ನ್ಯೂಯಾರ್ಕ್, ಏ.21- ಇಶ್ರತ್ ಜಹಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಅರುಣ್ ಜೈಟ್ಲಿ, ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ದೇಶದ ಭದ್ರತಾ ವಿಷಯದಲ್ಲಿ ರಾಜಿ ಮಾಡಿಕೊಂಡಿತ್ತು ಎಂದು ಗಂಬೀರ ಆರೋಪ ಮಾಡಿದ್ದಾರೆ.
ಇಶ್ರತ್ ಪ್ರಕರಣದ ಮರು ವಿಚಾರಣೆಗೆ ಆದೇಶಿಸಲಾಗುವುದೇ ಎಂಬ ಪ್ರಶ್ನೆಗೆ, ಈ ಬಗ್ಗೆ ಭಾರತದಲ್ಲಿ ಯಾವ ರೀತಿ ಮಾತುಕತೆಗಳು ನಡೆದಿವೆ ಎಂಬುದು ತಿಳಿದಿಲ್ಲ. ಆ ಬಗ್ಗೆ ಮಾಹಿತಿ ಪಡೆಯಬೇಕಾಗಿದೆ ಎಂದು ಜೈಟ್ಲಿ ಉತ್ತರಿಸಿದರು. ಒಟ್ಟಾರೆ ತನ್ನ ರಾಜಕೀಯ ಕಾರಣಗಳಿಗಾಗಿ ರಾಷ್ಟ್ರದ ಭದ್ರತೆ ವಿಷಯದಲ್ಲಿ ಅಂದು ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರ ರಾಜಿ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ.
2009ರಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಪಿ.ಚಿದಂಬರಂ ಸಲ್ಲಿಸಿರುವ ಅಫಿಡವಿಟ್ನಲ್ಲಿ ಇಶ್ರತ್ ಜಹಾನ್ ಲಷ್ಕರ್-ಇ-ತಯ್ಬಾ ಸಂಘಟನೆಗೆ ಸೇರಿದವಳು ಎಂದು ಸ್ಪಷ್ಟಪಡಿಸಲಾಗಿದೆ. ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಹತ್ಯೆಯ ಸಂಚಿನಲ್ಲಿ ಇಶ್ರತ್ ಭಾಗಿಯಾಗಿದ್ದಳು ಎಂದು ಜೈಟ್ಲಿ ಹೇಳಿದ್ದಾರೆ. ಆದರೆ, ಈ ವಾದಗಳನ್ನು ತಳ್ಳಿ ಹಾಕಿರುವ ಕಾಂಗ್ರೆಸ್ ವಿಚಾರಣೆಯ ಹಾದಿ ತಪ್ಪಿಸಲು ಬಿಜೆಪಿ ಸುಳ್ಳಿನ ಸರಮಾಲೆಯನ್ನೇ ಹೆಣೆಯುತ್ತಿದೆ ಎಂದು ಹೇಳಿದೆ. ವಿದ್ಯಾರ್ಥಿನಿ ಇಶ್ರತ್ ಜಹಾನ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ಗಾಂಧಿ ಅವರ ಪಾತ್ರ ಏನೂ ಇಲ್ಲ ಎಂದು ಕಾಂಗ್ರಸ್ ಸ್ಪಷ್ಟಪಡಿಸಿದೆ.