
ಮೈಸೂರು: ಆನೆ ಬದುಕಿದರೂ ಲಕ್ಷ, ಸತ್ತರೂ ಲಕ್ಷ ಅನ್ನೋ ಗಾದೆ ಮಾತು ಆನೆ ದಂತಕ್ಕೆ ಇರುವ ಬೆಲೆಯನ್ನು ಸಾರಿ ಹೇಳುತ್ತದೆ. ಆದರೆ ಈ ಬೆಲೆ ಬಾಳುವ ದಂತಗಳನ್ನು ನಾಶಪಡಿಸಲು ಅರಣ್ಯ ಇಲಾಖೆ ಕೇಂದ್ರ ಅರಣ್ಯ ಇಲಾಖೆಯ ಅನುಮತಿಗಾಗಿ ಕಾಯುವಂತಾಗಿದೆ.
ಬಂಡೀಪುರ-ನಾಗರಹೊಳೆ ಅರಣ್ಯ ಭಾಗದಲ್ಲಿ ಅಂದಾಜು ನಾಲ್ಕು ಸಾವಿರ ಆನೆಗಳಿವೆ. ಆಗಾಗ್ಗೆ ಒಂದಿಲ್ಲೊಂದು ಕಾರಣದಿಂದಾಗಿ ಆನೆಗಳು ಸಾವನ್ನಪ್ಪುತ್ತಿವೆ. ಇಂತಹ ಸತ್ತ ಆನೆಗಳ ಮರಣೋತ್ತರ ಪರೀಕ್ಷೆ ನಡೆಸುವ ಅರಣ್ಯ ವೈದ್ಯಾಧಿಕಾರಿಗಳು ದಂತವನ್ನು ಅದರ ಗಾತ್ರ, ಉದ್ದ, ಅಗಲ, ದಪ್ಪಕ್ಕೆ ಅಳತೆ ಮಾಡಿ ಹಿರಿಯ ಅಧಿಕಾರಿಗಳ ವಶಕ್ಕೆ ನೀಡುತ್ತಾರೆ. ಇಂತಹ ಸತ್ತ ಆನೆಗಳ ದಂತವನ್ನು ಮೈಸೂರಿನ ಅರಣ್ಯ ಇಲಾಖೆಯಲ್ಲಿರುವ ಉಗ್ರಾಣದಲ್ಲಿ ಸಂಗ್ರಹಿಸಿ ಇಡಲಾಗಿದೆ.
ಕಳೆದ ಕೆಲವು ವರ್ಷಗಳಿಂದ ಸತ್ತ ಆನೆಯ ದಂತಗಳನ್ನು ಮೈಸೂರಿನ ಅರಣ್ಯ ಭವನದಲ್ಲಿರುವ ಉಗ್ರಾಣದಲ್ಲಿ ಸಂಗ್ರಹಿಸಿಡಲಾಗುತ್ತಿದ್ದು, ಇಲ್ಲಿವರೆಗೆ 2,290 ದಂತಗಳಿದ್ದು, ಅದರಲ್ಲಿ ಚಿಕ್ಕದು, ದೊಡ್ಡದು, ಹಾನಿ ಆಗಿರುವುದು ಹೊರತುಪಡಿಸಿ 300 ಮಾತ್ರ ಉತ್ತಮ ದಂತಗಳಿದ್ದು, ದೇಶದಲ್ಲಿ ಸುಮಾರು 12 ಟನ್‌ನಷ್ಟು ಆನೆ ದಂತಗಳು ಇವೆ.
ಈ ಆನೆ ದಂತಗಳನ್ನು ನಾಶಪಡಿಸಲು ಅಕ್ಟೋಬರ್ ವೇಳೆಗೆ ಅನುಮತಿ ದೊರೆಯುವ ಸಾಧ್ಯತೆ ಇದೆ ಎಂದು ಹೆಸರು ಹೇಳದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಸೇನಾ ಕಚೇರಿಗಳಲ್ಲಿ ಶೃಂಗಾರಕ್ಕೆ ಕಳೆದ ಮೂರು ವರ್ಷಗಳಿಂದ 150-200 ದಂತಗಳನ್ನು ನೀಡಲಾಗಿದ್ದು ಇನ್ನೂ ಹೆಚ್ಚಿನ ಬೇಡಿಕೆ ಬಂದರೆ ನೀಡಲಾಗುವುದು. ಅಲ್ಲದೆ ನಾವು ಕೇಳಿದಾಗ ವಾಪಸ್ಸು ಪಡೆಯಲಾಗುವುದು ಎಂದು ಈ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಆನೆ ದಂತವನ್ನು ಹರಾಜಿಗಿಟ್ಟರೆ ಕೋಟ್ಯಂತರ ರೂ. ಸರ್ಕಾರಕ್ಕೆ ಆದಾಯ ಬರುತ್ತದೆ. ಆದರೆ ದಂತಕ್ಕೆ ಇಷ್ಟೊಂದು ಬೆಲೆಯಿದೆ ಎಂದು ಗೊತ್ತಾದರೆ ಆನೆ ಸಂತತಿಯನ್ನೆ ನಾಶ ಮಾಡಬಹುದು ಎಂಬ ಉದ್ದೇಶದಿಂದ ಹರಾಜು ಹಾಕುವುದಿಲ್ಲ. ಬದಲಾಗಿ ಅದನ್ನು ಸುಟ್ಟು ಹಾಕಲು ತೀರ್ಮಾನಿಸಿದ್ದು ಅನುಮತಿಗಾಗಿ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಅರಣ್ಯ ಇಲಾಖೆಯ ಅನುಮತಿಗಾಗಿ ಕಾಯಲಾಗುತ್ತಿದೆ.