ಕುಂದಾಪುರ: ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕುಡುಬಿ ಸಮುದಾಯದವರು ಶ್ರದ್ಧಾ ಭಕ್ತಿಯಿಂದ ಆಚರಿಸುವ ವಿಶಿಷ್ಟ ಪ್ರಕಾರದ ಜನಪದ ಹೋಳಿ ಕುಣಿತ ಎಲ್ಲೆಲ್ಲಿಯೂ ಕಂಡುಬರುತ್ತದೆ. ಹಾಗೆಯೇ ವರ್ಷಂಪ್ರತಿಯಂತೆ ಈ ಬಾರಿಯ ಹೋಳಿ ಆಚರಣೆ ಸಂಭ್ರಮದಲ್ಲಿ ನಡೆಯುತ್ತಿದ್ದು ಹೋಳಿ ಹುಣ್ಣಿಮೆಯ ಹೋಳಿ ಆಚರಣೆಗೆ ವೈಭವದ ತೆರೆ ಬೀಳಲಿದೆ.
ಕುಡುಬಿ ಸಮುದಾಯದವರು ಗೋವಾದಲ್ಲಿ ಪೋರ್ಚೂಗೀಸರ ದಬ್ಬಾಳಿಕೆ ಸಹಿಸಲಾಗದೇ ಅಲ್ಲಿನಿಂದ ಈ ಪ್ರದೇಶಕ್ಕೆ ಹಲವು ವಗಳ ಹಿಂದೆ ವಲಸೆ ಬಂದವರು. ಹೆಚ್ಚಾಗಿ ಮಲೆನಾಡು ಪ್ರದೇಶದಲ್ಲಿ ಇವರ ವಾಸ. ಕಾಡು ಉತ್ಪತ್ತಿ ಸಂಗ್ರಹಣೆ, ಬೇಟೆ, ಅಪ ಪ್ರಮಾಣದ ಕೃಷಿ ಇವರ ಮುಖ್ಯ ಕಸುಬು.

ಹೋಳಿ ಹಬ್ಬ: ಕುಡುಬಿ ಸಮಾಜದ ಹೋಳಿ ಆಚರಣೆ ಫಾಲ್ಗುಣ ಮಾಸದ ಏಕಾದಶಿಯಿಂದ ಹುಣ್ಣಿಮೆಯವರೆಗೆ ಆದರೂ ಕೂಡ ನಿಯಮ ನಿಷ್ಠೆಗಳು ಅಮಾವಾಸ್ಯೆಯಿಂದಲೇ ಆರಂಭವಾಗುತ್ತವೆ. ಹೋಳಿ ಹಬ್ಬದ ಆಚರಣೆಗೆ ಪೂರ್ವಭಾವಿಯಾಗಿ 15 ದಿನಗಳ ಮೊದಲು ಗೋವಾದಿಂದ ದೇವರನ್ನು ಈ ಸಮುದಾಯದ ಅಲ್ಲಿನ ಮುಖಂಡರು ತಾಲೂಕಿಗೆ ತಂದು ಇಲ್ಲಿನ ಕೆಲವು ಮನೆಗಳಲ್ಲಿ ಅದಕ್ಕೆ ಪೂಜೆ ನಡೆಸಲಾಗುತ್ತದೆ. ಅಮಾವಾಸ್ಯೆಯ ಅನಂತರ ಮಾಂಸ, ಮದಿರೆಗಳನ್ನು ತ್ಯಜಿಸಿ ಹಬ್ಬಕ್ಕೆ ತಯಾರಿ ನಡೆಸುತ್ತಾರೆ. ಪ್ರತಿ ಗ್ರಾಮದ ಕುಡುಬಿ ಸಮುದಾಯದ ಅಲ್ಲಲ್ಲಿ ಕೂಡುಕಟ್ಟುಗಳಿರುತ್ತವೆ, ಈ ಕೂಡುಕಟ್ಟಿಗೆ ಓರ್ವ ಯಜಮಾನ ಇರುತ್ತಾರೆ.
