
ಮಂಗಳೂರು ಏ. 26 : ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಾಯೋಜಿಸುತ್ತಿರುವ ವಾರ್ಷಿಕ ಪ್ರತಿಷ್ಠಿತ ‘ವಂದನಾ ಪ್ರಶಸಿ’ ಯನ್ನು ಏಪ್ರಿಲ್ 29ರಂದು ನಗರದ ಈಡನ್ ಕ್ಲಬ್ ಸಭಾಂಗಣದಲ್ಲಿ ಸಂಜೆ 8 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಸಭಾಪತಿಯವರಾದ ಡಾ. ಬಿ. ದೇವದಾಸ್ ರೈ ಪತ್ರಿಕಾ ಮಾಹಿತಿ ನೀಡಿದ್ದಾರೆ.
ಪ್ರಸ್ತುತ 2016ನೇ ಸಾಲಿನ ಪ್ರಶಸ್ತಿಯನ್ನು ಮುಂಬಯಿ ನಗರ ಮೂಲದ ಖ್ಯಾತ ಉದ್ಯಮಿ ಹಾಗೂ ಆಲ್ ಕಾರ್ಗೋ ಲಾಜಿಸ್ಟಿಕ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ರಾದ ಡಾ| ಶಶಿಕಿರಣ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಗಿದೆ.
ಅವರು ಅಂತರಾಷ್ಟ್ರೀಯ ಮಟ್ಟದ ಉದ್ಯಮ ಕ್ಷೇತ್ರದಲ್ಲಿ ಸಾಧಿಸಿದ ಗಮನಾರ್ಹ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ಈ ಪ್ರಶಸ್ತಿಯು ಪ್ರಮಾಣ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಯು.ಟಿ.ಖಾದರ್ರವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅಭಿನಂದನಾ
ಭಾಷಣ ಮಾಡಲಿರುವರು.
ರೋಟರಿ ಸಹಾಯಕ ಗವರ್ನರ್ ರಾಮಕೃಷ್ಣ ಕಾಮತ್ ಮತ್ತು ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿಯವರಾದ ಮಹಾದೇವ ಸ್ವಾಮಿವರು ಗೌರವ ಅತಿಥಿಗಳಾಗಿ ಭಾಗವಹಿಸಲಿರುವರು.
ರೋಟರಿ ಸಂಸ್ಥೆಯ ಅಧ್ಯಕ್ಷರಾದ ಇಲಿಯಾಸ್ ಸ್ಯಾಂಕ್ಟಿಸ್ರವರು ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು. ರೋಟರ್ಯಾಕ್ಟ್ ಸಂಸ್ಥೆಯ ಅಧ್ಯಕ್ಷರಾದ ರಾಜೇಶ್ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿರುವರು.
ಡಾ| ಶಶಿಕಿರಣ್ ಶೆಟ್ಟಿಯವರು ನಗರದ ಖ್ಯಾತ ಎಸ್.ಕೆ.ಎಸ್. ಪ್ಲಾನೆಟ್ ಗಗನಚುಂಬಿ ಅತ್ಯಾಧುನಿಕ ಸೌಲಭ್ಯವುಳ್ಳ 40 ಅಂತಸ್ತಿನ ಮತ್ತು 171ಐಷಾರಾಮಿ ವಸತಿಗೃಹ ಸಂಕೀರ್ಣ ಪ್ರಾಯೋಜಕರಾಗಿಯೂ ಖ್ಯಾತಿ ಗಳಿಸಿದ್ದಾರೆ.
ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಠಿತಸಂಘ – ಸಂಸ್ಥೆಗಳು ಡಾ| ಶೆಟ್ಟಿಯವರು ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಸಾಧಿಸಿದ ವಿಶಿಷ್ಟ ಸಾಧನೆಗಳನ್ನು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯವು ಅವರು ಉದ್ಯಮ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆ ಮತ್ತು ಸಮಾಜಕ್ಕೆ ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ 2015 ನೇ ಸಾಲಿನ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದೆ.
ರೋಟರಿ ಮತ್ತು ರೋಟರ್ಯಾಕ್ಟ್ ಸಂಸ್ಥೆಯ ಪ್ರತಿಷ್ಠಿತ ವಂದನಾ ಪ್ರಶಸ್ತಿಯನ್ನು ಪ್ರತಿ ವರ್ಷ ಕ್ರೀಡೆ, ವಾಣಿಜ್ಯೋದ್ಯಮ, ಶಿಕ್ಷಣ, ಕಲೆ, ಸಂಗೀತ, ಸಾಹಿತ್ಯ, ವಿಜ್ಞಾನ, ವೃತ್ತಿ ಸೇವೆ ಮತ್ತು ಸಮಾಜ ಸೇವೆ ರಂಗದಲ್ಲಿ ಸಲ್ಲಿಸಿದ ವಿಶಿಷ್ಟ ಸಾಧನೆಯನ್ನು ಪರಿಗಣಿಸಿ ಸಾಧಕರನ್ನು ಆಯ್ಕೆ ಮಾಡಲಾಗುವುದು.
ಇದು ನಮ್ಮ ಸಂಸ್ಥೆಯ ವೃತ್ತಿಪರ ಸೇವೆಯ ಯೋಜನೆಯ ಅಂಗವಾಗಿ ನೀಡಲಾಗುವುದು ಎಂದು ಡಾ. ದೇವದಾಸ್ ರೈ ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.