ಕರ್ನಾಟಕ

ರಾಜ್ಯ ಬಿಜೆಪಿ ಹುದ್ದೆಗೆ ಯಡ್ಯೂರಪ್ಪ ಮತ್ತು ಸಿ.ಟಿ ರವಿ ಪೈಪೋಟಿ

Pinterest LinkedIn Tumblr

33

ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕದ ಸಮಯ ಹತ್ತಿರವಾಗುತ್ತಿದ್ದಂತೆಯೇ ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿದ್ದ ಬಹುತೇಕರು ಹಿನ್ನೆಲೆಗೆ ಸರಿದಿದ್ದು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಶಾಸಕ ಸಿ.ಟಿ.ರವಿ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದೆ.

ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿ, ಜಾತಿ ಸಮೀಕರಣ, ಚುನಾವಣಾ ತಂತ್ರಗಾರಿಕೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ, ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಗುಣ ಮೊದಲಾದ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ನಾಯಕರು ಹೊಸ ಅಧ್ಯಕ್ಷರನ್ನು ಶೀಘ್ರವೇ ನೇಮಕ ಮಾಡಲಿದ್ದಾರೆ.

ಈಗ ಅಧ್ಯಕ್ಷರಾಗುವವರಿಗೆ 2018ರ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರದ ನೇತೃತ್ವ ವಹಿಸುವ ಅವಕಾಶ ಸಿಗುವುದರಿಂದ ಮತ್ತು ಆ ಚುನಾವಣೆಯಲ್ಲಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೇರುವ ಸಾಧ್ಯತೆ ಇದೆ ಎಂದು ಮುಖಂಡರೆಲ್ಲರೂ ವಿಶ್ವಾಸ ಹೊಂದಿರುವುದರಿಂದ ರಾಜ್ಯ ಅಧ್ಯಕ್ಷ ಹುದ್ದೆಯ ಮಹತ್ವ ಹೆಚ್ಚಾಗಿದೆ. ಹೀಗಾಗಿ ಪಕ್ಷದ ಹಲವು ನಾಯಕರು ಈ ಹುದ್ದೆ ಮೇಲೆ ಕಣ್ಣಿಟ್ಟಿದ್ದರು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಾವು ಅಧ್ಯಕ್ಷ ಹುದ್ದೆಗೆ ಆಕಾಂಕ್ಷಿ ಎಂದು ಬಹಿರಂಗವಾಗಿ ಹೇಳದಿದ್ದರೂ ಪರೋಕ್ಷವಾಗಿ ಈ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧ ಎಂದು ಹಲವು ಬಾರಿ ಸಂದೇಶ ರವಾನಿಸುತ್ತಲೇ ಇದ್ದಾರೆ. ಸಿ.ಟಿ.ರವಿ ಸಹ ಅಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿದ್ದು ಗುಟ್ಟಾಗಿ ಉಳಿದಿಲ್ಲ. ಹಾಲಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರನ್ನೇ ಮತ್ತೊಂದು ಅವಧಿಗೆ ಮುಂದುವರಿಸುತ್ತಾರೆಂಬ ಮಾತುಗಳೂ ಕೇಳಿಬಂದಿದ್ದವು.

ಅಧ್ಯಕ್ಷರನ್ನು ನೇಮಕ ಮಾಡುವ ಸಮಯ ಹತ್ತಿರವಾಗುತ್ತಿದ್ದಂತೆಯೇ ಆಕಾಂಕ್ಷಿಗಳ ಸಂಖ್ಯೆ ಕರಗುತ್ತಿದ್ದು, ಬಿಎಸ್‌ವೈ ಮತ್ತು ಸಿ.ಟಿ.ರವಿ ಮಧ್ಯೆ ಪೈಪೋಟಿ ಏರ್ಪಡುವ ಲಕ್ಷಣಗಳು ಕಾಣಿಸುತ್ತಿವೆ.

Write A Comment