ಕರ್ನಾಟಕ

ನಿಮ್ಮ ಸದಸ್ಯರಿಗೆ ಬುದ್ಧಿ ಹೇಳಿ: ಬಿಎಸ್‌ವೈಗೆ ಮೇಯರ್ ಪತ್ರ

Pinterest LinkedIn Tumblr

bjpಬೆಂಗಳೂರು: ನಗರದಲ್ಲಿ ಅಸ್ತಿ ತೆರಿಗೆ ಹೆಚ್ಚಳ ಮತ್ತು ವಲಯ ವರ್ಗೀಕರಣ ಮಾಡಿರುವುದನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಆದರೆ ಮೇಯರ್ ಮಂಜುನಾಥರೆಡ್ಡಿ ಅವರು ಆಸ್ತಿ ತೆರಿಗೆ ಹೆಚ್ಚಳ ಬಿಜೆಪಿ ಕಾಲದಲ್ಲೇ ಆಗಿದೆ. ಹಾಗಾಗಿ ನಿಮ್ಮ ಪಕ್ಷದ ಸದಸ್ಯರಿಗೆ ಪ್ರತಿಭಟನೆ ಕೈಬಿಟ್ಟು ನಗರ ಅಭಿವೃದ್ಧಿಗೆ ಕೈಜೋಡಿಸುವಂತೆ ತಿಳುವಳಿಕೆ ಹೇಳಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಭಾರತೀಯ ಜನತಾಪಕ್ಷದ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿನಂದನೆಗಳು. ನೀವು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ತೆಗೆದುಕೊಂಡ ಕೆಲವು ನಿರ್ಧಾರಗಳನ್ನು ನಾನು ಸ್ವಾಗತಿಸುತ್ತೇನೆ. ಈ ರೀತಿ ತೆಗೆದುಕೊಂಡ ಆದೇಶಗಳನ್ನು ನಿಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ. ಕಳೆದ 2009ರಲ್ಲಿ ಕರ್ನಾಟಕ ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಸಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಆಸ್ತಿ ತೆರಿಗೆ ಪರಿಷ್ಕರಣೆಗೆ ಅನುಮೋದನೆ ನೀಡಿದ್ದೀರಾ. ಅದೇ ರೀತಿ 2009ರ ಜನವರಿಯಲ್ಲಿ ವಲಯ ವರ್ಗೀಕರಣ ಮತ್ತು ಆಸ್ತಿ ತೆರಿಗೆ ದರಗಳ ಪರಿಷ್ಕರಣೆಗೆ ಅಧಿಸೂಚನೆ ಹೊರಡಿಸಲಾಗಿದೆ.

ನಿಮ್ಮ ಕಾಲದ ಈ ಅಧಿಸೂಚನೆಯನ್ವಯ ಪಾಲಿಕೆಯಲ್ಲಿ ಬಿಜೆಪಿ ಮೇಯರ್ ಆಗಿದ್ದ ವೆಂಕಟೇಶಮೂರ್ತಿ ಅವರ ಕಾಲದಲ್ಲಿ ವಲಯ ವರ್ಗೀಕರಣ ಜಾರಿಗೊಳಿಸಲು ನಿರ್ಣಯಕೈಗೊಳ್ಳಲಾಗಿತ್ತು. 2014-15ರಲ್ಲಿ ವಸತಿ ಸ್ವತ್ತುಗಳಿಗೆ ಶೇ.20, ವಸತಿಯೇತರ ಸ್ವತ್ತುಗಳಿಗೆ ಶೇ.25ರಷ್ಟು ತೆರಿಗೆ ಹೆಚ್ಚಳಕ್ಕೆ ಅಂದಿನ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಪಿಳ್ಳಪ್ಪ ಅನುಮೋದನೆ ನೀಡಿದ್ದಾರೆ. ಈ ನಿಮ್ಮ ಸರ್ಕಾರದ ತೆರಿಗೆ ಹೆಚ್ಚಳ ಮಾಡುವ ನಿರ್ಧಾರವನ್ನು ನಮ್ಮ ಪಕ್ಷ ಸ್ವಾಗತಿಸಿದ್ದು, ನಿಮ್ಮ ತೀರ್ಮಾನದಂತೆ ನಾವು ಈಗ ಆಸ್ತಿ ತೆರಿಗೆ ಹೆಚ್ಚಳ ಮಾಡಿದ್ದೇವೆ.

ನಿಮ್ಮ ಕಾಲದಲ್ಲೇ ಆಸ್ತಿ ತೆರಿಗೆ ಹೆಚ್ಚಳ ತೀರ್ಮಾನವಾಗಿದ್ದರೂ ನಿಮ್ಮ ಪಕ್ಷದ ಮುಖಂಡರು ಈ ವಿಷಯವನ್ನೂ ನಿಮ್ಮ ಗಮನಕ್ಕೆ ತರದೆ ಇರುವುದು ವಿಷಾದನೀಯ. ಹಾಗಾಗಿ ಪ್ರಸ್ತುತ ಪಾಲಿಕೆಯ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈಗ ಮಾಡಿರುವ ಆಸ್ತಿ ತೆರಿಗೆ ಹಚ್ಚಳವನ್ನು ಸ್ವಾಗತಿಸಿ ನಿಮ್ಮ ಪಕ್ಷದ ಸದಸ್ಯರಿಗೆ ತಿಳಿಹೇಳಬೇಕು ಹಾಗೂ ನಗರದ ಅಭಿವೃದ್ಧಿ ವಿಚಾರದಲ್ಲಿ ನಿಮ್ಮ ಸಲಹೆ, ಸಹಕಾರವನ್ನು ಬಯಸುತ್ತೇನೆ ಎಂದು ಮಂಜುನಾಥರೆಡ್ಡಿ ಪತ್ರದಲ್ಲಿ ತಿಳಿಸಿದ್ದಾರೆ. ಮೇಯರ್ ಮಂಜುನಾಥರೆಡ್ಡಿ ಅವರು ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದು ಒಂದು ವಾರ ಕಳೆಯುತ್ತಾ ಬಂದಿದ್ದರೂ ಅವರಿಂದ ಈವರೆಗೆ ಉತ್ತರ ಬಂದಿಲ್ಲ. ಇತ್ತ ಬಿಜೆಪಿ ಸದಸ್ಯರು ಪ್ರತಿಭಟನೆ ಕೈಬಿಟ್ಟಿಲ್ಲ. ಇದು ಮೇಯರ್ ಅವರನ್ನು ಆಕ್ರೋಶಗೊಳ್ಳುವಂತೆ ಮಾಡಿದೆ.

Write A Comment