ಬ್ರುಸೆಲ್ಸ್,ಮಾ.19-ಫ್ರಾನ್ಸ್ ನ ರಾಜಧಾನಿ ಪ್ಯಾರಿಸ್‌ನಲ್ಲಿ ಈಗ್ಗೆ ನಾಲ್ಕು ತಿಂಗಳ ಹಿಂದೆ ನಡೆದಿದ್ದ ನರಮೇಧದ ಪ್ರಮುಖ ಆರೋಪಿ ಎಂದೇ ಹೇಳಲಾಗಿದ್ದ ಮೋಸ್ಟ್ ವಾಂಟೆಡ್ ಸಲಾಹ್ ಅಬ್ದೇಸ್ಲಾಮ್‌ನನ್ನು ಬ್ರುಸೆಲ್ಸ್ ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ.
ನರಹಂತಕ ಅಬ್ದೇಸ್ಲಾಮ್ ವಾಸ್ತವ್ಯವಿದ್ದ ಅಪಾರ್ಟ್‌ಮೆಂಟ್ ಮೇಲೆ ಇಂದು ನಸುಕಿನಲ್ಲೇ ಹಟಾತ್ ದಾಳಿ ನಡೆಸಿದ ಪೊಲೀಸರು, ಪಾತಕಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ಯಾರಿಸ್‌ನ ಸ್ಟೇಡಿಯಂನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದು ನಡೆಯುತ್ತಿದ್ದ ಸಂದರ್ಭ 2015ರ ನವೆಂಬರ್ 13ರಂದು ಡಿಎಸ್‌ಐಎಸ್ ಉಗ್ರರು ದಾಳಿ ನಡೆಸಿ ಸುಮಾರು 130ಕ್ಕು ಹೆಚ್ಚು ಜನ ಅಮಾಯಕರ ಕಗ್ಗೊಲೆ ಮಾಡಿದ್ದರು. ಅನೇಕರು ಗಾಯಗೊಂಡಿದ್ದರು.
ಉಗ್ರರ ಗುಂಪಿನಲ್ಲಿದ್ದ ಆರು ಜನರನ್ನು ಪೊಲೀಸರು ವಿವಿಧೆಡೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಒಬ್ಬ ಉಗ್ರ ಘಟನೆಯ ವೇಳೆ ಸಾವನ್ನಪ್ಪಿದ್ದ. ಆದರೆ ಪ್ರಮುಖ ಆರೋಪಿ ಅಬ್ದೇಸ್ಲಾಮ್ ತಲೆಮರೆಸಿಕೊಂಡಿದ್ದ. ಹಂತಕನ ಬೆನ್ನು ಬಿದ್ದಿದ್ದ ಪೊಲೀಸರಿಗೆ ಕಳೆದ ವಾರ ಅವನು ತಂಗಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಅವನು ಬೆರಳಚ್ಚುಗಳು(ಫಿಂಗರ್ ಪ್ರಿಂಟ್ಸ್) ದೊರೆತಿದ್ದವು. ನಂತರ 10 ಮಂದಿ ಬಲಿಷ್ಠ ಕಮಾಂಡೋಗಳು ಕಾರ್ಯಾಚರಣೆ ನಡೆಸಿ ಅಬ್ದೇಸ್ಲಾಮ್‌ನನ್ನು ಬಂಧಿಸಿದ್ದಾರೆ.