ಯಜಮಾನ ಪ್ರತಿ ಮನೆಗೂ ಪಂಚಾಯತಿಯ ಹೇಳಿಕೆ ನೀಡಿ ಕೂಡುಕಟ್ಟಿನ ಮನೆಯಲ್ಲಿ ಎಲ್ಲರನ್ನು ಒಟ್ಟುಗೂಡಿಸುತ್ತಾನೆ. ಕೂಡುವಳಿಯೊಳಗೆ ಏನೇ ವಾದ-ವಿವಾದ ಸಮಸ್ಯೆಗಳಿದ್ದರೆ ಪಂಚಾಯತಿಗೆ ತಿಳಿಸಿ ತೀರ್ಮಾನಕ್ಕೆ ಬರಲಾಗುತ್ತದೆ. ಪ್ರಮುಖ ನಿರ್ಧಾರಗಳನ್ನು ಕೈಗೊಂಡ ಅನಂತರ ತುಳಸಿಕಟ್ಟೆಯಲ್ಲಿ ಸಿಪ್ಪೆ ಸಹಿತ ತೆಂಗಿನಕಾಯಿಯನ್ನು ಪ್ರತಿಷ್ಠಾಪಿಸಿ ಹಾಡಿನೊಂದಿಗೆ ಕುಲದೇವ ಗೋವಾದ ಶ್ರೀ ಮಲ್ಲಿಕಾರ್ಜುನ ದೇವರನ್ನು ಸ್ಮರಿಸಿಕೊಂಡು ಗುಮ್ಮಟೆ ಕುಣಿತದ ತರಬೇತಿಯನ್ನು ಮತ್ತು ಕೋಲಾಟದ ತರಬೇತಿಯನ್ನು ಕೋಲಾಟದ ಗುರುವಿನ ಮಾರ್ಗದರ್ಶನದಲ್ಲಿ ನಡೆಯುತ್ತದೆ. ದಶಮಿಯ ದಿನದಂದು ರಾತ್ರಿ ಮೈಗೆ ಎಣ್ಣೆ ಹಾಕಿ ಸ್ನಾನ ಮಾಡಿ ಮನೆದೇವರಿಗೆ ಅಬ್ಬಲಿಗೆ ಹೂವನ್ನು ಅರ್ಪಿಸಿ ವೇಷಕ್ಕೆ ಕುಳಿತುಕೊಳ್ಳುತ್ತಾರೆ.
ವಿಶೇಷ ವಾದ್ಯಗಳು: ಗುಮ್ಮಟೆ ಎಂದರೇ ಮಣ್ಣಿನ ಪಾತ್ರೆಯ ಬಾಯಿಗೆ ಉಡದ ಚರ್ಮ ಹೊದ್ದಿಸಿರಲಾಗುತ್ತೆ, ಅದರ ತಳದಲ್ಲಿ ರಂರ್ಧರವಿದ್ದು ಅದನ್ನು ಕೈಯಲ್ಲಿ ಮುಚ್ಚಿಕೊಂಡು ಕೈಯಲ್ಲಿಯೇ ವಿಭಿನ್ನ ರಾಗವನ್ನು ಹೊಮ್ಮಿಸುತ್ತಾರೆ. ಉಳಿದಂತೆ ತಾಳಗಳು ಇವರ ಹಾಡಿಗೆ ಹಿನ್ನೆಲೆ ವಾದನಗಳು.
