ಬೆಂಗಳೂರು,ಮೇ 7-ಒಳ್ಳೆಯವನು ಕಳ್ಳನಾಗುವುದು ಬೇರೆ ಮಾತು. ಅದರೆ ಕಾಲ ಕೂಡಿ ಬಂದರೆ ಕಳ್ಳನೂ ಒಳ್ಳೆಯವನಾದಾನು… ಅದಕ್ಕೊಂದು ಜ್ವಲಂತ ನಿದರ್ಶನ ಇಲ್ಲಿದೆ ನೋಡಿ..ಉತ್ತರ ಕರ್ನಾಟಕ 46ರ ಹರೆಯದ ಬಸವರಾಜ ನಿಂಗಪ್ಪ ಬೆಳಗಜ್ಜರಿ ಹುಟ್ಟಾ ಕಳ್ಳ. ತನ್ನ 16ನೇ ವಯಸ್ಸಿನಲ್ಲೇ ತನ್ನ ಕೈ ಚಳಕ ಆರಂಭಿಸಿದ ವೃತ್ತಿಪರ ಕಳ್ಳ. ಕಳೆದ 30 ವರ್ಷಗಳ ಅವಧಿಯಲ್ಲಿ ಕರ್ನಾಟಕದಾದ್ಯಂತ ಬರೋಬ್ಬರಿ 260 ಮನೆಗಳಲ್ಲಿ ಕಳವು ಮಾಡಿದ್ದಾನೆ. ಉತ್ತರ ಕರ್ನಾಟಕದ ಎಲಗಾವಿಯ ಬಸವರಾಜು ನಿಂಗಪ್ಪ ಎರಡು ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದಾನೆ. ಯಾಕೆ ಗೊತ್ತೆ…? ತಾನು ಕಳವು ಮಾಡಿದ ಮನೆಗಳವರನ್ನೆಲ್ಲ ಭೇಟಿ ಮಾಡಿ ಅವರ ಬಳಿ ‘ಸಾರಿ’ ಕೇಳಲು.!
ಈ ವ್ಯಕ್ತಿ ಬೆಂಗಳೂರಿಗೆ ಹೇಗೆ ಬಂದಿದ್ದಾನೆ ಗೊತ್ತೆ… ತನ್ನೂರು ಎಲಗಾವಿಯಿಂದ ಬೆಂಗಳೂರಿಗೆ ಬರೋಬ್ಬರಿ 450 ಕಿ.ಮೀ ಹಾದಿಯನ್ನು ಕೈಯಲ್ಲೊಂದು ತ್ರಿವರ್ಣಧ್ವಜ ಹಿಡಿದು ಪಾದಯಾತ್ರೆ ಮೂಲಕ ಬಂದಿದ್ದಾನೆ. ಮಾರ್ಗಮಧ್ಯೆ ಅಲ್ಲಲ್ಲಿ ಜನರನ್ನು ಸೇರಿಸಿ ಶಿಕ್ಷಣದ ಅವಶ್ಯಕತೆ ಬಗ್ಗೆ ಲೆಕ್ಚರ್ ಕೊಟ್ಟಿದ್ದಾನೆ. ನಾನು ನನ್ನ 30 ವರ್ಷಗಳ ಕಳವು ವೃತ್ತಿಯಲ್ಲಿ ಅನೇಕರು ಕಳ್ಳರಾಗಿರುವುದು ಬಡತನ, ಅನಕ್ಷರತೆಯಿಂದ ಎಂಬುದು ತಿಳಿದಿದೆ ಎಂದು ಹೇಳಿದ್ದಾನೆ. ಮಕ್ಕಳನ್ನು ಓದಿಸುವಂತೆ ಮನವಿ ಮಾಡಿದ್ದಾನೆ.
