ಕರ್ನಾಟಕ

ಮಹದಾಯಿ ತಡೆಗೋಡೆ ಗದ್ದಲ; ಪೊಲೀಸ್ v/s ಮಟ್ಟಣ್ಣನವರ್; ಯಾವುದು ಸತ್ಯ

Pinterest LinkedIn Tumblr

mahadayiBಬೆಳಗಾವಿ:ಕಳಸಾ ಬಂಡೂರಿ ಹೋರಾಟಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ ಮಹದಾಯಿ ನೀರು ಹರಿಯದಂತೆ ಬೆಳಗಾವಿ ಜಿಲ್ಲೆ ಖಾನಾಪುರ ಸಮೀಪದ ಕಣಕುಂಬಿ ಸಮೀಪ ಮಹದಾಯಿ ಗೋಡೆಯನ್ನು ಶುಕ್ರವಾರ ರಾತ್ರಿ ಮಿಷನ್ ಹರಹರ ಮಹದಾಯಿ ತಂಡ ಧ್ವಂಸಗೊಳಿಸಿರುವುದಾಗಿ ಬಿಜೆಪಿ ಮುಖಂಡ, ಮಹದಾಯಿ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಶನಿವಾರ ಹೇಳಿಕೆ ನೀಡಿ, ಈ ಸಂಬಂಧ ಮಾಧ್ಯಮಗಳಿಗೆ ವಿಡಿಯೋವನ್ನು ಬಿಡುಗಡೆ ಮಾಡಿದ್ದರು.

ಆದರೆ ಗಿರೀಶ್ ಮಟ್ಟಣ್ಣನವರ್ ಹಾಗೂ ಹೋರಾಟಗಾರರು ಮಹದಾಯಿ ನಾಲೆ ತಡೆಗೋಡೆಯನ್ನು ಧ್ವಂಸಗೊಳಿಸಿಲ್ಲ. ಅನಾವಶ್ಯಕವಾಗಿ ಈ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ ಮನವಿ ಮಾಡಿಕೊಂಡಿದ್ದಾರೆ. ಇದೀಗ ಮಹದಾಯಿ ತಡೆಗೋಡೆ ಧ್ವಂಸದ ಹೇಳಿಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ತಡೆಗೋಡೆ ಧ್ವಂಸ ಮಾಡಿದ್ದೇವೆ ಎಂದು ಹೇಳಿ ಬೆಳಗಿನ ಜಾವ ಬಿಡುಗಡೆ ಮಾಡಿರುವ ವಿಡಿಯೋ ನಕಲಿಯಾಗಿದೆ. ನಮ್ಮ ಪೊಲೀಸರು ತಡೆಗೋಡೆ ಸ್ಥಳದಲ್ಲೇ ಇದ್ದಾರೆ. ದಯವಿಟ್ಟು ಇದು ರಾಷ್ಟ್ರ ಮಟ್ಟದಲ್ಲಿ ಪರಿಣಾಮ ಬೀರೋ ವಿಷಯವಾಗಿದೆ. ಆಂತರಿಕ ಭದ್ರತೆ ಪ್ರಶ್ನೆಯೂ ಹೌದು. ಹಾಗಾಗಿ ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ರವಿಕಾಂತೇಗೌಡ ಮನವಿ ಮಾಡಿಕೊಂಡಿದ್ದಾರೆ.

ಮಹದಾಯಿ ತಡೆಗೋಡೆ ಧ್ವಂಸಗೊಳಿಸಿರುವುದಾಗಿ ಹೇಳಿಕೆ ನೀಡಿ, ವಿಡಿಯೋ ಬಿಡುಗಡೆ ಮಾಡಿರುವ ಮಟ್ಟಣ್ಣನವರ್ ವಿರುದ್ಧ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದರು.

ಏತನ್ಮಧ್ಯೆ ಖಾಸಗಿ ಚಾನೆಲ್ ನಲ್ಲಿ ಮಾತನಾಡಿರುವ ಮಟ್ಟಣ್ಣನವರ್, ನಾವು ಮಹದಾಯಿ ತಡೆಗೋಡೆ ಒಡೆದಿರುವುದು ಸತ್ಯ ಎಂದು ಪ್ರತಿಪಾದಿಸಿದ್ದಾರೆ. ಬನ್ನಿ ಸ್ಥಳಕ್ಕೆ ಹೋಗೋಣ ಎಂದು ಬೆಳಗಾವಿ ಎಸ್ ಪಿ, ಜಿಲ್ಲಾಧಿಕಾರಿಗೆ ಸವಾಲು ಹಾಕಿರುವ ಮಟ್ಟಣ್ಣನವರ್, ಕೇವಲ 15 ನಿಮಿಷದಲ್ಲಿ ತಡೆಗೋಡೆ ಒಡೆದು ಹಾಕಿಲ್ಲ ಅಂತೀರಲ್ಲ…ಸ್ಥಳಕ್ಕೆ ಛೋಟಾ ಭೀಮ್ ನನ್ನು ಕಳುಹಿಸಿದ್ದೀರಾ? ಎಂದು ವ್ಯಂಗ್ಯವಾಡಿದ್ದಾರೆ.
-ಉದಯವಾಣಿ

Write A Comment