ಕರ್ನಾಟಕ

ಸ್ಪೀಕರ್‌ ಸಂಧಾನ; ‘ಎಸಿಬಿ’ ಪ್ರತಿಭಟನೆ ಕೈಬಿಟ್ಟ ಬಿಜೆಪಿ

Pinterest LinkedIn Tumblr

33

ಬೆಂಗಳೂರು: ತೀವ್ರ ವಿವಾದಕ್ಕೆ ಎಡೆ ಮಾಡಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆ ಕೈಬಿಡಬೇಕೆಂದು ಆಗ್ರಹಿಸಿ ವಿರೋಧ ಪಕ್ಷಗಳು ಮಂಗಳವಾರವೂ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದವು. ನಂತರ ಸ್ಪೀಕರ್‌ ಸಲಹೆಯಂತೆ ಬಿಜೆಪಿ ಪ್ರತಿಭಟನೆ ವಾಪಸ್‌ ಪಡೆಯಿತು.

‘ಎಸಿಬಿ’ ಮೇಲಿನ ಚರ್ಚೆಗೆ ಪ್ರತ್ಯೇಕ ಅವಕಾಶ ನೀಡುವುದಾಗಿ ಸ್ಪೀಕರ್‌ ಬಿಜೆಪಿ ಮತ್ತು ಜೆಡಿಎಸ್‌ಗೆ ಭರವಸೆ ನೀಡಿದರು. ‘ಎಸಿಬಿ’ಯಲ್ಲಿ ಕೆಲವು ಬದಲಾವಣೆ ಮಾಡುವಂತೆಯೂ ಕಾಂಗ್ರೆಸ್‌ಗೆ ಖಡಕ್‌ ಸೂಚನೆ ನೀಡಿದರು.

‘ಸ್ಪೀಕರ್‌ ಮಧ್ಯಸ್ಥಿಕೆ ವಹಿಸಿರುವುದರಿಂದ ಮತ್ತು ಸುಗಮ ಕಲಾಪದ ದೃಷ್ಟಿಯಿಂದ ಮಾತ್ರ ಪ್ರತಿಭಟನೆ ವಾಪಾಸ್‌ ಪಡೆಯುತ್ತಿದ್ದೇವೆ. ಯಾವುದೇ ಕಾರಣಕ್ಕೂ ಲೋಕಾಯುಕ್ತ ಸಂಸ್ಥೆಯನ್ನು ಅಸ್ಥಿರಗೊಳಿಸಲು ಬಿಡುವುದಿಲ್ಲ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಹೇಳಿದರು.

‘ಎಸಿಬಿ ರಚಿಸುವ ಮೂಲಕ ಭ್ರಷ್ಟರನ್ನು ರಕ್ಷಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದಲ್ಲದೆ ಎಸಿಬಿಯನ್ನು ವಿರೋಧಿಗಳ ಮೇಲೆ ಪ್ರಯೋಗಿಸಲು ರಾಜಕೀಯ ಅಸ್ತ್ರವಾಗಿ ಬಳಸುವ ಸಾಧ್ಯತೆಯೂ ಇದೆ’ ಎಂದು ಶೆಟ್ಟರ್‌ ಆರೋಪಿಸಿದ್ದಾರೆ.

Write A Comment