
ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಸುರತ್ಕಲ್ ಬಿಜೆಪಿ ಮುಖಂಡ ಭರತ್
ಮಂಗಳೂರು, ಮೇ.2: ಸುರತ್ಕಲ್ನ ಬಿಜೆಪಿ ಮುಖಂಡರೊಬ್ಬರ ಮೇಲೆ ನಡೆದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ದಿನಗಳ ಹಿಂದೆ ನಾಲ್ಕು ಮಂದಿಯನ್ನು ವಶಕ್ಕೆ ಪಡೆದಿರುವ ಸುರತ್ಕಲ್ ಠಾಣಾ ಪೊಲೀಸರು ಇನ್ನೂ ಕೂಡಾ ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ ಎಂದು ಹೆತ್ತವರು ಆರೋಪ ಮಾಡಿದ್ದಾರೆ.
ಎ.13ರಂದು ಸುರತ್ಕಲ್ ಸಮೀಪದ ಕೃಷ್ಣಾಪುರ ಮಠ ರಸ್ತೆಯ ನಿವಾಸಿ ಬಿಜೆಪಿ ಮುಖಂಡ ಭರತ್ ಎಂಬವರ ಕೊಲೆ ಯತ್ನ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸುರತ್ಕಲ್ ಪೊಲೀಸರು ಕಾಟಿಪಳ್ಳದ ನಿವಾಸಿ ಅಬ್ದುಲ್ ಅಜೀಝ್, ಸೂರಿಂಜೆ ನಿವಾಸಿ ಬರ್ಕತ್ ಅಲಿ, ಕೃಷ್ಣಾಪುರದ ನಿವಾಸಿಗಳಾದ ರಿಝ್ವಾನ್ ಮತ್ತು ಇರ್ಫಾನ್ ಎಂಬವರನ್ನು ಎ.23ರಂದು ನಗರದ ಎ.ಜೆ. ಆಸ್ಪತ್ರೆಯಿಂದ ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಕೊಲೆ ಯತ್ನ ಪ್ರಕರಣದ ಆರೋಪಿ ಎನ್ನಲಾದ ಅಬ್ದುಲ್ ಅಜೀಝ್ ಎ.23ರಂದು ಬೆಳಗ್ಗೆ ಕಾಲು ನೋವಿನ ಚಿಕಿತ್ಸೆಗಾಗಿ ನಗರದ ಎ.ಜೆ. ಆಸ್ಪತ್ರೆಗೆ ದಾಖಲಾಗಿದ್ದು, ಅವರನ್ನು ನೋಡಲೆಂದು ಬರ್ಕತ್ ಅಲಿ, ರಿಝ್ವೆನ್ ಮತ್ತು ಇರ್ಫಾನ್ ಆಸ್ಪತ್ರೆಗೆ ಬಂದಿದ್ದರೆನ್ನಲಾಗಿದೆ. ಸಂಜೆ ಸುಮಾರು 5 ಗಂಟೆ ಹೊತ್ತಿಗೆ ಸುರತ್ಕಲ್ ಠಾಣಾ ಪೊಲೀಸರು ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದ ಅಜೀಝ್ರನ್ನು ಬಲವಂತವಾಗಿ ಡಿಸ್ಚಾರ್ಜ್ಗೊಳಿಸಿ ವಶಕ್ಕೆ ಪಡೆದರಲ್ಲದೆ, ಅಲ್ಲಿದ್ದ ಇತರ ಮೂವರನ್ನೂ ಠಾಣೆಗೆ ಕರೆದುಕೊಂಡು ಹೋಗಿದ್ದು, ಈವರೆಗೂ ಬಿಡುಗಡೆ ಮಾಡದೆ, ಕೋರ್ಟ್ಗೂ ಹಾಜರುಪಡಿಸಿಲ್ಲ ಎಂದು ಅವರ ಮನೆಯವರು ಆರೋಪ ಮಾಡಿದ್ದಾರೆ.
ವಶಕ್ಕೆ ಪಡೆದ ದಿನದಂದು ಕುಟಂಬಸ್ಥರು ಸುರತ್ಕಲ್ ಠಾಣೆಗೆ ಬಂದು ಆರೋಪಿಗಳನ್ನು ಮಾತನಾಡಿಸಿದ್ದು, ಯಾತಕ್ಕಾಗಿ ಬಂಧಿಸಿದ್ದಾರೆ ಎಂಬುದು ತಿಳಿದಿಲ್ಲ. ಆದರೆ, ಈ ಸಂಬಂಧ ನಿನ್ನೆ ವಕೀಲರೊಬ್ಬರ ಮೂಲಕ ಸರ್ಚ್ ವಾರಂಟ್ನ್ನು ಹಿಡಿದುಕೊಂಡು ಸುರತ್ಕಲ್ ಠಾಣೆಗೆ ಹೋದಾಗ ಅಲ್ಲಿ ಈ ನಾಲ್ವರು ಇರಲಿಲ್ಲ. ಪೊಲೀಸರು ಅವರನ್ನು ಎಲ್ಲಿ ಬಚ್ಚಿಟ್ಟಿದ್ದಾರೆಂದು ಗೊತ್ತಿಲ್ಲ ಎಂದು ಕುಟಂಬಸ್ಥರು ಆರೋಪಿಸಿದ್ದಾರೆ.
ವರದಿ ಕೃಪೆ : ವಾಭಾ