
ಆನೇಕಲ್: ಗ್ರಾಮ ಪಂಚಾಯತಿ ಉಪಾಧ್ಯಕ್ಷನಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಘಟನೆ ಆನೇಕಲ್ ತಾಲೂಕಿನ ಚಿಕ್ಕದಾಸರಹಳ್ಳಿ ಕೆರೆ ಬಳಿ ನಡೆದಿದೆ.
ಅಶ್ವಥ್(30) ಕೊಲೆಯಾದ ಪಂಚಾಯತ್ ಉಪಾಧ್ಯಕ್ಷ. ನೆರಿಗಾ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿದ್ದ ಅಶ್ವಥ್ ಅವರು ನಿನ್ನೆ ರಾತ್ರಿ ಮನೆಗೆ ಹಿಂದಿರುಗುವಾಗ ಚಿಕ್ಕದಾಸರಹಳ್ಳಿ ಕೆರೆ ಬಳಿ ಅಡ್ಡಗಟ್ಟಿ ಕೊಲೆ ಮಾಡಲಾಗಿದೆ. ಇದು ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ನಡೆದ ಕೊಲೆ ಎಂದು ಆರೋಪಿಸಲಾಗಿದೆ.
ಕಾಂಗ್ರೆಸ್ ಮುಖಂಡ ಕೇಶವಮೂರ್ತಿ ಮತ್ತು ಬೆಂಬಲಿಗರು ಈ ಕೃತ್ಯವೆಸಗಿದ್ದಾರೆ ಎಂದು ಅಶ್ವಥ್ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೇ ಕೇಶವಮೂರ್ತಿಯವರನ್ನು ಬಂಧಿಸದಿದ್ದರೆ ಶವ ತೆಗೆಯಲು ಬಿಡಲ್ಲ ಎಂದು ಪ್ರತಿಭಟನೆ ಮಾಡುತ್ತಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ ಒಬ್ಬರು ಕೆಎಸ್ಆರ್ಪಿ, ಇಬ್ಬರು ಎಸ್ಐ ಹಾಗೂ ಡಿವೈಎಸ್ಪಿ ಸ್ಥಳದಲ್ಲಿ ಹಾಜರಾಗಿದ್ದು, ಮುಂಜಾಗ್ರತ ಕ್ರಮವಾಗಿ ಹೆಚ್ಚಿನ ಸಂಖ್ಯಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ.