
ಮಂಗಳೂರು,ಎಪ್ರಿಲ್.3: ಆರ್ಟಿಐ ಕಾರ್ಯಕರ್ತ ವಿನಾಯಕ್ ಪಾಂಡುರಂಗ ಬಾಳಿಗಾ ಕೊಲೆ ಪ್ರಕರಣದ ಪ್ರಮುಖ ಸೂತ್ರಧಾರಿ ಯುವ ಬ್ರಿಗೇಡ್ ನಾಯಕ ನರೇಶ್ ಶೆಣೈ ಎಂಬ ಶಂಕೆಯ ಆಧಾರದಲ್ಲಿ ತನಿಖಾತಂಡ ಆತನ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿದೆ. ನರೇಶ್ ಶೆಣೈ ಜೊತೆ ನಾಪತ್ತೆಯಾಗಿದ್ದಾರೆ ಎನ್ನಲಾದ ಶಿವ ಹಾಗೂ ಶ್ರೀಕಾಂತ್ಗಾಗಿ ಈಗಾಗಲೇ ಲುಕ್ಔಟ್ ನೋಟಿಸ್ ಹೊರಡಿಸಿದ್ದು, ಆರೋಪಿಗಳ ಜಾಡು ಹಿಡಿದಿರುವ ಪೊಲೀಸರು ಅಂಡಮಾನ್, ನಿಕೋಬಾರ್ ದ್ವೀಪ ಸಮೂಹ ಮತ್ತು ಗೋವಾಕ್ಕೆ ತೆರಳಿದ್ದಾರೆ.
ನರೇಶ್ ಶೆಣೈ ಮನೆ ಮೇಲೆ ಪೊಲೀಸರು ದಾಳಿ ನಡೆಸಿ ಜಾಲಾಡಿದ್ದಾರೆ. ನರೇಶ್ ವಾರದಿಂದ ನಾಪತ್ತೆಯಾಗಿದ್ದು, ಆತನ ಜೊತೆ ಸಂಪರ್ಕ ಇರಿಸಿದ್ದ ಶಿವ ಮತ್ತು ಶ್ರೀಕಾಂತ್ ಕೂಡಾ ಜೊತೆಯಲ್ಲೇ ತಲೆಮರೆಸಿಕೊಂಡಿರಬೇಕೆಂದು ಶಂಕಿಸಲಾಗಿದೆ. ಕೊಲೆಕೃತ್ಯದ ಬಳಿಕ ಆರೋಪಿಗಳು ಪರಾರಿಯಾಗಲು ಬಳಸಿದ್ದ ಕ್ವಾಲಿಸ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳೆದ ಮಾರ್ಚ್ ೨೧ರ ಮುಂಜಾನೆ ದೇವಳಕ್ಕೆ ಹೊರಟಿದ್ದ ಬಾಳಿಗಾರನ್ನು ಪಿವಿಎಸ್ ಕಲಾಕುಂಜ ಬಳಿ ಇರುವ ಅವರ ಮನೆಯ ಸಮೀಪವೇ ದುಷ್ಕರ್ಮಿಗಳು ಕಡಿದು ಕೊಲೆಗೈದಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಬಾಡಿಗೆ ಹಂತಕರಾದ ನಿಶಿತ್ ದೇವಾಡಿಗ ಹಾಗೂ ವಿನಿತ್ ಪೂಜಾರಿಯನ್ನು ಈಗಾಗಲೇ ಬಂಧಿಸಲಾಗಿದೆ. ಅವರು ನೀಡಿದ ಮಾಹಿತಿಯಂತೆ ಪ್ರಧಾನ ಸೂತ್ರಧಾರನ ಚಲನವಲನಗಳ ಮೇಲೆ ಪೊಲೀಸರು ಕಣ್ಣಿಟ್ಟಿರುವ ಪೊಲೀಸರು ಇದೀಗ ಆರೋಪಿಗಳ ಪತ್ತೆಗಾಗಿ ಅಂಡಮಾನ್, ನಿಕೋಬಾರ್ ದ್ವೀಪ ಸಮೂಹ ಮತ್ತು ಗೋವಾಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.