
ಮಂಗಳೂರು,ಎ.23: ಎಳವೆಯಲ್ಲಿಯೇ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಅಗತ್ಯವಿದ್ದು, ಶಾಲಾ ಕಾಲೇಜುಗಳಲ್ಲಿ ಮಕ್ಕಳಿಂದಲೇ ಗಿಡಗಳನ್ನು ನೆಡುವ ಮೂಲಕ ಪರಿಸರ ಪಾಠಕ್ಕೆ ಚಾಲನೆ ನೀಡಬೇಕೇಂದು ಶ್ರೀಭೂತನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ ಹೇಳಿದರು. ಅವರು ಶುಕ್ರವಾರ ಆಂಟಿ ಪೊಲ್ಯುಷನ್ ಡ್ರೈವ್ (ಎಪಿಡಿ) ವತಿಯಿಂದ ಕೊಳಂಬೆ ಪನ ಪ್ರಿ ಯುನಿ ಕಾಲೇಜು ಹಸಿರು ಕ್ಯಾಂಪಸ್ಸಿನಲ್ಲಿ ಆಯೋಜಿಸಲಾದ ಅರ್ಥಪೂರ್ಣ ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮರಗಳನ್ನು ಕಡಿದು ಹಾಕಿರುವುದರಿಂದ ಇಂದು ಪರಿಸರ ಮಾಲಿನ್ಯ ಮತ್ತು ತಾಪಮಾನ ಹೆಚ್ಚಾಗುತ್ತಿದೆ. ಮಾಲಿನ್ಯ ನಿಯಂತ್ರಿಸಲು ಮತ್ತು ಸ್ವಚ್ಛ ಗಾಳಿಗಾಗಿ ಹೆಚ್ಚು ಹೆಚ್ಚು ಗಿಡಗಳನ್ನು ನೆಡುವುದು ಅಗತ್ಯವಾಗಿದೆ. ಜನರು ಇನ್ನಾದರು ಎಚ್ಚೆತ್ತುಕೊಂಡು ಹಸಿರು ಹೊದಿಕೆಯನ್ನು ಹೆಚ್ಚಿಸಿ ಉಳಿಸಿಕೊಳ್ಳಬೇಕು ಎಂದು ವಿಜಯನಾಥ ವಿಠಲ ಶೆಟ್ಟಿ ಹೇಳಿದರು.

ಸರಕಾರ ಪ್ಲಾಸ್ಟಿಕ್ ಉಪಯೋಗ ನಿಷೇಧಿಸುವ ಮೂಲಕ ಉತ್ತಮ ಕೆಲಸ ಮಾಡಿದೆ. ಹೆತ್ತವರು ಪ್ಲಾಸ್ಟಿಕ್ ಉಪಯೋಗಿಸದಂತೆ ಮಕ್ಕಳು ನಿಂಯತ್ರಣ ಹೇರಬೇಕು ಎಂದ ವಿಜಯನಾಥ ವಿಠಲ ಶೆಟ್ಟಿ ಅವರು ಮಂಗಳೂರಿನ ಸರಕಾರೇತರ ಸಂಸ್ಥೆ ಆಂಟಿ ಪೊಲ್ಯುಷನ್ ಡ್ರೈವ್ (ಎಪಿಡಿ) ನಡೆಸುತ್ತಿರುವ ಪರಿಸರ ಪರವಾದ ಕಾರ್ಯವನ್ನು ಶ್ಲಾಘಿಸಿದರು.
ವಾಹನಗಳ ದಟ್ಟಣೆಯಿಂದ ಹೆಚ್ಚಿನ ಪ್ರಮಾಣದ ವಾಯು ಮಾಲಿನ್ಯ ಆಗುತ್ತಿದೆ. ಮಾಲಿನ್ಯ ನಿಯಂತ್ರಿಸಲು ವೈಜ್ಞಾನಿಕ ಪ್ರಯತ್ನ ನಡೆಯಬೇಕು. ಉತ್ತಮ ಪರಿಸರಕ್ಕಾಗಿ ಎಪಿಡಿ ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸಲಿ ಎಂದು ಹಾರೈಸಿದರು.ಹಸಿರು ಪರಿಸರದಲ್ಲಿರುವ ಪನ ಕಾಲೇಜು ಭಾರತೀಯ ಗುರುಕುಲ ಮಾದರಿಯ ಶಿಕ್ಷಣ ನೀಡುತ್ತಿರುವುದು ಸ್ವಾಗತಾರ್ಹ. ಪರಿಸರದ ನಡುವೆಯೇ ಜೀವಶಾಸ್ತ್ರ, ಅರ್ಥಶಾಸ್ತ್ರ ಎಲ್ಲವನ್ನು ಕಲಿಯಬಹುದು. ಅದು ನೈಜ ಭಾರತೀಯ ಶಿಕ್ಷಣ ಎಂದು ವಿಜಯನಾಥ ವಿಠಲ ಶೆಟ್ಟಿ ಹೇಳಿದರು.
