ಅಂತರಾಷ್ಟ್ರೀಯ

ಹಿಂದೂಜಾ ಸಹೋದರರು ಬ್ರಿಟನ್ನಿನ ನಂ.1 ಶ್ರೀಮಂತರು

Pinterest LinkedIn Tumblr

hindujaಲಂಡನ್‌ (ಪಿಟಿಐ): ಬ್ರಿಟನ್‌ನಲ್ಲಿರುವ ಏಷ್ಯಾ ಮೂಲದ ಅತಿ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಭಾರತ ಮೂಲದ ಹಿಂದೂಜಾ ಸಹೋದರರು ಸತತ ನಾಲ್ಕನೇ ಬಾರಿಯೂ ಪ್ರಥಮ ಸ್ಥಾನ ಪಡೆದಿದ್ದಾರೆ.
2016ನೇ ಸಾಲಿನ ‘ಬ್ರಿಟನ್‌ನಲ್ಲಿರುವ ಏಷ್ಯಾದ 101 ಶ್ರೀಮಂತರ ಪಟ್ಟಿ’ ಯನ್ನು ಏಷಿಯನ್‌ ಮೀಡಿಯಾ ಅಂಡ್‌ ಮಾರ್ಕೆಟ್‌ ಸಂಸ್ಥೆ ಸಿದ್ಧಪಡಿಸಿದ್ದು, ಜಿ.ಪಿ. ಹಿಂದೂಜಾ ಮತ್ತು ಎಸ್‌.ಪಿ. ಹಿಂದೂಜಾ ಸಹೋದರರು ಅಂದಾಜು ₹1.6 ಲಕ್ಷ ಕೋಟಿ ಆಸ್ತಿ ಹೊಂದುವ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ.
ಬ್ರಿಟನ್‌ನಲ್ಲಿರುವ ಭಾರತದ ಹೈಕಮಿಷನರ್‌ ನವತೇಜ್‌ ಸರ್ನಾ ಅವರು ಶುಕ್ರವಾರ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದರು.
ಉಕ್ಕು ಉದ್ಯಮದ ದಿಗ್ಗಜ ಲಕ್ಷ್ಮಿ ಎನ್‌. ಮಿತ್ತಲ್‌ 2ನೇ (ಅಂದಾಜು ₹64 ಸಾವಿರ ಕೋಟಿ) ಹಾಗೂ ಲಾರ್ಡ್‌ ಸ್ವರಾಜ್‌ ಪಾಲ್‌ 15ನೇ (ಅಂದಾಜು ₹4800 ಕೋಟಿ) ಸ್ಥಾನದಲ್ಲಿದ್ದಾರೆ.
ಇಂಡೊರಮಾ ಕಾರ್ಪೊರೇಷನ್‌ ಅಧ್ಯಕ್ಷ ಪ್ರಕಾಶ್‌ ಲೋಹಿಯಾ 3ನೇ, ರಿಯಾಯಿತಿ ಚಿಲ್ಲರೆ ವ್ಯವಹಾರದ ಅರೋರ ಸಹೋದರರಾದ ಸೈಮನ್‌, ಬಾಬಿ ಮತ್ತು ರಾಬಿನ್‌ 4ನೇ ಹಾಗೂ ಅಂತರ್ಜಾಲ ಉದ್ಯಮದ ಸೈರಸ್‌ ವಂದ್ರೆವಾಲ ಅವರು 5ನೇ ಸ್ಥಾನ ಪಡೆದುಕೊಂಡಿದ್ದಾರೆ.
‘ಒಬ್ಬ ವ್ಯಕ್ತಿಯನ್ನು ಶ್ರೀಮಂತನೆಂದು ಗುರುತಿಸಲು ಆಸ್ತಿ ಅಥವಾ ಹಣ ಮಾನದಂಡವಲ್ಲ. ನನ್ನ ಪ್ರಕಾರ ಉತ್ತಮ ಸ್ನೇಹಿತರು, ಉತ್ತಮ ಸಂಬಂಧ ಹೊಂದಿರುವವರು ನಿಜವಾದ ಶ್ರೀಮಂತರು’ ಎಂದು ಹಿಂದೂಜಾ ಗ್ರೂಪ್‌ನ ಸಹ ಅಧ್ಯಕ್ಷ ಗೋಪಿ ಹಿಂದೂಜಾ ತಿಳಿಸಿದ್ದಾರೆ.
‘ವಿವಿಧ ರೀತಿಯ ಉದ್ಯಮಗಳನ್ನು ಆರಂಭಿಸಬೇಕು. ಕೇವಲ ಒಂದೇ ಕ್ಷೇತ್ರಕ್ಕೆ ಸೀಮಿತವಾಗಿರಬಾರದು. ಭೌಗೋಳಿಕವಾಗಿಯೂ ವಿಸ್ತಾರ ಹೊಂದಿರಬೇಕು ಎನ್ನುವುದನ್ನು ನಮ್ಮ ತಂದೆ ಹೇಳುತ್ತಿದ್ದರು’ ಎಂದು ಪ್ರತಿಕ್ರಿಯಿಸಿದರು.

Write A Comment