
ಬೆಂಗಳೂರು: ಶೇಕಡ ೧೦ರಷ್ಟು ರಿಯಾಯಿತಿ ದರದೊಂದಿಗೆ ೧೫ಕ್ಕೂ ಹೆಚ್ಚು ವಿವಿಧ ತಳಿಯ ಮಾವು ಮತ್ತು ಹಲಸಿನ ಮೇಳ ಇಂದಿನಿಂದ ಒಂದು ತಿಂಗಳ ಕಾಲ ನಗರದ ಹಡ್ಸನ್ ವೃತ್ತದ ಹಾಪ್ಕಾಮ್ಸ್ ಮಾರಾಟ ಮಳಿಗೆಯಲ್ಲಿ ಆರಂಭವಾಗಿದೆ.
ಕಾರ್ಬೈಡ್ ಇಲ್ಲದ ಆರೋಗ್ಯಕರವಾದ ೧೫ಕ್ಕೂ ಹೆಚ್ಚು ಬಗೆಯ ಬಾದಾಮಿ, ಆಲ್ಫೈನ್ಸೊ, ಮಲಗೋವಾ, ರಸಪುರಿ, ಬೈಗನ್ಪಲ್ಲಿ, ತೋತಾಪುರಿ, ಸಕ್ಕರೆ ಗುತ್ತಿ, ಮಲ್ಲಿಕಾ ಒಳಗೊಂಡಂತೆ ವಿವಿಧ ತಳಿಯ ಮಾವಿನ ಹಣ್ಣುಗಳು ಮಾರಾಟವಾಗಲಿದೆ.
ಮೂರು ಮತ್ತು ಐದು ಕೆಜಿಯ ಬಾಕ್ಸ್ಗಳಲ್ಲಿ ಮಾರಾಟಕ್ಕೆ ಸಿಗಲಿದೆ. ಬೈರಸಂದ್ರ ಹಲಸು, ಜಾಣಗೆರೆ, ಗಂಲೆಸ್, ತೂಬಿಗೆರೆ, ಚಂದ್ರ ಹಲಸು ಸೇರಿದಂತೆ ವಿವಿಧ ಬಗೆಯ ಹಲಸಿನ ಹಣ್ಣುಗಳು ದೊರಯಲಿವೆ.
ಹಾಪ್ಕಾಮ್ಸ್ ಮಾರಾಟ ಮಳಿಗೆಯ ಆವರಣದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಾವು ಮತ್ತು ಹಲಸಿನ ಮೇಳಕ್ಕೆ ಇಂದು ಚಾಲನೆ ನೀಡಿದರು.
ಜಗತ್ತಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು, ದೇಶದಲ್ಲಿ ೬೦೦ಕ್ಕೂ ಹೆಚ್ಚು ಮಾವಿನ ಹಣ್ಣುಗಳ ತಳಿಗಳಿವೆ. ಆದರೆ ಜನತೆಗೆ ಗೊತ್ತಿರುವುದೆ ೧೫ ಬಗೆಯ ಮಾವಿನ ಹಣ್ಣುಗಳು ಮಾತ್ರ. ಈ ಹಣ್ಣನ್ನು ಎಷ್ಟು ತಿಂದರೂ ಬೇಸರವಾಗದು ಎಂದು ಹೇಳಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ಹಾಪ್ಕಾಮ್ಸ್ನ ಅಧ್ಯಕ್ಷ ಜಿ.ಆರ್. ಶ್ರೀನಿವಾಸ್ ಅವರು ಮಾತನಾಡಿ, ಮಧ್ಯವರ್ತಿಗಳ ಕಾಟವನ್ನು ತಪ್ಪಿಸಿ ಶೇಕಡ ೧೦ ರಷ್ಟು ರಿಯಾಯಿತಿ ದರದಲ್ಲಿ ನೇರವಾಗಿ ಗ್ರಾಹಕರಿಗೆ ಮಾವಿನ ಹಣ್ಣು ಮತ್ತು ಹಲಸು ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.
ರೈತರಿಂದ ಯಾವುದೇ ಕಮೀಷನ್ ಪಡೆಯುವುದಿಲ್ಲ. ಹಾಗಾಗಿ ಅವರಿಗೆ ಲಾಭವಾಗುವಷ್ಟು ಬೆಲೆ ಸಿಗುತ್ತದೆ ಎಂದು ಹೇಳಿದರು.
ವ್ಯವಸ್ಥಾಪಕ ನಿರ್ದೇಶಕ ಡಾ. ಬೆಳ್ಳೂರು ಕೃಷ್ಣ ಅವರು, ಕಳೆದ ವರ್ಷ ೭೬೦ ಟನ್ ಹಣ್ಣುಗಳನ್ನು ಮಾರಾಟ ಮಾಡಲಾಗಿತ್ತು. ಈ ಬಾರಿ ೧ ಸಾವಿರ ಮೆಟ್ರಿಕ್ ಟನ್ ಮಾವು ಹಾಗೂ ೧೦೦ ಮೆಟ್ರಿಕ್ ಟನ್ ಹಲಸಿನ ಹಣ್ಣುಗಳನ್ನು ಮಾರಾಟ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಆರ್. ವಸಂತಕುಮಾರ್, ಉಪಾಧ್ಯಕ್ಷ ಡಿ. ಮುನೇಗೌಡ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಉಪಸ್ಥಿತರಿದ್ದರು.