ಬೆಂಗಳೂರು,ಏ.11-ಭಾರತೀಯ ಜನತಾಪಕ್ಷ ಭ್ರಷ್ಟಜನರ ಪಾರ್ಟಿ ಎಂದು ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿ ಹೆಸರು ಬದಲಿಸಿಕೊಳ್ಳಿ ಎಂದು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಲೇವಡಿ ಮಾಡಿದರು. ಸುದ್ದಿಗೋಷ್ಠಿಯನ್ನದ್ದೇಶಿಸಿ ಮಾತನಾಡಿದ ಅವರು, ಅಧಿಕಾರಕ್ಕಾಗಿ ಭ್ರಷ್ಟಾಚಾರ ವಿಚಾರದಲ್ಲೂ ಬಿಜೆಪಿ ರಾಜಿ ಮಾಡಿಕೊಳ್ಳಲು ಸಿದ್ಧ್ದವಿದೆ ಎಂಬುದು ಯಡಿಯೂರಪ್ಪ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಮೂಲಕ ತೋರಿಸಿದೆ ಎಂದು ಟೀಕಿಸಿದರು.
2011ರಲ್ಲಿ ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದು ಯಾವ ಕಾರಣಕ್ಕಾಗಿ ಎಂದು ಪ್ರಶ್ನಿಸಿದ ಅವರು, ಯಾವ ಬದಲಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ವ್ಯಂಗ್ಯವಾಡಿದರು. ವಿಧಾನಪರಿಷತ್ ಸದಸ್ಯ ರೇವಣ್ಣ ಮಾತನಾಡಿ, ಭ್ರಷ್ಟಾಚಾರ ಆರೋಪವಿರುವ, ಜೈಲಿಗೆ ಹೋಗಿ ಬಂದವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು. ಭ್ರಷ್ಟಾಚಾರ ರಹಿತ ರಾಷ್ಟ್ರ ನಿರ್ಮಾಣ ಘೋಷಣೆ ಮಾಡಿದ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಭ್ರಷ್ಟಾಚಾರ ಆರೋಪದಲ್ಲಿ ಮುಂಚೂಣಿಯಲ್ಲಿದ್ದವರಿಗೆ ಮಣೆ ಹಾಕಿದ್ದಾರೆ ಎಂದರು.
ರಾಜ್ಯ ಸರ್ಕಾರದ ಮುಖ್ಯ ಸಚೇತಕ ಪಿ.ಎಂ.ಅಶೋಕ್ ಮಾತನಾಡಿ, ಒಂದು ಪಕ್ಷದ ಅಧ್ಯಕ್ಷರನ್ನು ಇಡೀ ರಾಜ್ಯಕ್ಕೆ ಬಿಂಬಿಸುತ್ತಿರುವುದು ತರವಲ್ಲ. ಅಧಿಕಾರ ಸ್ವೀಕಾರಕ್ಕೆ ಮುನ್ನವೇ ಯಡಿಯೂರಪ್ಪನವರು ಸಿಎಂ ಆಗಿಯೇ ಹೋದರು ಎಂದು ಬಿಂಬಿಸುತ್ತಿದ್ದಾರೆ. ಹಾಗಿದ್ದ ಮೇಲೆ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದೇಕೆ ಎಂದು ಪ್ರಶ್ನಿಸಿದರು.