ಬೆಂಗಳೂರು: ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳಲ್ಲಿ “ಸರ್ಕಾರಿ ನಾಮನಿರ್ದೇಶಿತ ಸದಸ್ಯ’ ಸ್ಥಾನಕ್ಕೆ ಇನ್ಮುಂದೆ ಕತ್ತರಿ ಬೀಳಲಿದೆ!
“ಸರ್ಕಾರದಿಂದ ಯಾವುದೇ ಹಣಕಾಸಿನ ನೆರವು ಪಡೆಯದ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ (ಗವರ್ನಿಂಗ್ ಕೌನ್ಸಿಲ್)ಯಲ್ಲಿ ಸರ್ಕಾರಿ
ನಾಮನಿರ್ದೇಶಿತ ಸದಸ್ಯತ್ವ ನೇಮಕ ಮಾಡುವ ಅಗತ್ಯವಿಲ್ಲ. ಹಾ ಗಾಗಿ, ಇನ್ಮುಂದೆ ಅಂತಹ ಖಾಸಗಿ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯತ್ವಕ್ಕೆ
ಸರ್ಕಾರದಿಂದ ನಾಮನಿರ್ದೇಶನ ಮಾಡುವುದಿಲ್ಲ’ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿ ಪ್ರಕಟಿಸಿದರು.
ಎಜುಕೇಷನ್ ಪ್ರೊಮೋಷನ್ ಸೊಸೈಟಿ ಫಾರ್ ಇಂಡಿಯಾ (ಇಪಿಎಸ್‌ಐ) ಮಂಗಳವಾರ ಹಮ್ಮಿಕೊಂಡಿದ್ದ “ಉನ್ನತ ಶಿಕ್ಷಣಕ್ಕೆ ಜಾಗತಿಕ
ಕೇಂದ್ರಸ್ಥಾನವಾಗಿ ಭಾರತವನ್ನು ಸಜ್ಜುಗೊಳಿಸುವಿಕೆ’ ಕುರಿತ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗೆ ಪ್ರಸ್ತುತ ಇಬ್ಬರು ಸರ್ಕಾರಿ ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡಿಕೊಳ್ಳಬೇಕು ಎಂಬ
ನಿಯಮ ಇದೆ. ಆದರೆ, ಸರ್ಕಾರದಿಂದ ಯಾವುದೇ ಹಣಕಾಸು ನೆರವು ಪಡೆಯದ ಶಿಕ್ಷಣ ಸಂಸ್ಥೆಗಳಿಗೆ “ಸರ್ಕಾರಿ ಸದಸ್ಯ’ರು ಬೇಡ ಎಂದು ಇಪಿಎಸ್‌ಐ
ಸಲಹೆ ಮಾಡಿದೆ. ಅದಕ್ಕೆ ನನ್ನ ಸಹಮತವಿದ್ದು, ಈ ಸಂಬಂಧ ಯುಜಿಸಿಗೆ ನಿರ್ದೇಶನ ನೀಡಲಾಗಿದೆ ಎಂದು ಸ್ಮತಿ ಇರಾನಿ ತಿಳಿಸಿದರು.
ಹಾಗೊಂದು ವೇಳೆ ಸ್ಥಳೀಯವಾಗಿ ನಾಮನಿರ್ದೇಶಿತ ಸದಸ್ಯರ ನೇಮಕ ಮಾಡಿಕೊ ಳ್ಳಲೇಬೇಕಾದುದು ಅನಿವಾರ್ಯವಾದಲ್ಲಿ, ಆ ನೇಮಕಕ್ಕೆ ಕಾರ್ಯದಕ್ಷತೆ ಮತ್ತು ಪಾರದರ್ಶಕ ವ್ಯವಸ್ಥೆ ತರಲಾಗುವುದು ಎಂದೂ ಅವರು ಹೇಳಿದರು. 10 ವರ್ಷಗಳ ಮಾನ್ಯತೆಗೆ ಸ್ವಾಯತ್ತತೆ: ಇನ್ನು
ಹತ್ತು ವರ್ಷಗಳಿಂದ ಸತತ ನ್ಯಾಕ್ (ರಾಷ್ಟ್ರೀಯ ಮೌಲ್ಯಮಾಪನಮತ್ತು ಗುಣಮಟ್ಟ ವರ್ಧನ ಮಂಡಳಿ)ನಿಂದ ಉನ್ನತ ಗ್ರೇಡ್ ಪಡೆದುಕೊಂಡಿದ್ದರೆ,
ಅಂತಹ ಕಾಲೇಜುಗಳನ್ನು ಸ್ವಾಯತ್ತ ಸಂಸ್ಥೆಗಳೆಂದು ಘೋಷಿಸಲಾಗುವುದು ಎಂದ ಅವರು, ಈ ಸುಧಾರಣೆಯಿಂದ ಉನ್ನತ ಶಿಕ್ಷಣದ ಬೆಳವಣಿಗೆಗೆ
ಸಾಕಷ್ಟು ಪ್ರೋತ್ಸಾಹ ಸಿಕ್ಕಂತಾಗಲಿದೆ ಎಂದರು.
