
ಮಂಗಳೂರು : ಬೈಕಂಪಾಡಿ ಮತ್ತು ಬಿ.ಸಿ. ರೋಡ್ ನೂತನ ಸೇತುವೆಗಳ ಉದ್ಘಾಟನಾ ಸಮಾರಂಭ, ವಿವಿಧ ಹೆದ್ದಾರಿ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ಇಂದು ಮಧ್ಯಾಹ್ನ ಪಣಂಬೂರು ಎನ್ಎಂಪಿಟಿ ಜವಾಹರ್ಲಾಲ್ ನೆಹರೂ ಸಭಾಂಗಣದಲ್ಲಿ ನಡೆಯಿತು.
ಈಗಾಗಲೇ ಕರ್ನಾಟಕದಲ್ಲಿ ಹೊಸದಾಗಿ 3,294 ಕಿ. ಮೀ. ರಸ್ತೆಯನ್ನು ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಗಿದ್ದು, ಇನ್ನೂ ಹೆಚ್ಚುವರಿಯಾಗಿ 4,000 ಕಿ.ಮೀ. ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲಾಗುವುದು ಎಂದು ಕೇಂದ್ರ ರಾಷ್ಟ್ರೀಯ ಹೆದ್ದಾರಿ, ಭೂಸಾರಿಗೆ ಹಾಗೂ ನೌಕಾಯಾನ ಸಚಿವ ನಿತಿನ್ ಗಡ್ಕರಿ ಹೇಳಿದರು.

ನಾನು ಸಚಿವನಾಗಿ ಅಧಿಕಾರ ವಹಿಸಿಕೊಂಡಾಗ ಕರ್ನಾಟಕದಲ್ಲಿ 7,018 ಕಿ. ಮೀ. ರಾಷ್ಟ್ರೀಯ ಹೆದ್ದಾರಿ ಇತ್ತು. ಬಳಿಕ 3,294 ಕಿ.ಮೀ. ರಸ್ತೆಯನ್ನು ರಾ.ಹೆ. ಆಗಿ ಮೇಲ್ದರ್ಜೆಗೇರಿಸಲಾಗಿದ್ದು, 10,300 ಕಿ.ಮೀ.ಗೇರಿದೆ. ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚುವರಿಯಾಗಿ 4,000 ಕಿ.ಮೀ. ಸೇರ್ಪಡೆಗೊಳಿಸಲು ಕ್ರಮಕೈಗೊಳ್ಳುತ್ತೇನೆ ಎಂದು ಈ ಸಂಧರ್ಭದಲ್ಲಿ ಹೇಳಿದರು.
2 ಲಕ್ಷ ಕಿ.ಮೀ. ರಾ.ಹೆ. ಗುರಿ: ಎನ್ಡಿಎ ಅಧಿಕಾರ ವಹಿಸಿಕೊಂಡಾಗ ದೇಶದಲ್ಲಿ ಇದ್ದ 96,000 ಕಿ. ಮೀ. ರಾಷ್ಟ್ರೀಯ ಹೆದ್ದಾರಿ ಪ್ರಮಾಣವನ್ನು 1.5 ಲಕ್ಷ ಕಿ. ಮೀ.ಗೇರಿಸಲಾಗಿದೆ. ಮುಂದಿನ 3 ವರ್ಷಗಳಲ್ಲಿ ಇದನ್ನು 2 ಲಕ್ಷ ಕಿ. ಮೀ.ಗೇರಿಸುವ ಗುರಿ ಹೊಂದಲಾಗಿದ್ದು, 5 ಲಕ್ಷ ಕೋ. ರೂ. ವಿನಿಯೋಗಿಸಲಾಗುವುದು ಎಂದರು.
ಮಂಗಳೂರು-ಮುಂಬಯಿ ನಡುವೆ ಜಲಸಾರಿಗೆ: ಡಿವಿಎಸ್
ಮುಖ್ಯ ಅತಿಥಿಯಾಗಿದ್ದ ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಮಾತನಾಡಿ, ಕರ್ನಾಟಕದ ಕರಾವಳಿ ನದಿಗಳು ಹಾಗೂ ಜಲಮಾರ್ಗ ಹೊಂದಿದ್ದು, ಜಲಸಾರಿಗೆ ಆರಂಭಿಸಲು ಪೂರಕವಾಗಿದೆ. ಮಂಗಳೂರು-ಮುಂಬಯಿ ಮಧ್ಯೆ ಜಲಸಾರಿಗೆ ಆರಂಭಿಸಲು ಉತ್ತಮ ಅವಕಾಶವಿದ್ದು, ಈ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳಬೇಕು ಎಂದು ಸಚಿವ ನಿತಿನ್ ಗಡ್ಕರಿ ಅವರಲ್ಲಿ ಮನವಿ ಮಾಡಿದರು. ಕಳೆದ 2 ವರ್ಷಗಳಲ್ಲಿ ದೇಶದ ಸಾರಿಗೆ ಸಂಪರ್ಕ ಕ್ಷೇತ್ರದಲ್ಲಿ ಹೊಸ ಶಕೆಯೊಂದು ಆರಂಭಗೊಂಡಿದೆ ಎಂದು ಅವರು ಹೇಳಿದರು.