2010ರಲ್ಲಿ ತನಗೆ ತಾನೇ ಈ ವೃತ್ತಿಯ ಬಗ್ಗೆ ಬೇಸರಪಟ್ಟುಕೊಂಡು, ಪಶ್ಚಾತ್ತಾಪದಿಂದ ಬದಲಾಗಿರುವ ಬಸವರಾಜ ನಿಂಗಪ್ಪ , ಪಾದಯಾತ್ರೆ ಹೊರಟ ಸಂದರ್ಭ ದಾರಿಯಲ್ಲಿ ಬೈಲಹೊಂಗಲದ ಮನೆಯೊಂದಕ್ಕೆ ಹೋಗಿ ಧೈರ್ಯ ಮಾಡಿ ಕುಡಿಯಲು ನೀರು ಕೇಳಿದ್ದಾನೆ. ಅದೇ ಮನೆಯಲ್ಲಿ 2005ರಲ್ಲಿ ಒಂದು ಕೆಜಿ ಚಿನ್ನ ಕದ್ದಿದ್ದನಂತೆ. ನೀರು ಕುಡಿದವನು ಧೈರ್ಯವನ್ನೆಲ್ಲ ಒಟ್ಟುಗೂಡಿಸಿಕೊಂಡು ನನು ನಿಮ್ಮನೆಯಲ್ಲಿ ಕಳವು ಮಾಡಿದ್ದೆ ಎಂದು ಹೇಳಿದ್ದಾನೆ. ಅವರು ಒಪ್ಪಿಲ್ಲ. ನಿಧಾನವಾಗಿ ಎಲ್ಲಾ ವಿವರ ಹೇಳಿದಾಗ ಒಪ್ಪಿದ್ದಾರೆ.
ಈಗ ಈ ಪ್ರಕರಣ ನ್ಯಾಯಾಲಯಕ್ಕೆ ಹೋಗಿದ್ದು , ತಾನು ಅಂದು ಚಿನ್ನ ಮಾರಿದ್ದ ಅಕ್ಕಸಾಲಿಯ ಗುರುತನ್ನು ಹೇಳಿದ್ದಾನೆ. ಖಂಡಿತಾ ಆ ಚಿನ್ನ ಮನೆಯವರಿಗೆ ದೊರೆಯುತ್ತದೆ ಎನ್ನುತ್ತಾರೆ ಈ ವ್ಯಕ್ತಿ. ನಾನೆಂದೂ ಬಡವರ ಮನೆಯಲ್ಲಿ ಕಳವು ಮಾಡಿಲ್ಲ. ನಾನು ನುಗ್ಗುತ್ತಿದ್ದುದು ಬರೀ ಸರ್ಕಾರಿ ನೌಕರರ ಮನೆಗಳಿಗಷ್ಟೇ. ನಾನು ಕದ್ದಿದ್ದರಲ್ಲಿ ಬಹುತೇಕ ಭಾಗವನ್ನು ಕಡುಬಡವರಿಗೆ ನೀಡಿ ನೆರವಾಗಿದ್ದೇನೆ. ಅದು ನನಗೆ ಸಮಾಧಾನ ನೀಡಿದೆ ಎಂಬುದು ಪರಿವರ್ತಿತ ಕಳ್ಳ ಬಸವರಾಜ ನಿಂಗಪ್ಪನ ಮಾತು. ಈ ಮೊದಲು ನಾನು ಕಳವು ಮಾಡಿದ ಮನೆಗಳವರು ಹಾಗೂ ಕಳವು ವಸ್ತುಗಳನ್ನು ಮಾರಾಟ ಮಾಡಿರುವ ಅಂಗಡಿಗಳನ್ನೆಲ್ಲ ಗುರುತಿಸಬಲ್ಲ. ಸಾಧ್ಯವಾದಷ್ಟು ಅವರ ವಸ್ತುಗಳು ಅವರಿಗೆ ದೊರೆಯುವಂತೆ ಮಾಡುವ ಪ್ರಯತ್ನ ನಡೆಸುತ್ತೇನೆ. ಈ ಕೆಲಸವನ್ನು ಖಂಡಿತಾ ಮಾಡಿ ಮುಗಿಸುವೆ ಎಂದು ಮಾತು ಮುಗಿಸುತ್ತಾನೆ ಬಸವರಾಜ ನಿಂಗಪ್ಪ ಬೆಳಗಜ್ಜರಿ ಎಂಬ ಅಚ್ಚರಿಯ ವ್ಯಕ್ತಿ.