
ಮಂಗಳೂರು,ಎ.23: ಬೊಳ್ಳಿ ಮೂವೀಸ್ ಲಾಂಛನದಲ್ಲಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ಶರ್ಮಿಳಾ ಡಿ.ಕಾಪಿಕಾಡ್ ಮುಖೇಶ್ ಹೆಗ್ಡೆ, ಸಪ್ನಾ ಶ್ರೀನಿವಾಸ್ ಕಿಣಿ ನಿರ್ಮಾಣದಲ್ಲಿ ತಯಾರಾಗುತ್ತಿರುವ `ಬರ್ಸ’ ತುಳು ಚಲನ ಚಿತ್ರದ ಮೂಹೂರ್ತ ಸಮಾರಂಭವು ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶನಿವಾರ ಜರಗಿತು.
ಶರವು ರಾಘವೇಂದ್ರ ಶಾಸ್ತ್ರಿ ಕ್ಯಾಮರಾ ಚಾಲನೆ ಮಾಡಿದರು. ಉದ್ಯಮಿ ಮುಖೇಶ್ ಹೆಗ್ಡೆ ಎಕ್ಕಾರ್ ಕ್ಲ್ಯಾಪ್ ಮಾಡಿದರು. ನಿರ್ದೇಶಕ ದೇವದಾಸ್ ಕಾಪಿಕಾಡ್ ಮಾತನಾಡಿ ಬೊಳ್ಳಿ ಮೂವೀಸ್ ಲಾಂಛನದಲ್ಲಿ ತಯಾರಾಗುತ್ತಿರುವ ಮೂರನೇ ಚಿತ್ರ `ಬರ್ಸ’ದಲ್ಲಿ ಉತ್ತಮ ಹಾಸ್ಯ ಮನರಂಜನೆಯ ಜತೆಗೆ ಸಮಾಜಕ್ಕೆ ಒಳ್ಳೆಯ ಸಂದೇಶಭರಿತ ವಿಚಾರಗಳಿವೆ. ‘ಚಂಡಿಕೋರಿ’ ಚಿತ್ರತಂಡದಲ್ಲಿ ದುಡಿದ ಕಲಾವಿದರು ಈ ಸಿನಿಮಾದಲ್ಲೂ ಇದ್ದಾರೆ ಎಂದರು.

ಸಿನಿಮಾಕ್ಕೆ ಪಿ.ಎಲ್.ರವಿ ಛಾಯಾಗ್ರಹಣ, ಮಾಸ್ ಮಾದ ಸಾಹಸ ದೃಶ್ಯಗಳನ್ನು ಸಂಯೋಜಿಸಲಿದ್ದಾರೆ. ಹಿನ್ನಲೆ ಸಂಗೀತದಲ್ಲಿ ಕದ್ರಿ ಮಣಿಕಾಂತ್ ದುಡಿಯಲಿದ್ದಾರೆ.
ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ, ಸಂಗೀತ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ದೇವದಾಸ್ ಕಾಪಿಕಾಡ್ ವಹಿಸಿ ಕೊಂಡಿದ್ದಾರಲ್ಲದೆ ಪಾತ್ರವೊಂದನ್ನು ಕೂಡಾ ನಿರ್ವಹಿಸುತ್ತಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಸಚಿನ್ ಎ.ಎಸ್, ಉಪ್ಪಿನಂಗಡಿ ಹಾಗೂ ನಿರ್ಮಾಣ-ನಿರ್ವಹಣೆಯ ಜವಾಬ್ದಾರಿಯನ್ನು ರಾಜೇಶ್ ಕುಡ್ಲ ವಹಿಸಿದ್ದಾರೆ.
ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ. ಒಟ್ಟು 32 ದಿನಗಳಲ್ಲಿ ಸಿನಿಮಾಕ್ಕೆ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಮಂಗಳೂರು, ಬಜಪೆ, ಎಕ್ಕಾರ್, ಸಕಲೇಶಪುರ, ಹಾಸನ, ಮೂಡಿಗೆರೆ, ಚಿಕ್ಕಮಗಳೂರು ಮೊದಲಾದೆಡೆ ಸಿನಿಮಾಕ್ಕೆ ಚಿತ್ರೀಕರಣ ನಡೆಯಲಿದೆ. ತಾರಾಗಣದಲ್ಲಿ ಅರ್ಜುನ್ ಕಾಪಿಕಾಡ್ ನಾಯಕ ನಟರಾಗಿ ಕ್ಷಮಾ ಶೆಟ್ಟಿ ನಾಯಕಿಯಾಗಿ ಅಭಿನಯಿಸುತ್ತಿದ್ದು, ತುಳುರಂಗ ಭೂಮಿಯ ಕಲಾವಿದರಿಗೆ ಸಿನಿಮಾದಲ್ಲಿ ಅವಕಾಶ ಮಾಡಿಕೊಡಲಾಗಿದೆ.
ಮೂಹೂರ್ತ ಸಮಾರಂಭದಲ್ಲಿ ‘ದಬಕ್ ದಬಾ ಐಸಾ’ ಚಿತ್ರದ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ಉದ್ಯಮಿ ಮುಖೇಶ್ ಹೆಗ್ಡೆ, ದೇವದಾಸ್ ಕಾಪಿಕಾಡ್, ಶರ್ಮಿಳಾ ಡಿ.ಕಾಪಿಕಾಡ್, ಸಪ್ನಾ ಶ್ರೀನಿವಾಸ್ ಕಿಣಿ, ಲಕ್ಷ್ಮಣ್ ಕುಮಾರ್ ಮಲ್ಲೂರು, ಸಂತೋಷ್ ಶೆಟ್ಟಿ, ಚೇತನ್ ರೈ ಮಾಣಿ, ನಿತೇಶ್ ಸುವರ್ಣ, ಪ್ರಣವ್ ಹೆಗ್ಡೆ, ಮಣೀಷ. ತಿಮ್ಮಪ್ಪ ಕುಲಾಲ್, ಸದಾಶಿವ ಅಮೀನ್ ಗೀತಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.