ಸುಂದರ ವೇಷಭೂಷಣ: ತಲೆಗೆ ರುಮಾಲನ್ನು ಸುತ್ತಿ, ರುಮಾಲಿಗೆ ಜರಿಯನ್ನು ಸುತ್ತಿ ಅಬ್ಬಲಿಗೆ ಹೂವನ್ನು ಅಥವಾ ಬಣ್ಣದ ಕಾಗದದ ಹೂವಿನ ಸರವನ್ನು ಸುತ್ತಲಾಗುತ್ತದೆ. ಹಣೆಯ ಮುಂಭಾಗದಲ್ಲಿ ಹಟ್ಟಿಮುದ್ದ (ಉದ್ದ ಬಾಲದ ಹಕ್ಕಿ) ಎಂಬ ಪಕ್ಷಿಯ ಗರಿಯನ್ನು ಸಿಕ್ಕಿಸಲಾಗುತ್ತದೆ. ಪೈಜಾಮ ಕಟ್ಟಿಕೊಂಡು ಸೀರೆಯನ್ನು ದೇವಿಗೆ ಉಡಿಸುವಂತೆ ನೆರಿಗೆ ತೆಗೆದು ಪೈಜಾಮದ ಮೇಲೆ ಉಟ್ಟು ಕಾಲಿಗೆ ಗೆಜ್ಜೆಯನ್ನು ಕಟ್ಟಿ, ನೆರಿಗೆ ಅಂಗಿಯನ್ನು ತೊಟ್ಟುಕೊಂಡು ಅದರ ಮೇಲೆ ಜರಿಯ ಶಾಲುಗಳನ್ನು ಇಳಿಬಿಡಲಾಗುತ್ತದೆ. ಸೊಂಟಕ್ಕೆ ಸೊಂಟ ಪಟ್ಟಿಯನ್ನು ಕಟ್ಟಿದಾಗ ವೇಷಗಾರಿಕೆ ಪೂರ್ಣಗೊಳ್ಳುತ್ತದೆ. ಒಂದೊಂದು ಕಡೆ ಇನ್ನು ವಿಭಿನ್ನ ಮತ್ತು ಆಕರ್ಷಕ ವೇಷಭೂಷಣವೂ ಇರುತ್ತೆ.
ಮೊದಲಿಗೆ ಗುರಿಕಾರನ ಮನೆಯಲ್ಲಿಯೇ ಈ ಆಚರಣೆಗೆ ಆರಂಭ. ಹೋಳಿ ಮೇಳದವರ ವೇಷಗಾರಿಕೆ ಪೂರ್ಣಗೊಂಡ ನಂತರ ಮನೆದೇವರಿಗೆ ವಂದಿಸಿ ಹಾಡು ಮತ್ತು ಹೋಳಿ ಕುಣಿತದೊಂದಿಗೆ ತಮ್ಮ ತಮ್ಮ ಮನೆಯನ್ನು ತೊರೆದು ಗುರಿಕಾರನ ಮನೆಯಲ್ಲಿ ತುಳಸಿಕಟ್ಟೆಯಲ್ಲಿ ತಮ್ಮ ದೇವರನ್ನು ಪ್ರತಿಷ್ಠಾಪಿಸುವ ಮೂಲಕ ಸಂಪ್ರದಾಯಬದ್ಧವಾಗಿ ಹೋಳಿ ಆರಂಭವಾಗುತ್ತದೆ. ಹಬ್ಬದ ಆರಂಭದ ಒಂದೆರಡು ದಿನಗಳಲ್ಲಿ ಬೇರೆ ಊರುಗಳಲ್ಲಿರುವ ಸ್ವಜಾತಿ ಭಾಂಧವರ ಮನೆಗಳಿಗೆ ತೆರಳಿ ಗುಮ್ಮಟೆ ಹಾಗೂ ಕೋಲಾಟದ ಕುಣಿತವನ್ನು ಮಾಡಿ ಅವರ ಅತಿಥ್ಯವನ್ನು ಸ್ವೀಕರಿಸುತ್ತಾರೆ. ನಂತರ ತಮ್ಮ ಊರುಗಳಿಗೆ ಮರಳಿ ತಮ್ಮ ಊರಿನಲ್ಲಿರುವ ಎಲ್ಲರ ಮನೆಗಳಲ್ಲಿ ಜಾತಿ-ಧರ್ಮ ಭೇದವಿಲ್ಲದೆ ಹೋಳಿ ಕುಣಿತದ ಪ್ರದರ್ಶನವನ್ನು ನೀಡುತ್ತಾರೆ. ಹೀಗೆ ಬಂದ ಹೋಳಿ ಕುಣಿತದವರಿಗೆ ಅಕ್ಕಿ, ತೆಂಗಿನಕಾಯಿಯನ್ನು ವೀಳ್ಯಸಹಿತ ಕಾಣಿಕೆ ನೀಡಿ ಗೌರವಿಸುತ್ತಾರೆ.