ಪನ ಕಾಲೇಜು ಪ್ರವರ್ತಕರಾದ ಡಾ.ಪ್ರಸಾದ್ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ ಪರಿಸರ ಸಹ್ಯವಾದ ಶಿಕ್ಷಣ ಸಂಸ್ಥೆಯನ್ನು ರೂಪಿಸಲಾಗುತ್ತಿದೆ. ಸಂಪೂರ್ಣ ಸೌರವಿದ್ಯುತ್ ಬಳಕೆ ಯೊಂದಿಗೆ ವಸತಿ ಶಾಲೆಗೆ ಬೇಕಾಗುವ ತರಕಾರಿಯನ್ನು ಕಾಲೇಜಿನ ಪರಿಸರದಲ್ಲೇ ವಿದ್ಯಾರ್ಥಿಗಳ ಉಸ್ತುವಾರಿಯಲ್ಲೇ ಬೆಳೆಸಲಾಗುತ್ತಿದೆ ಎಂದು ಪನ ಪ್ರಿ ಯುನಿ ಕಾಲೇಜಿನ ಸಿಓಓ ಉಷಾ ರಾವ್ ಹೇಳಿದರು.
ಕ್ಯಾಲಿಫೋರ್ನಿಯದ ಸಂತ ಬಾರ್ಬಾರ ತೈಲ ನಿಕ್ಷೇಪ ಪ್ರದೇಶದಲ್ಲಿ ಬೃಹತ್ ಪ್ರಮಾಣದ ಕಚ್ಚಾ ತೈಲ 1969ರಲ್ಲಿ ಸೋರಿಕೆಯಾಗಿ ಉಂಟಾದ ಸಾಗರ ಪರಿಸರ ವಿನಾಶದ ಹಿನ್ನೆಲೆಯಲ್ಲಿ ಏಪ್ರಿಲ್ 22ರಂದು ವಿಶ್ವ ಭೂಮಿ ದಿನ ಆಚರಿಸಲು ಆರಂಭವಾಗಿದ್ದು, ಇಂದು ವಿಶ್ವದಾದ್ಯಂತ ಪರಿಸರ ಸಂರಕ್ಷಣೆಯ ಅರಿವು ಮೂಡಿಸಲು ಅರ್ಥ್ ಡೇ ಆಚರಣೆಯ ಮಹತ್ವವನ್ನು ಉಷಾ ರಾವ್ ವಿವರಿಸಿದರು. ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಭಾಷಣ, ಚಿತ್ರಕಲೆ, ರಸಪ್ರಶ್ನೆ ಸ್ಪರ್ಧೆಗಳನ್ನು, ಹಸಿ ಮಣ್ಣಿನ ಗದ್ದೆಯಲ್ಲಿ ಕಬಡ್ಡಿ ಪಂದ್ಯಾಟ, ಹಸಿರು ಕ್ಯಾಂಪಸ್ ಟೂರ್ ಇತ್ಯಾದಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಸ್ಪರ್ಧಾ ಕಾರ್ಯಕ್ರಮಗಳನ್ನು ಸಂಪನ್ಮೂಲ ವ್ಯಕ್ತಿ ಮಹೇಶ್ ನಾಯಕ್ ಬೋವಿಕಾನ, ಸೆಂಟರ್ ಫಾರ್ ಇಂಟಗ್ರೇಡೆಟ್ ಲರ್ನಿಂಗ್ ನಿರ್ದೇಶಕಿ ಸಚಿತಾ ನಂದಗೋಪಾಲ್, ಸಂಚಾಲಕ ನಂದಗೋಪಾಲ್ ಶ್ರೀನಿವಾಸನ್, ದೈಹಿಕ ಶಿಕ್ಷಕ ಪ್ರೇಮನಾಥ ಶೆಟ್ಟಿ ನಡೆಸಿಕೊಟ್ಟರು.
ಉದ್ಘಾಟನಾ ಸಮಾರಂಭದಲ್ಲಿ ಪನ ಕಾಲೇಜಿನ ಉಪಾಧ್ಯಕ್ಷ ಶಾಮ್ ಶೆಟ್ಟಿ, ಸ್ನೇಹಾ ಶೆಟ್ಟಿ, ಸುಯಶಾ ಶೆಟ್ಟಿ, ಎಪಿಡಿ ಸಂಚಾಲಕ ಅರ್ಜುನ್, ಸಂವಹನ ಸಂಯೋಜಕ ಭಾಸ್ಕರ ಅರಸ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಧಿನಿ ನಮನಾ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಸುಚಿತಾ ಶೆಟ್ಟಿ ಸ್ವಾಗತಿಸಿ ಎಪಿಡಿ ಪ್ರತಿಷ್ಠಾನ ನಿರ್ದೇಶಕ ಅಬ್ದುಲ್ಲ ರೆಹಮಾನ್ ವಂದಿಸಿದರು.
ವಿವಿಧ ಸ್ಪರ್ಧೆಯಲ್ಲಿ ಜಯಗಳಿಸಿದವರಿಗೆ ಬಹುಮಾನ ವಿತರಿಸಲಾಯಿತು.