ಶಿರಾಡಿ ಘಾಟಿ: ಸುರಂಗಮಾರ್ಗದ ಡಿಪಿಆರ್ ಶೀಘ್ರ ಸಲ್ಲಿಕೆ: ಸಚಿವ ಡಾ| ಮಹಾದೇವಪ್ಪ
ಶಿರಾಡಿ ಘಾಟಿಯಲ್ಲಿ 23 ಕಿ. ಮೀ. ಉದ್ದದ ಸುರಂಗಮಾರ್ಗ ಯೋಜನೆಗೆ ಜೈಕಾ ಕಂಪೆನಿಯಿಂದ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧªಪಡಿಸುವ ಕಾರ್ಯ ನಡೆಯುತ್ತಿದ್ದು, ಇನ್ನೆರಡು ತಿಂಗಳಿನಲ್ಲಿ ಇದನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ರಾಜ್ಯ ಲೋಕೋಪಯೋಗಿ ಸಚಿವ ಡಾ| ಎಚ್.ಸಿ. ಮಹಾದೇವಪ್ಪ ಹೇಳಿದರು.
ಹಿಂದೆ ಯುಪಿಎ ಸರಕಾರದ ಅವಧಿಯಲ್ಲಿ ಆಸ್ಕರ್ ಫೆರ್ನಾಂಡಿಸ್ ಅವರು, ಶಿರಾಡಿಘಾಟಿ ರಸ್ತೆ ದುಃಸ್ಥಿತಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಸ್ತೆ ಅಭಿವೃದ್ಧಿ ಯೋಜನೆ ಮಂಜೂರು ಮಾಡಿಸಿದ್ದರು. ಇದರಂತೆ ಪ್ರಥಮ ಹಂತದ ಕಾಮಗಾರಿ ಆಗಿದೆ. 2ನೇ ಹಂತದ ಕಾಮಗಾರಿಗೆ ಇಂದು ಶಿಲಾನ್ಯಾಸ ಆಗಿದ್ದು, ಇದಕ್ಕೆ ಸ್ಪಂದಿಸಿರುವ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಕರ್ನಾಟಕ ಹಾಗೂ ದ. ಕನ್ನಡ ಜಿಲ್ಲೆಯ ಎಲ್ಲ ಯೋಜನೆಗಳಿಗೆ ಪೂರಕವಾಗಿ ಸ್ಪಂದಿಸಿರುವ ಸಚಿವ ನಿತಿನ್ ಗಡ್ಕರಿ ಅವರನ್ನು ಜಿಲ್ಲೆಯ ಪರವಾಗಿ ಅಭಿನಂದಿಸುತ್ತಿದ್ದೇನೆ. ಜಿಲ್ಲೆಯಲ್ಲಿ ಹೊಸದಾಗಿ 3 ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಮನವಿ ಮಾಡಲಾಗಿದ್ದು, ಇದಕ್ಕೆ ಸಚಿವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದರು.
ಶಾಸಕ ಮೊದೀನ್ ಬಾವಾ, ವಿಧಾನ ಪರಿಷತ್ ಸದಸ್ಯ ಗೋಪಾಲ ಸ್ವಾಮಿ, ಮಹಾನಗರ ಪಾಲಿಕೆ ಉಪಮೇಯರ್ ಸುಮಿತ್ರಾ ಕರಿಯ, ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಅತಿಥಿಯಾಗಿದ್ದರು. ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಉಪಸ್ಥಿತರಿದ್ದರು. ರಾ.ಹೆ. ಮುಖ್ಯ ಎಂಜಿನಿಯರ್ ಲಕ್ಷ್ಮಣ್ರಾವ್ ಪೇಶ್ವೆ ಸ್ವಾಗತಿಸಿದರು.
ಶಿಲಾನ್ಯಾಸ: ರಾ.ಹೆ.75ರಲ್ಲಿ (ಹಿಂದಿನ ರಾ.ಹೆ. 48)
– ಹಾಸನ-ಮಾರನಹಳ್ಳಿ ವಿಭಾಗದಲ್ಲಿ ಚತುಷ್ಪಥ ರಸ್ತೆಯಾಗಿ ವಿಸ್ತರಣೆ (ಪ್ಯಾಕೇಜ್-1)
– ಅಡ್ಡಹೊಳೆ (ಗುಂಡ್ಯಸಮೀಪ)-ಬಿ.ಸಿ. ರೋಡು ವಿಭಾಗದಲ್ಲಿ ಚತುಷ್ಪಥ ರಸ್ತೆಯಾಗಿ ವಿಸ್ತರಣೆ (ಪ್ಯಾಕೇಜ್-2)
– ಗುಳಗಳಲೆ-ಮಾರ್ನಹಳ್ಳಿ ಡಾಮಾರು ಕಾಮಗಾರಿ ಹಾಗೂ ಕೆಂಪುಹೊಳೆ – ಅಡ್ಡಹೊಳೆ ಕಾಂಕ್ರೀಟ್ ಕಾಮಗಾರಿ ರಾಷ್ಟ್ರಕ್ಕೆ ಸಮರ್ಪಣೆ
– ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕಂಪಾಡಿ ಮೇಲ್ಸೇತುವೆ ಹಾಗೂ ರಾ.ಹೆ. 75ರಲ್ಲಿ ಬಿ.ಸಿ. ರೋಡು ಮೇಲ್ಸೇತುವೆ
– ಶಿರಾಡಿ ಘಾಟಿಯಲ್ಲಿ ರಾ.ಹೆ. 75ರಲ್ಲಿ ಕಾಂಕ್ರೀಟೀಕರಣ ಹಾಗೂ ವಿಸ್ತರಣೆಗೊಂಡ ಕಾಮಗಾರಿ