ಹೋಳಿ ವೃತ: ಹೋಳಿ ಮೇಳಗಳಲ್ಲಿ ಪುರುಷರಿಗೆ ಮಾತ್ರ ಅವಕಾಶ. ಕೂಡುಕಟ್ಟಿನ ಮನೆಯಿಂದ ಹೊರಟ ಗಂಡಸರು ಹಬ್ಬ ಮುಗಿಯುವ ತನಕ ಮನೆ ಸೇರಬಾರದೆಂಬ ಸಂಪ್ರದಾಯವಿದೆ. ಹಬ್ಬ ಮುಗಿಯುವವರೆಗೆ ಮಾಂಸ, ಮದಿರೆ ಮೊದಲಾದವುಗಳನ್ನು ತ್ಯಜಿಸಬೇಕು ಹಾಗೂ ಸ್ನಾನವನ್ನು ಮಾಡಬಾರದೆಂಬ ಪದ್ದತಿಯಿದೆ.
ಹೋಳಿ ಹಬ್ಬದ ಮುಕ್ತಾಯ: ಹೋಳಿ ಹುಣ್ಣಿಮೆಯ ದಿನದಂದು ಕೂಡುಕಟ್ಟಿನ ಮನೆಯಲ್ಲಿ ವರ್ಷದ ಕೊನೆಯ ಹೋಳಿ ಕುಣಿತವನ್ನು ಮಾಡಿ, ಕುಣಿತಕ್ಕೆ ಅಂತಿಮ ಹಾಡುತ್ತಾರೆ. ಬಳೀಕ ತಮ್ಮ ಆಕರ್ಷಕ ವೇಷಭೂಷಣಗಳನ್ನು ಕಳಚಿ ಅದನ್ನು ಜಾಗೃತವಾಗಿರಿಸಿ ಬಳಿಕ ಸಾಮೂಹಿಕ ಸ್ನಾನ ಮಾಡುತ್ತಾರೆ, ಬಳಿಕ ತಾವು ಕಟ್ಟಿದ ಗೆಜ್ಜೆಗಳಿಗೆ ಪೂಜೆ, ಆದ ಅನಂತರ ಕಾಮದಹನ ಪ್ರಕ್ರಿಯೆ ನಡೆಯುತ್ತೆ. ಊರಿನ ಮುಖಂಡನ ಮನೆಯಲ್ಲಿ ಸಾಮೂಹಿಕ ಭೋಜನವನ್ನು ಸ್ವೀಕರಿಸಿ, ಕಾಣಿಕೆಯಾಗಿ ಪಡೆದ ಅಕ್ಕಿ, ಕಾಯಿ ಸಮಾನವಾಗಿ ಹಂಚಿ ತಮ್ಮ ತಮ್ಮ ಮನೆಗಳಿಗೆ ಹೋಗುತ್ತಾರೆ. ಮರುದಿನ ಕಿರಿಯರು ಮನೆ ಮನೆಗಳಿಗೆ ತೆರಳಿ ವರ್ಣರಂಜಿತ ಹೋಳಿ ಹಬ್ಬದ ಮುಕ್ತಾಯವನ್ನು ಸಾರುತ್ತಾರೆ. ಮಹಿಳೆಯರು ಹೊಳೆಗಳಿಗೆ ತೆರಳಿ ಬಟ್ಟೆ ತೊಳೆದರೇ ಗಂಡಸರು ಮೀನು ಬೇಟೆ ಮಾಡುತ್ತಾರೆ. ಮತ್ತೆ ಹೋಳಿಯ ವೇಷ ಭೂಷಣ ನೋಡುವುದು ಮತ್ತು ಗುಮ್ಮಟೆಯ ಧ್ವನಿ ಕೇಳುವುದು ದೀಪಾವಳಿಯ ಬಳಿಕವಷ್ಟೇ.
ಹೋಳಿ ಹುಣ್ಣಿಮೆಗೆ ಗೋವದಿಂದ ಆಗಮಿಸುವ ದೇವರು
ಕುಡುಬಿ ಜನಾಂಗ ಸಂಪ್ರದಾಯ ಬದ್ದವಾದ ಆಚರಣೆ ಹೋಳಿ ಹುಣ್ಣಿಮೆಯ ಸಿದ್ದತೆಗಾಗಿ ಒಂದು ತಿಂಗಳ ಮುಂಚಿತವಾಗಿ ಗೋವಾದ ದೇವರೊಂದಿಗೆ, ಅಲ್ಲಿನ ಕುಡುಬಿಯರು ಉಡುಪಿ ಜಿಲ್ಲೆಗೆ ಆಗಮಿಸುತ್ತಾರೆ. ಕುಡುಬಿಯರ ಮನೆಮನೆಗೆ ದೇವರೊಂದಿಗೆ ತೆರಳಿ ಪೂಜೆ ಪಡೆಯುವ ವಿಶೇಷ ಸಂಪ್ರದಾಯ ಅನೂಚಾನವಾಗಿ ನಡೆದುಕೊಂಡು ಬರುತ್ತಿದೆ.

