ರಾಷ್ಟ್ರೀಯ

ಕಾಳ್ಗಿಚ್ಚು: 2,269 ಹೆಕ್ಟೇರ್‌ ಕಾಡು ನಾಶ, ಏಳು ಜನ ಬಲಿ; ಕಾರ್ಯಾಚರಣೆಗೆ ಐಎಎಫ್‌ ಹೆಲಿಕಾಪ್ಟರ್‌

Pinterest LinkedIn Tumblr

pvec020516h UTTARAKNADಡೆಹ್ರಾಡೂನ್‌/ನವದೆಹಲಿ(ಪಿಟಿಐ): ಉತ್ತರಾಖಂಡದ ಅರಣ್ಯ ಪ್ರದೇಶಗಳಲ್ಲಿ ಉಂಟಾಗಿರುವ ಕಾಳ್ಗಿಚ್ಚನ್ನು ನಿಯಂತ್ರಿಸುವುದಕ್ಕಾಗಿ ಭಾರತೀಯ ವಾಯು ಪಡೆಯ (ಐಎಎಫ್‌) ಮಿಗ್‌ –17 ಹೆಲಿಕಾಪ್ಟರ್‌ ಭಾನುವಾರ ಕಾರ್ಯಾಚರಣೆಗೆ ಇಳಿದಿದೆ.

‘ಮೂರು ಸಾವಿರ ಲೀಟರ್‌ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯವಿರುವ ಈ ಹೆಲಿಕಾಪ್ಟರ್‌ ಭೀಮತಳ ಸರೋವರದಿಂದ ನೀರನ್ನು ಸಂಗ್ರಹಿಸಿ, ಅಲ್ಮಖಾನ್‌, ಕಿಲ್ಬರಿ ಮತ್ತು ನಲೇನಾ ಪ್ರದೇಶಗಳಲ್ಲಿ ಕಂಡು ಬಂದಿರುವ ಕಾಳ್ಗಿಚ್ಚನ್ನು ನಂದಿಸಲು ನೀರನ್ನು ಚಿಮುಕಿಸಿತು’ ಎಂದು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನೋಡಲ್‌ ಅಧಿಕಾರಿ ಬಿ.ಪಿ. ಗುಪ್ತಾ ಹೇಳಿದ್ದಾರೆ.

ಭಾರತೀಯ ವಾಯುಪಡೆಯು ಇದೇ ಉದ್ದೇಶಕ್ಕೆ ಮತ್ತೊಂದು ಹೆಲಿಕಾಪ್ಟರ್‌ ಅನ್ನು ನಿಯೋಜಿಸಿದೆಯಾದರೂ, ಮಂದ ಬೆಳಕಿನ ಕಾರಣದಿಂದ ಅದಕ್ಕೆ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿಲ್ಲ.

ರಾಜ್ಯದಲ್ಲಿ ಇದುವರೆಗೆ 2,269 ಹೆಕ್ಟೇರ್‌ ಅರಣ್ಯ  ಪ್ರದೇಶ ಕಾಳ್ಗಿಚ್ಚಿಗೆ ಆಹುತಿಯಾಗಿದೆ. ಏಳು ಜನರು ಮೃತಪಟ್ಟಿದ್ದಾರೆ.

ಪೌರಿ, ನೈನಿತಾಲ್‌, ರುದ್ರಪ್ರಯಾಗ ಮತ್ತು ತೆಹ್ರಿ ಜಿಲ್ಲೆಗಳಲ್ಲಿ ಹೆಚ್ಚು ಹಾನಿ ಸಂಭವಿಸಿದೆ. ಇನ್ನು ಎರಡು ಮೂರು ದಿನಗಳಲ್ಲಿ ಕಾಳ್ಗಿಚ್ಚನ್ನು ನಿಯಂತ್ರಿಸಲು ಸಾಧ್ಯವಾಗಬಹುದು ಎಂಬ ವಿಶ್ವಾಸವನ್ನು ಗುಪ್ತಾ  ವ್ಯಕ್ತಪಡಿಸಿದ್ದಾರೆ.

ಕಾಳ್ಗಿಚ್ಚು ನಿಯಂತ್ರಣಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ರಫ್‌) 130 ಸಿಬ್ಬಂದಿಯನ್ನು ನಿಯೋಜಿಸಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆಯ (ಎಸ್‌ಡಿಆರ್‌ಎಫ್‌) ಒಂದು ತುಕಡಿಯನ್ನು ನಿಯೋಜಿಸಲಾಗಿದೆ. ಇದರ ಹೊರತಾಗಿ ಸಾರ್ವಜನಿಕ ಸಂಪರ್ಕ ಇಲಾಖೆ, ಗೃಹ ರಕ್ಷಕ ದಳ ಸಿಬ್ಬಂದಿ ಹಾಗೂ ಸ್ಥಳೀಯರು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಪರಾಮರ್ಶೆ: ಈ ಮಧ್ಯೆ, ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಉತ್ತರಾಖಂಡದಲ್ಲಿನ ಸದ್ಯದ ಪರಿಸ್ಥಿತಿಯನ್ನು ಪರಾಮರ್ಶಿಸಿದ್ದಾರೆ.

ಗಂಭೀರ: ಉತ್ತರಾಖಂಡದ  ಕಾಳ್ಗಿಚ್ಚನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್‌ ಹೇಳಿದ್ದಾರೆ.

‘ಕಾಳ್ಗಿಚ್ಚು ನಿಯಂತ್ರಣಕ್ಕೆ 6 ಸಾವಿರ ಜನರನ್ನು ನಿಯೋಜಿಸಲಾಗಿದೆ. ಕಾರ್ಯಾಚರಣೆಗಾಗಿ ರಾಜ್ಯಕ್ಕೆ ₹ 5 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ.

ಚಾಲನೆ: ಇದರ ನಡುವೆಯೇ, ಕಾಳ್ಗಿಚ್ಚಿನ ಬಗ್ಗೆ ಮುಂಚಿತವಾಗಿ ಎಸ್ಎಂಎಸ್‌ ಮೂಲಕ ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ಪರಿಸರ ಸಚಿವಾಲಯವು ಪ್ರಾಯೋಗಿಕವಾಗಿ  ಜಾರಿಗೆ ತಂದಿದೆ.

Write A Comment