್ಲಿದ್ದು, ರನ್ ಹೊಳೆ ಹರಿಸುತ್ತಿದ್ದಾರೆ. ಕ್ರಿಕೆಟ್ ನಲ್ಲಿ ಅವರೊಬ್ಬ ಶ್ರೇಷ್ಠ ಆಟಗಾರ , ವೈಯುಕ್ತಿಕವಾಗಿ ನನಗೆ ಆತ ಅಚ್ಚುಮೆಚ್ಚು ಎಂದು ಕೇನ್ ವಿಲಿಯಮನ್ಸ್ ಹೇಳಿದ್ದಾರೆ.
ದೆಹಲಿ ಮೂಲದ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ನಡೆದ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಇದೀಗ ಐಪಿಎಲ್ ಸರಣಿಯೊಂದರಲ್ಲಿ ಮೂರು ಶತಕ ಸಿಡಿಸಿ ವಿಶ್ವದಾಖಲೆ ಮಾಡಿದ್ದಾರೆ. ಜತೆಗೆ ಐಪಿಎಲ್ 9ನೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸರದಾರನಾಗಿದ್ದಾರೆ ಎಂದು ವಿಲಿಯಮನ್ಸ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಗುಜರಾತ್ ಲಯನ್ಸ್ ವಿರುದ್ಧ ಮೊದಲ ಶತಕ(ಅಜೇಯ 100) ಸಿಡಿಸಿದ್ದರು. ನಂತರ ರೈಸಿಂಗ್ ಪುಣೆ ವಿರುದ್ಧ ಅಜೇಯ 108 ರನ್ ಗಳಿಸಿದ್ದು, ಇದೀಗ ಮತ್ತೆ ಗುಜರಾತ್ ವಿರುದ್ಧ 109 ರನ್ ಗಳಿಸಿ ಸರಣಿಯೊಂದರಲ್ಲೇ ಮೂರು ಶತಕ ಸಿಡಿಸಿ ಅಗ್ರಮಾನ್ಯ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.