ಆಕ್ಲಂಡ್, ನ್ಯೂಜಿಲೆಂಡ್ (ಪಿಟಿಐ): ಬಲಿಷ್ಠ ಎದುರಾಳಿಗಳ ಸವಾಲನ್ನು ದಿಟ್ಟತನದಿಂದ ಮೆಟ್ಟಿ ನಿಂತ ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ಮನು ಅತ್ರಿ ಅವರು ಇಲ್ಲಿ ನಡೆಯುತ್ತಿರುವ ನ್ಯೂಜಿ ಲೆಂಡ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಬುಧವಾರ ನಡೆದ ಮಿಶ್ರ ಡಬಲ್ಸ್ ವಿಭಾಗದ ಆರಂಭಿಕ ಸುತ್ತಿನ ಹೋರಾಟದಲ್ಲಿ ಅಶ್ವಿನಿ ಮತ್ತು ಮನು 21–13, 10–21, 21–12ರಲ್ಲಿ ಆಸ್ಟ್ರೇಲಿಯಾದ ರಾಬಿನ್ ಮಿಡಲ್‌ಟನ್ ಮತ್ತು ಲಿಯೆನ್ನೆ ಚೊ ಅವರನ್ನು ಸೋಲಿಸಿದರು.
ಅರ್ಹತಾ ಸುತ್ತಿನಲ್ಲಿ ದಿಟ್ಟ ಆಟ ಆಡಿ ವಿಶ್ವಾಸ ಹೆಚ್ಚಿಸಿಕೊಂಡಿದ್ದ ಅಶ್ವಿನಿ ಮತ್ತು ಮನು ಅವರು ಆರಂಭಿಕ ಹೋರಾಟದಲ್ಲಿ ಉತ್ತಮ ಆರಂಭ ಪಡೆದರು. ಪಾದರಸದಂತಹ ಚಲನೆ ಮತ್ತು ಹೊಂದಾಣಿಕೆಯ ಆಟದ ಮೂಲಕ ಆರಂಭದಿಂದಲೇ ಪಾಯಿಂಟ್ ಬೇಟೆ ಮುಂದುವರಿಸಿದ ಭಾರತದ ಜೋಡಿ ಶೀಘ್ರವೇ ಮುನ್ನಡೆ ಗಳಿಸಿತು. ಇದರಿಂದ ಒತ್ತಡಕ್ಕೆ ಒಳಗಾದಂತೆ ಕಂಡ ಎದುರಾಳಿಗಳು ಕೆಲ ಸ್ವಯಂಕೃತ ತಪ್ಪುಗಳನ್ನು ಮಾಡಿ ಕೈ ಸುಟ್ಟುಕೊಂಡರು.
ಇದರ ಪೂರ್ಣ ಲಾಭ ಎತ್ತಿಕೊಂಡು ನಂತರವೂ ಛಲದ ಆಟ ಆಡಿದ ಅಶ್ವಿನಿ ಮತ್ತು ಮನು ಸುಲಭವಾಗಿ ಗೇಮ್ ತಮ್ಮದಾಗಿಸಿಕೊಂಡರು.
ಎರಡನೇ ಗೇಮ್‌ನಲ್ಲಿ ಆಸ್ಟ್ರೇಲಿಯಾದ ಜೋಡಿ ಅಮೋಘ ಸಾಮರ್ಥ್ಯ ತೋರಿತು. ಆರಂಭಿಕ ನಿರಾಸೆಯಿಂದ ಧೃತಿಗೆಡದೆ ಗುಣಮಟ್ಟದ ಆಟ ಆಡಿ ಗೇಮ್ ಗೆದ್ದಿತಲ್ಲದೆ 1–1ರಲ್ಲಿ ಸಮಬಲ ಮಾಡಿಕೊಂಡಿತು.
ಆದರೆ ಮೂರನೇ ಮತ್ತು ನಿರ್ಣಾಯಕ ಗೇಮ್‌ನಲ್ಲಿ ಅಶ್ವಿನಿ ಮತ್ತು ಮನು ಆಟ ರಂಗೇರಿತು. ಬಲಿಷ್ಠ ಸ್ಮ್ಯಾಷ್ ಮತ್ತು ಅಮೋಘ ಕ್ರಾಸ್‌ಕೋರ್ಟ್ ಹೊಡೆತಗಳ ಮೂಲಕ ಸತತವಾಗಿ ಪಾಯಿಂಟ್ ಕಲೆಹಾಕಿದ ಅವರು ನಿರಾ ಯಾಸವಾಗಿ ಗೆಲುವು ಒಲಿಸಿಕೊಂಡು ಸಂಭ್ರಮಿಸಿದರು.
ಈ ವಿಭಾಗದ ಮತ್ತೊಂದು ಪಂದ್ಯದಲ್ಲಿ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಎನ್. ಸಿಕಿ ರೆಡ್ಡಿ ಅವರು ಸುಲಭ ಜಯ ತಮ್ಮದಾಗಿಸಿಕೊಂಡರು.
ಆರಂಭಿಕ ಸುತ್ತಿನಲ್ಲಿ ಪ್ರಣವ್ ಮತ್ತು ಸಿಕಿ 21–8, 21–9ರಲ್ಲಿ ಜೊನಾಥನ್ ಸನ್ ಮತ್ತು ಜೆನಿಫರ್ ಟಾಮ್ ಅವರನ್ನು ಸೋಲಿಸಿದರು.
ಎರಡನೇ ಸುತ್ತಿಗೆ ಮನು–ಸುಮೀತ್: ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಮನು ಅತ್ರಿ ಮತ್ತು ಬಿ. ಸುಮೀತ್ ರೆಡ್ಡಿ 21–11, 17–21, 21–16ರಲ್ಲಿ ಚೀನಾ ತೈಪೆಯ ಶಾಂಗ್ ಕೈ ಲಿನ್ ಮತ್ತು ಲು ಚಿಂಗ್ ಯಾವೊ ಅವರನ್ನು ಸೋಲಿಸಿದರು.
ಇನ್ನೊಂದು ಪಂದ್ಯದಲ್ಲಿ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಅಕ್ಷಯ್ ದೇವಳ್ಕರ್ 21–11, 21–7ರಲ್ಲಿ ಕೊಶುವಾ ಕರ್ರಿ ಮತ್ತು ಮಾವೊನಿ ಹು ಹೆ ಅವರನ್ನು ಮಣಿಸಿದರು.
ಮನೋರಂಜನೆ