
ಮಂಗಳೂರು : ಕೆಎಸ್ಸಾರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಶನ್ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ ಎಲ್ಲಾ ವಿಭಾಗಿಯ ಕಚೇರಿಗಳ ಎದುರು ನಡೆಯುತ್ತಿರುವ ಧರಣಿ ಸತ್ಯಾಗ್ರಹದ ಅಂಗವಾಗಿ ಮಂಗಳೂರು ಕೆಎಸ್ ಆರ್ ಟಿ ಸಿ ಸಿಬ್ಬಂದಿ ಮತ್ತು ನೌಕರರ ವರ್ಗ ನೇತೃತ್ವದಲ್ಲಿ ಸಾರಿಗೆ ನೌಕರರ ವೇತನ ಪರಿಷ್ಕರಣೆ, ಸಿಬ್ಬಂದಿಗಳಿಗೆ ಕಿರುಕುಳ ರೂಪದ ವರ್ಗಾವಣೆ , ಸಿಬ್ಬಂದಿ ಅನುಪಾತ ಹೆಚ್ಚಳ ಮತ್ತು ಇನ್ನಿತರ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಮಂಗಳವಾರ ಮಂಗಳೂರು ವಿಭಾಗೀಯ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.

ಪ್ರತಿಭಟನಕಾರರನ್ನು ಉದ್ದೇಶಿಸಿ ಫೆಡರೇಶನ್ ನ ಮಂಗಳೂರು ವಿಭಾಗದ ಉಪಾಧ್ಯಕ್ಷ ಬಿ. ಕೆ. ಕೃಷ್ಣಪ್ಪ ಅವರು ಮಾತನಾಡಿ,ಆಡಳಿತ ವರ್ಗದ ದುರಾಡಳಿತ ನೀತಿಯಿಂದಾಗಿ ಹಗಲು ರಾತ್ರಿ ಲೆಕ್ಕಿಸದೆ ನೌಕರರು ತೊಂದರೆ ಪಡುವಂತಾಗಿದೆ. ಮಾತ್ರವಲ್ಲದೇ ವೇತನ ಪರಿಷ್ಕರಣೆ, ಸಿಬ್ಬಂದಿಗಳಿಗೆ ಕಿರುಕುಳ ರೂಪದ ವರ್ಗಾವಣೆ, ಸಿಬ್ಬಂದಿ ಅನುಪಾತ ಹೆಚ್ಚಳ ಮುಂತಾದ ವಿಚಾರಗಳಲ್ಲಿ ಅಧಿಕಾರಿಗಳು ಶೋಷಣೆ ಮಾಡುತ್ತಿದ್ದಾರೆ. ಹಿರಿಯ ಅಧಿಕಾರಿಗಳು ನೌಕರರನ್ನು ಕೀಳಾಗಿ ಕಾಣುವುದರಿಂದ ನೌಕರರು ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
ಪ್ರತಿಭಟನ ಸಭೆಯನ್ನುದ್ದೇಶಿಸಿ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ವಿ.ರಾವ್, ಮಂಗಳೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್, ಸಂಘಟನಾ ಕಾರ್ಯದರ್ಶಿ ವಿಜಯ ಕುಮಾರ್ ಮುಂತಾದವರು ಮಾತನಾಡಿದರು.ಸುಮಾರು 200ಕ್ಕೂ ಹೆಚ್ಚು ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.