ಒಂದೊಳ್ಳೆಯ ಕಥೆ ಮತ್ತು ಪಾತ್ರ ಸಿಕ್ಕರೆ, ಅಮೇರಿಕಾ ದಿಂದ ಬಂದು ನಟಿಸುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಸುಮನ್ ನಗರ್‌ಕರ್ ಹೇಳಿಕೊಂಡಿದ್ದರು. ಅವರು ಸುಮ್ಮನೆ ಹೀಗೆ ಹೇಳಿರಬಹುದು ಎಂಬ ಅಂದಾಜು ನಿಜಕ್ಕೂ ಸುಳ್ಳಾಗಿದೆ. ಸುಮನ್ ಸದ್ದಿಲ್ಲದೆ ಅಮೇರಿಕಾದಿಂದ ಬಂದು “ಜೀರ್ಜಿಂಬೆ’ ಎಂಬ ಹೊಸ ಸಿನಿಮಾವನ್ನು ಮಾಡಿದ್ದಾರೆ.
“ಜೀರ್ಜಿಂಬೆ’ ಒಂದು ಮಕ್ಕಳ ಸಿನಿಮಾ. ಅಷ್ಟೇ ಅಲ್ಲ, ಕ್ರೌಡ್ ಫಂಡಿಂಗ್ ಸಿನಿಮಾ. ಈ ಚಿತ್ರವನ್ನು ಕಾರ್ತಿಕ್ ಸರಗೂರು ಎನ್ನುವವರು ನಿರ್ದೇಶಿಸಿದ್ದಾರೆ. ಅಷ್ಟೆಲ್ಲಾ ಚಿತ್ರದ ಕಥೆ, ಚಿತ್ರಕಥೆಯನ್ನೂ ಅವರೇ ರಚಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ 8ನೇ ತರಗತಿ ಓದುತ್ತಿರುವ ಬಾಲಕಿಗೆ ಆಕಸ್ಮಿಕವಾಗಿ ಸೈಕಲ್‌ವೊಂದು ಸಿಕ್ಕಾಗ ಅವಳ ಬದುಕಿನಲ್ಲಿ ಏನೆಲ್ಲಾ ಕ್ರಾಂತಿ ಉಂಟಾಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆಯಂತೆ. ಮಂಡ್ಯ ರಮೇಶ್ ಅವರ ನಟನ ರಂಗಶಾಲೆಯ ಸಿರಿ ಮತ್ತು ಲಾವಣ್ಯ ಎಂಬ ಹುಡುಗಿಯರು ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರ ಜೊತೆಗೆ ಸುಮನ್ ನಗರ್‌ಕರ್ ಹಾಗೂ 200ಕ್ಕೂ ಹೆಚ್ಚು ಮಕ್ಕಳು ನಟಿಸಿದ್ದಾರೆ.
ಈಗಾಗಲೇ ಚಿತ್ರದ ಚಿತ್ರೀಕರಣವನ್ನು ಘಾಟಿ ಸುಬ್ರಹ್ಮಣ್ಯ, ಹಣಬೆ, ತಿಮ್ಮಸಂದ್ರ ಮುಂತಾದ ಕಡೆ ಚಿತ್ರೀಕರವಾಗಿದೆ. ಚರಣ್‌ರಾಜ್ ಎನ್ನುವವರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಕನ್ನಡದ 60 ಹೊಸ ಪದಗಳ ಸಾಹಿತ್ಯ ಇರುವ ಗೀತೆಯನ್ನು ರೆಕಾರ್ಡ್ ಮಾಡಲಾಗಿದೆ. ಈ ಹಾಡನ್ನು ನಟಿ ಮತ್ತು ರಾಜ್ಯಸಭೆ ಸದಸ್ಯೆ ಬಿ. ಜಯಶ್ರೀ ಅವರು ಹಾಡಿದ್ದಾರೆ. ಇನ್ನು ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ವಿಜೇತರಾದ ಸೌಂಡ್ ಇಂಜಿನಿಯರ್ ಮಹಾವೀರ್ ಸಾಬಣ್ಣವರ್ ಅವರ ನೇತೃತ್ವದಲ್ಲಿ ಸಿಂಕ್ ಸೌಂಡ್ ಮೂಲಕ ನೇರವಾಗಿ ಡಬ್ಬಿಂಗ್ ಮಾಡಿಸಲಾಗಿದೆ ಎನ್ನುವುದು ವಿಶೇಷ.
ಈ ಸಂದರ್ಭದಲ್ಲಿ ಮಾತನಾಡಿದ ಸುಮನ್ ನಗರ್‌ಕರ್, ಈ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದರು. “ಚಿತ್ರದ ಕಥೆ ಮತ್ತು ಪಾತ್ರ ಬಹಳ ಇಷ್ಟವಾಗಿದ್ದರಿಂದ ಈ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾಗಿ’ ಹೇಳಿಕೊಂಡರು.
-ಉದಯವಾಣಿ