ಬೆಂಗಳೂರು : ದ್ವಿತೀಯ ಪಿಯು ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಪ್ರಮುಖ ಆರೋಪಿಯನ್ನು ಸಿಐಡಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿ ಪ್ರಕರಣದ ಕಿಂಗ್‌ಪಿನ್ ಶಿವಕುಮಾರಯ್ಯ ಅಲಿಯಾಸ್ ಟೊಮ್ಯಟೋ ಗುರೂಜಿ ನಿಕಟವರ್ತಿ ತುಮಕೂರಿನ ಮಲ್ಲಯ್ಯ ಎನ್ನುವವನಾಗಿದ್ದಾನೆ.
ಮಲ್ಲಯ್ಯ ತಂದೆ ಹಿರೇಮಲ್ಲಯ್ಯ ಕೂಡ ಪೇಪರ್ ಲೀಕ್ ಪ್ರಕರಣದ ಆರೋಪಿಯಾಗಿದ್ದು, 2012 ರಲ್ಲಿ ಶಿವಕುಮಾರಯ್ಯ ಜೊತೆ ಸೇರಿಕೊಂಡು ಪೇಪರ್ ಲೀಕ್ ಮಾಡಿದ್ದ ಎಂದು ತಿಳಿದು ಬಂದಿದೆ.
ಸದ್ಯ ಕಿಂಗ್ ಪಿನ್ ಶಿವಕುಮಾರಯ್ಯ ಸಿಐಡಿ ವಶದಲ್ಲಿದ್ದು ಆತನನ್ನು ತೀವ್ರವಾಗಿ ವಿಚಾರಣೆ ನಡೆಸಲಾಗುತ್ತಿದೆ. ಆತನ ಗುಂಪಿನ ಇತರ ಆರೋಪಿಗಳಿಗಾಗಿ ಸಿಐಡಿ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.
ಶಿವಕುಮಾರಯ್ಯನ ಸಹೋದರನ ಪುತ್ರ ಕುಮಾರಸ್ವಾಮಿ ಅಲಿಯಾಸ್ ಕಿರಣ್ ಎಂಬಾತ ಸಿಐಡಿ ಬಲೆಗೆ ಬಿದ್ದ ಬೆನ್ನಲ್ಲೇ ಇದೀಗ ಪ್ರಶ್ನೆ ಪತ್ರಿಕೆ ಸೋರಿಕೆಯ ಮೂಲ ಕೇಂದ್ರ ಹಾವೇರಿಯ ಹಾನಗಲ್ ಟ್ರಜರಿ ಎನ್ನುವ ವಿಚಾರಬಹಿರಂಗವಾಗಿತ್ತು.
ಹಾನಗಲ್ ಟ್ರಜರಿಯಲ್ಲಿ ಎಸ್ ಡಿಎ ಸಂತೋಷ್ ಎಂಬಾತ ಪ್ರಶ್ನೆ ಪತ್ರಿಕೆಯನ್ನು ಸೀಲ್ಡ್ ಲಕೋಟೆಯಿಂದ ಕದ್ದು, ಅದನ್ನು ಫೋಟೋ ಕಾಪಿ ಮಾಡಿ ಮತ್ತೆ ಲಕೋಟೆಗೆ ಹಾಕಿ ಸೀಲ್ ಮಾಡಿ ಇಟ್ಟಿದ್ದ ಇದನ್ನು ಕಿರಣ್ ಹಂಚಿಕೆ ಮಾಡಿದ್ದ ಎನ್ನುವ ವಿಚಾರ ತಿಳಿದು ಬಂದಿತ್ತು.
-ಉದಯವಾಣಿ