
ಉತ್ತರ ಪ್ರದೇಶ: ಟಿ20 ವಿಶ್ವಕಪ್ ಪಂದ್ಯಾವಳಿಯ ಅತೀ ರೋಚಕ ಪಂದ್ಯಗಳಲ್ಲಿ ಒಂದಾದ ಭಾರತ-ಬಾಂಗ್ಲಾದೇಶ ನಡುವಣ ಹೈವೋಲ್ಟೇಜ್ ಪಂದ್ಯದ ಕೊನೆಯ ಓವರ್ ನ ಪ್ರತಿ ಎಸೆತಗಳು ಟೀಂ ಇಂಡಿಯಾ ಅಭಿಮಾನಿಗಳ ಹೃದಯ ಬಡಿತ ಹೆಚ್ಚಾಗಿಸಿತ್ತು. ಈ ನಡುವೆ ಉತ್ತರಪ್ರದೇಶದಲ್ಲಿ ವ್ಯಕ್ತಿಯೊರ್ವನಿಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾನೆ.
ನಾಯಕ ಎಂಎಸ್ ಧೋನಿ ನಿಗದಿಗಿಂತ ಕೊನೆಯ ಓವರ್ ಗೆ ಹೆಚ್ಚು ಸಮಯ ತೆಗೆದುಕೊಂಡಿದ್ದರು. 10 ರಿಂದ 11 ನಿಮಿಷಗಳ ಕಾಲ ಒಂದು ಓವರ್ ಆಡಿಸಿದ ಧೋನಿ ತಂಡಕ್ಕೆನೋ ಗೆಲುವು ತಂದುಕೊಟ್ಟರು. ಆದರೆ, ಓವರ್ ನ ಎರಡನೇ ಹಾಗೂ ಮೂರನೇ ಎಸೆತವನ್ನು ಬಾಂಗ್ಲಾ ಆಟಗಾರ ಬೌಂಡರಿಗಟ್ಟಿದ್ದನ್ನು ಕಂಡ ಅಭಿಮಾನಿಯೊಬ್ಬನಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದು, ಸೋಲಿನ ಕಹಿ ಉಂಡರೆ ಹೊರತು ಗೆಲುವಿನ ಸಹಿ ನೋಡಲು ಅವರೇ ಉಳಿಯಲಿಲ್ಲ.
ಉತ್ತರ ಪ್ರದೇಶ ಗೋರಕ್ ಪುರ್ ನ ನಿವಾಸಿಯಾದ ಓಂ ಪ್ರಕಾಶ್ ಶುಕ್ಲ ಎಂಬವರು ಮನೆಯಲ್ಲಿಯೇ ಭಾರತ-ಬಾಂಗ್ಲಾ ಪಂದ್ಯ ವೀಕ್ಷಿಸುತ್ತಿದ್ದರು. ಪಂದ್ಯದ ಕೊನೇಯ ಕುತೂಹಲ ಘಟ್ಟವಾದ ಪಾಂಡ್ಯಾ ಓವರ್ ನಲ್ಲಿ ಬಾಂಗ್ಲಾ ಆಟಗಾರ ರಹೀಮ್ ಸತತ ಎರಡು ಬೌಂಡರಿಗಳನ್ನು ಬಾರಿಸುವುದರ ಮೂಲಕ ಪಂದ್ಯವನ್ನು ಮತ್ತಷ್ಟು ರೋಚಕತೆಗೆ ಎಳೆದೊಯ್ದಿದ್ದರು. ಆದರೆ ಈ ವೇಳೆ ಪಂದ್ಯ ವೀಕ್ಷಿಸುತ್ತಿದ್ದ ಶುಕ್ಲ ಗೆ ರಹೀಮ್ ಬಾರಿಸಿದ ಸತತ ಎರಡು ಬೌಂಡರಿಗಳಿಂದ ಶಾಕ್ ಆಗಿ ಹೃದಯಾಘಾತವಾಗಿದೆ.
ರೋಚಕ ಪಂದ್ಯದಲ್ಲಿ ಭಾರತವೇನೋ ಒಂದು ರನ್ ಗಳಲ್ಲಿ ಜಯ ಸಾಧಿಸಿತಾದರೂ, ಪಂದ್ಯ ಮುಗಿಯುವ ವೇಳೆ ಶುಕ್ಲ ಕೊನೆಯುಸಿರೆಳೆದಿದ್ದರು.