ಏನಿದು ಆಚರಣೆ
ಹೋಳಿ ಹುಣ್ಣಿಮೆಗೆ ಮುಂಚಿನ ತಿಂಗಳು ಬರುವ ಮಾಘ ಹುಣ್ಣಿಮೆಯಂದು ಗೋವಾದಿಂದ ಕುಡುಬಿಯರ ತಂಡವೊಂದು ಜಿಲ್ಲೆಗೆ ಆಗಮಿಸುತ್ತದೆ. ಸಿಂಗರಿಸಿದ ಮಲ್ಲಿಕಾರ್ಜುನ ಮತ್ತು ಅಮ್ಮನವರ ಮೂರ್ತಿಯನ್ನು ಉತ್ಸವ ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ತಾಳ, ಡಮರು ನಿನಾದದೊಂದಿಗೆ ಕಾಲ್ನಡಿಗೆಯಲ್ಲಿ ಬರುತ್ತಾರೆ. ಕುಡುಬಿ ಜನಾಂಗದವರ ಮನೆಮನೆಗೆ ತೆರಳಿ ಪೂಜೆ ಸ್ವೀಕರಿಸುತ್ತಾರೆ. ಅಲ್ಲಿ ನೀಡಿದ ಅಕ್ಕಿ, ಕಾಯಿ, ದವಸ ಧಾನ್ಯಗಳನ್ನು ಪಡೆದುದಕ್ಕೆ ಪ್ರತಿಯಾಗಿ ಪ್ರಸಾದ ನೀಡಿ ಹರಸುತ್ತಾರೆ. ಹೀಗೆ ಬಂದ ತಂಡದವರೊಂದಿಗೆ ಇಲ್ಲಿಯ ಕುಡುಬಿಯರು ಮಧ್ಯಾಹ್ನ ಮತ್ತು ರಾತ್ರಿ ವಿಶೇಷ ಪೂಜೆ ನೆರವೇರಿಸುತ್ತಾರೆ. ಪ್ರತಿ ಕುಡುಬಿ ಕುಟುಂಬಸ್ಥರೂ ಕೂಡ ತಮ್ಮ ಮನೆಗೆ ಅವರನ್ನು ಪದ್ದತಿಯಂತೆ ಆಮಂತ್ರಿಸಬೇಕು. ಇನ್ನೊಂದು ಮನೆಗೆ ತೆರಳುವಾಗ ಈ ಮನೆಯವರು ಮತ್ತೊಂದು ಮನೆಯ ವರೆಗೆ ತೆರಳಿ ಬೀಳ್ಕೊಡಬೇಕು.ಇದು ಅಲಿಖಿತ ನಿಯಮವಾಗಿದೆ.
ಅಮಾವಾಸ್ಯೆಯ ತರುವಾಯ ಹುಣ್ಣಿಮೆ ತನಕ ಅಂದರೆ ಹದಿನೈದು ದಿನಗಳ ಕಾಲ ಮಾತ್ರ ಮನೆಮನೆಗೆ ದೇವರ ಭೇಟಿ ನಡೆಯುತ್ತದೆ.ಅಮಾವಾಸ್ಯೆಗೆ ಮುಂಚಿತವಾಗಿ ತಮ್ಮ ಮೂಲ ನೆಲೆಯಾದ ಗೋವಾವನ್ನು ಸೇರಿಕೊಳ್ಳಬೇಕೆಂಬುದು ವಾಡಿಕೆ.
ವರದಿ- ಯೋಗೀಶ್ ಕುಂಭಾಸಿ
ಚಿತ್ರ ಮತ್ತು ಸಹಕಾರ- ರವಿ ಬೆಳಂಜೆ