ಅಂತರಾಷ್ಟ್ರೀಯ

ಮುಸ್ಲಿಮರ ನಿಷೇಧ ಕುರಿತ ಹೇಳಿಕೆ ಬರೀ ಸಲಹೆ: ಡೊನಾಲ್ಡ್ ಟ್ರಂಪ್ ಹೇಳಿಕೆ

Pinterest LinkedIn Tumblr

Trumphವಾಷಿಂಗ್ಟನ್ (ಪಿಟಿಐ): ಮುಸ್ಲಿಮರಿಗೆ ತಾತ್ಕಾಲಿಕವಾಗಿ ಅಮೆರಿಕ ಪ್ರವೇಶವನ್ನು ನಿಷೇಧಿಸಬೇಕು ಎಂದು ಹೇಳಿ ಜಾಗತಿಕ ಟೀಕೆ ಎದುರಿಸಿದ್ದ ರಿಪಬ್ಲಿಕನ್ ಪಕ್ಷದ ಅಮೆರಿಕ ಅಧ್ಯಕ್ಷ ಹುದ್ದೆಯ ಆಕಾಂಕ್ಷಿ ಡೊನಾಲ್ಡ್ ಟ್ರಂಪ್, ಇದೀಗ ತಮ್ಮ ನಿಲುವಿನಲ್ಲಿ ಮೃಧು ಧೋರಣೆ ತಳೆದಿದ್ದಾರೆ.

‘ಭಯೋತ್ಪಾದನೆ ಗಂಭೀರ ಸಮಸ್ಯೆ. ಏನು ನಡೆಯುತ್ತಿದೆ ಎಂಬುದನ್ನು ತಿಳಿಯುವ ತನಕ ಮುಸ್ಲಿಮರ ಪ್ರವೇಶ ತಾತ್ಕಾಲಿಕ ನಿಷೇಧಿಸಬೇಕು ಎಂಬುದೊಂದು ಸಲಹೆಯಷ್ಟೆ. ಅದೇನೂ ಅನುಷ್ಠಾನಗೊಂಡಿಲ್ಲ’ ಎಂದು ಫಾಕ್ಸ್‌ ರೇಡಿಯೊಗೆ ಅವರು ತಿಳಿಸಿದ್ದಾರೆ.

‘ಜಗತ್ತಿನಾದ್ಯಂತ ತೀವ್ರಗಾಮಿ ಇಸ್ಲಾಮಿಕ್ ಭಯೋತ್ಪಾದನೆ ನಡೆಯುತ್ತಿದೆ. ಪ್ಯಾರಿಸ್‌, ಸ್ಯಾನ್‌ಬೆರ್ನಾರ್ಡಿನೊ ಹೀಗೆ ವಿಶ್ವದೆಲ್ಲಡೆ ಅದು ಕಾಣ ಸಿಗುತ್ತದೆ. ಅದನ್ನು ಅವರು ನಿರಾಕರಿಸುವುದಾದರೆ ನಿರಾಕರಿಸಲಿ. ಆದರೆ, ನಾನು ನಿರಾಕರಿಸುವುದಿಲ್ಲ’ ಎಂದು ಲಂಡನ್‌ನ ನೂತನ ಮೇಯರ್‌ ಆಗಿ ಆಯ್ಕೆಯಾಗಿರುವ ಸಾದಿಕ್ ಖಾನ್‌ ಹೇಳಿಕೆ ಕುರಿತ ಪ್ರಶ್ನೆಗೆ ಟ್ರಂಪ್ ಉತ್ತರಿಸಿದ್ದಾರೆ.

‘ಇಸ್ಲಾಮಿಕ್ ಭಯೋತ್ಪಾದನೆಯನ್ನು ಅವರು ನಿರಾಕರಿಸುತ್ತಾರೆ ಎಂದು ನನಗನಿಸುತ್ತದೆ. ಆದರೆ, ನಿಜಕ್ಕೂ ವಿಶ್ವದಾದ್ಯಂತ ತೀವ್ರಗಾಮಿ ಇಸ್ಲಾಮಿಕ್ ಉಗ್ರವಾದ ನಡೆಯುತ್ತಿದೆ. ಅದು ದುರಂತ. ಅದನ್ನು ನಮ್ಮ ಅಧ್ಯಕ್ಷರೂ ಕೂಡ ನಿರಾಕರಿಸುತ್ತಾರೆ. ಖಾನ್ ಕೂಡ ಅವರಂತೆಯೆ’ ಎಂದು ರಿಯಲ್ ಎಸ್ಟೇಟ್‌ ಉದ್ಯಮಿ ಟ್ರಂಪ್‌ ತಿಳಿಸಿದ್ದಾರೆ.

‘ಇಸ್ಲಾಂ ಕುರಿತು ನಿಮ್ಮ ದೃಷ್ಟಿಕೋನಗಳ ಅರಿವಿನ ಕೊರತೆ ಇದೆ. ಮುಸ್ಲಿಮನಾಗಿದ್ದೂ, ಪಾಶ್ಚ್ಯಾತ ರಾಷ್ಟ್ರಗಳಲ್ಲಿ ಕೂಡ ಜೀವನ ನಡೆಸಲು ಸಾಧ್ಯವಿದೆ. ಮುಸ್ಲಿನಾಗಿದ್ದುಕೊಂಡೂ ಅಮೆರಿಕ ಪ್ರೀತಿಸಲು ಸಾಧ್ಯವಿದೆ. ಇದು ಡೊನಾಲ್ಡ್ ಟ್ರಂಪ್‌ ಹಾಗೂ ಅವರ ತಂಡಕ್ಕೆ ನನ್ನ ಸಂದೇಶ’ ಎಂದು ಸಿಎನ್‌ಎನ್‌ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಖಾನ್‌ ತಿಳಿಸಿದ್ದರು.

ಖಾನ್ ಪಾಕಿಸ್ತಾನದ ಬಸ್‌ ಚಾಲಕನ ಪುತ್ರ. ಕಳೆದ ವಾರವಷ್ಟೇ ಅವರು ಲಂಡನ್‌ನ ನೂತನ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ.

Write A Comment