ಲೈಸನ್ಸ್ ರಾಜ್‌ಗೆ ಇತಿಶ್ರೀ: ಅದೇ ರೀತಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಸೀಟುಗಳ ಹೆಚ್ಚಳ ಸೇರಿದಂತೆ ಪ್ರತಿಯೊಂದಕ್ಕೂ ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ)ಯ ಅನುಮತಿಗಾಗಿ ಅಲೆದಾಡುವ ಸ್ಥಿತಿ ಇದೆ. ಒಮ್ಮೆ ತಾಂತ್ರಿಕ ಶಿಕ್ಷಣ ಸಂಸ್ಥೆಗೆ ನೀವು ಎಐಸಿಟಿಯಿಂದ ಐದು ವರ್ಷಗಳ
ಮಾನ್ಯತೆ ಪಡೆದರೆ, ಅದು ಮುಂದಿನ ಐದು ವರ್ಷಗಳ ಕಾಲ ಸಂಸ್ಥೆಯ ಯಾವುದೇ ಯೋಜನೆಗಳ ಅನುಮೋದನೆಗೂ ಅನ್ವಯ ಆಗಲಿದೆ. ಈ ಮೂಲಕ ಈ ಲೈಸನ್ಸ್ ರಾಜ್‌ಗೆ ಈಗ ಅಂತ್ಯಹಾಡಲಾಗಿದೆ ಎಂದು ತಿಳಿಸಿದರು.
ಇಪಿಎಸ್‌ಐ ಅಧ್ಯಕ್ಷ ಡಾ.ಜಿ.ವಿಶ್ವನಾಥನ್, ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ
ಮಾತನಾಡಿದರು.
3 ವೈದ್ಯ ಕಾಲೇಜುಗಳಲ್ಲಿ ಪ್ರವೇಶ: ಶರಣಪ್ರಕಾಶ ಪಾಟೀಲ ಬರುವ ಶೈಕ್ಷಣಿಕ ವರ್ಷದಿಂದ ಮೂರು ನೂತನ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ತಿಳಿಸಿದರು. ಸಮ್ಮೇಳನದಲ್ಲಿ ಪಾಲ್ಗೊಂಡು ನಂತರ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಡಿಕೇರಿ, ಕಾರವಾರ ಮತ್ತು ಚಾಮರಾಜನಗರದಲ್ಲಿ ಕಾಲೇಜು ಕಟ್ಟಡಗಳು ಈಗಾಗಲೇ ತಲೆಯೆತ್ತಿದ್ದು,
ಮೂಲಸೌಕರ್ಯಗಳನ್ನೂ ಕಲ್ಪಿಸಲಾಗಿದೆ. ಅಲ್ಲಿ ಭಾರತೀಯ ವೈದ್ಯಕೀಯ ಪರಿಷತ್ತು ಭೇಟಿ ನೀಡಿ ಪರಿಶೀಲಿಸಿದೆ. ಕಾಲೇಜು ಆರಂಭಕ್ಕೆ ಅನುಮತಿ ದೊರೆಯುವ ನಿರೀಕ್ಷೆ ಇದೆ. ಬರುವ ಶೈಕ್ಷಣಿಕ ವರ್ಷದಿಂದಲೇ ಇಲ್ಲಿ ಪ್ರವೇಶ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
-ಉದಯವಾಣಿ