
ಮಂಗಳೂರು: ಕೇಂದ್ರ ನೇಯ್ಗೆಕಾರರ ಇಲಾಖೆ, ರಾಜ್ಯ ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆ ಸಹಯೋಗದಲ್ಲಿ ಪಿಲಿಕುಳ ನಿಸರ್ಗಧಾಮದ ಡಾ. ಶಿವರಾಮ ಕಾರಂತ ಉದ್ಯಾನದಲ್ಲಿ ಆಯೋಜಿಸಲಾದ `ಕ್ರಾಫ್ಟ್ ಬಜಾರ್’ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಮೀನುಗಾರಿಕಾ, ಕ್ರೀಡಾ ಹಾಗೂ ಯುವಜನ ಸೇವಾ ಸಚಿವ ಕೆ. ಅಭಯಚಂದ್ರ ಜೈನ್ ಅವರು ಇಂದು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೂಡಾ ಕೃಷಿಕರ, ಮೀನುಗಾರರ, ಸಣ್ಣ ಉದ್ದಿಮೆದಾರರನ್ನು ನಿರಂತರ ಪ್ರೋತ್ಸಾಹಿಸುತ್ತಾ ಬಂದಿದೆ. ಈ ಬಾರಿ ಬಜೆಟ್ನಲ್ಲಿ ಅಳಿವಿನ ಅಂಚಿನಲ್ಲಿರುವ ಸುಮಾರು 200 ಬಗೆಯ ಮತ್ಸ್ಯ ತಳಿಗಳ ಸಂಶೋಧನೆಗಾಗಿ 150 ಕೋಟಿ ರೂ. ಮೀಸಲಿರಿಸಿದೆ ಎಂದು ಹೇಳಿದರು.

ಕೃಷಿಯಲ್ಲಿ ಬಳಸುವ ಪರಿಕರಗಳು, ಅಡುಗೆ ಕೋಣೆಯನ್ನು ಅಲಂಕರಿಸುವ ವಸ್ತುಗಳು, ಗ್ರಾಮೀಣ ಜನರ ಆರಾಧನಾ ಕ್ರಮಗಳಲ್ಲೊಂದಾದ ದೈವಗಳ ಆಯುಧಗಳು, ಅಲಂಕಾರಿಕ ವಸ್ತುಗಳು, ಕೈಮಗ್ಗದ ಬಟ್ಟೆಗಳು ಮುಂತಾದ ವಸ್ತುಗಳನ್ನು ಇಲ್ಲಿ ಸಾರ್ವಜನಿಕರ ವೀಕ್ಷಣೆಗೆ ಜೋಡಿಸಿಡಲಾಗಿದ್ದು, ಕರಕುಶಲಗಾರರಿಗೆ ನೇರ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಈ ಮೇಳವನ್ನು ಸಂಘಟಿಸಲಾಗಿದೆ ಎಂದು ಅಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಹಾವೇರಿ ಜನಪದ ವಿವಿ ಕುಲಪತಿಯಾಗಿ ನೇಮಕವಾಗಿರುವ ಡಾ. ಚಿನ್ನಪ್ಪ ಗೌಡ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ, ದ.ಕ. ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ, ಜಿ.ಪಂ.ಸಿಇಓ ಶ್ರೀವಿಧ್ಯಾ, ಕಸಾಪ ಜಿಲ್ಲಾಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಮೂಡ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಪಿಲಿಕುಲ ನಿಸರ್ಗಧಾಮದ ನಿರ್ದೇಶಕ ಪ್ರಭಾಕರ್ ಶರ್ಮಾ, ವಿವೇಕ್ ರೈ ಮುಂತಾದವರು ಉಪಸ್ಥಿತರಿದ್ದರು.