
ಭಾವ್ ನಗರ: ಹಸುಗಳ ಮೇಲಿನ ಪ್ರೀತಿ, ಭಕ್ತಿ ಏನೆಲ್ಲಾವನ್ನು ಮಾಡಿಸುತ್ತೆ ಅನ್ನೋದಕ್ಕೆ ಇದೊಂದು ಜ್ವಲಂತ ಉದಾಹರಣೆ. ಗೋರಕ್ಷಣೆಯ ಸಂದೇಶ ಸಾರಲು ಗುಜರಾತಿನ ಭಾವ್ ನಗರದ ಗುಂಪೊಂದು ಬರೊಬ್ಬರಿ 18 ಲಕ್ಷ ವೆಚ್ಚದಲ್ಲಿ ಹಸುಗಳ ಮದುವೆ ಮಾಡಿ ಸುದ್ದಿಯಾಗಿದೆ.
ಪೂನಮ್ ಎಂಬ ಹಸುವನ್ನು ಅರ್ಜುನ್ ಎಂಬ ಎತ್ತಿನ ಜೊತೆ ಮದುವೆ ಮಾಡಿಸಲಾಯಿತು. ಪೂನಮ್ ಹಾಗೂ ಅರ್ಜುನ್ ಸಂಬಂಧಿಕರು ಸೇರಿದಂತೆ 300 ಅತಿಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.
ವಧುವಿಗೆ ಚಿನ್ನದ ಆಭರಣಗಳನ್ನು ತೊಡಿಸಲಾಗಿತ್ತು. ಕೆಂಪು ಸೀರೆ ಉಡಿಸಲಾಗಿತ್ತು. ಅರ್ಜುನ್ ಗೆ ಬಿಳಿ ಬಟ್ಟೆ ಹಾಕಲಾಗಿತ್ತು.
ಮಂತ್ರೋಚ್ಚಾರಣೆ ನಡುವೆ ಸಂಪ್ರದಾಯಬದ್ದವಾಗಿ ವಿವಾಹ ಮಾಡಲಾಯಿತು. ಮದುವೆಗಾಗಿ 18 ಲಕ್ಷ ವೆಚ್ಚ ಮಾಡಲಾಗಿದೆ.ಪರಸನಾ ಚಾರಿಟೆಬಲ್ ಟ್ರಸ್ಟ್ ಈ ವಿವಾಹ ಮಹೋತ್ಸವ ನೆರವೇರಿಸಿತು. ಸಮಾಜದಲ್ಲಿ ಗೋವಿನ ಬೆಲೆ ಕಟ್ಟಲಾಗದ್ದು ಎಂಬುದನ್ನು ಸಾರಲು ಈ ಮದುವೆಯನ್ನು ಆಯೋಜಿಸಲಾಗಿತ್ತು.
ಕಳೆದ 30 ವರ್ಷಗಳಿಂದ ಆಕಳುಗಳ ಜತೆ ಬದುಕಿದ್ದೇನೆ. ನನ್ನ ಮಕ್ಕಳಿಗೆ ಈ ರೀತಿಯ ಅದ್ಧೂರಿ ವಿವಾಹ ಮಾಡುವ ಯೋಚನೆ ನನಗಿಲ್ಲ. ಆದರೆ ನನ್ನ ಪ್ರೀತಿಯ ಮಗಳು ಪೂನಮ್ ಮದುವೆಯನ್ನು ಅತ್ಯಂತ ಅದ್ಧೂರಿಯಾಗಿ ನೆರವೇರಿಸಿದ್ದೇನೆ ಎಂದು ಪರಸನಾ ಚಾರಿಟೇಬಲ್ ಟ್ರಸ್ಟ್ ನ ವಿಜಯಬಾಯಿ ಹೇಳಿದ್ದಾರೆ.
ವಿವಾಹ ಸಮಾರಂಭದಲ್ಲಿ ಗುಜರಾತಿ ದಾಲ್, ಪುಲ್ವಾಡಿ, ಲಡ್ವಾ ಸೇರಿದಂತೆ ಹಲವು ರೀತಿಯ ಬೋಜನ ತಯಾರಿಸಲಾಗಿತ್ತು.