ಲಖ್ನೋ, ಮೇ 4- ನನ್ನನ್ನು 2004ರ ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ಬಾಲಿವುಡ್ ನಟ ಗೋವಿಂದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬೆಂಬಲ ಪಡೆದಿದ್ದರು ಎಂದು ಉತ್ತರ ಪ್ರದೇಶ ರಾಜ್ಯಪಾಲರಾದ ರಾಮ್ ನಾಯಕ್ ಆರೋಪಿಸಿದ್ದಾರೆ.
ರಾಮ್ ನಾಯ್ಕ್ 60 ವರ್ಷಗಳ ಸುದೀರ್ಘ ರಾಜಕೀಯವನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ. ಮರಾಠಿ ಭಾಷೆಯಲ್ಲಿ ಬರೆದಿರುವ ತಮ್ಮ ಆತ್ಮಕಥೆ ಚರೈವಾತಿ ಚರೈವಾತಿ (ಮುಂದೆ ಸಾಗಿ) ಎಂಬ ಪುಸ್ತಕದಲ್ಲಿ ನಟ ಹಾಗೂ ರಾಜಕಾರಣಿ ಗೋವಿಂದ ಬಗ್ಗೆ ಆಘಾತಕಾರಿ ಮಾಹಿತಿ ಹೊರಗೆಡವಿದ್ದಾರೆ.
2004ರಲ್ಲಿ ಮುಂಬೈನ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೋವಿಂದ ಬಿಜೆಪಿಯಿಂದ ಅದೇ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದ ರಾಮ್ ನಾಯ್ಕ್ರನ್ನು 11 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು. ಆ ಸಂದರ್ಭದಲ್ಲಿ ಗೋವಿಂದ ಭೂಗತ ಪಾತಕಿ ದಾವೂದ್ ಹೆಸರು ಬಳಸಿಕೊಂಡು ಮತದಾರರನ್ನು ಹೆದರಿಸಿ, ತನ್ನ ಪ್ರಭಾವ ಬಳಸಿ ಜಯ ಸಾಧಿಸಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾಗೆ ರಾಮ್ ನಾಯ್ಕ್ ತಿಳಿಸಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ನಟ ಗೋವಿಂದ ಸೋಲಿನ ಹತಾಶೆಯಿಂದ ರಾಮ್ ನಾಯ್ಕ್ ಹೀಗೆ ಮಾತನಾಡಿದ್ದಾರೆ ಎಂದಿದ್ದಾರೆ.