
ಮಂಗಳೂರು, ಮಾ. 15: ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ , ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಆಶ್ರಯದಲ್ಲಿ ವಿಶ್ವಗ್ರಾಹಕ ದಿನಾಚರಣೆ ಹಾಗೂ ಗ್ರಾಹಕ ಶಿಕ್ಷಣ- ಪ್ರಮಾಣಪತ್ರ ಪ್ರದಾನ ಸಮಾರಂಭ ಮಂಗಳವಾರ ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು, ಗ್ರಾಹಕರು ತಾವು ಖರೀದಿಸುವ ಪ್ರತಿಯೊಂದು ವಸ್ತುಗಳ ಬಗ್ಗೆಯೂ ಪರಿಶೀಲನೆ, ಜಾಗರೂಕತೆ ವಹಿಸಿಕೊಳ್ಳುವುದಲ್ಲದೆ ದೋಷ, ವಂಚನೆಗಳು ಕಂಡು ಬಂದಾಗ ದೂರು ನೀಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಇದರಿಂದ ಗ್ರಾಹಕ ಹಕ್ಕುಗಳನ್ನು ಸಂರಕ್ಷಿಸಲು ಸಾಧ್ಯ ಎಂದು ಸಲಹೆ ನೀಡಿದರು.

ವಸ್ತುಗಳ ಗುಣಮಟ್ಟ ಹಾಗೂ ಪ್ರಮಾಣದಲ್ಲಿ ಗ್ರಾಹಕರು ನಿಗಾ ವಹಿಸುವುದಲ್ಲದೆ, ಆಹಾರ ವಸ್ತುಗಳ ಕಲಬೆರೆಕೆಯಿಂದಲೂ ರಕ್ಷಣೆ ಪಡೆಯುವಲ್ಲಿ ಈ ಗ್ರಾಹಕ ಹಕ್ಕುಗಳ ಕಾಯ್ದೆ ಪರಿಣಾಮಕಾರಿಯಾಗಿದೆ. ಗ್ರಾಹಕರ ಹಕ್ಕುಗಳನ್ನು ರಕ್ಷಿಸುವ ಹಾಗೂ ಸಂರಕ್ಷಿಸುವ ಉದ್ದೇಶದಿಂದ ವಿಶ್ವ ಗ್ರಾಹಕ ದಿನವನ್ನು ಆಚರಿಸಲಾಗುತ್ತದೆ. ಶಾಲೆಗಳಲ್ಲಿ ಗ್ರಾಹಕ ಕ್ಲಬ್‌ಗಳು ಹಾಗೂ ವಿವಿಧ ಸ್ಪರ್ಧೆಗಳ ಮೂಲಕ ಗ್ರಾಹಕ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ ಎಂದು ಶ್ರೀವಿದ್ಯಾ ಅವರು ಹೇಳಿದರು.
ವಿಶ್ವ ಗ್ರಾಹಕ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಎಂ.ಎ.ಖಾನ್ ಮಾತನಾಡಿ, ಸಾಮಾಜಿಕ ಜಾಲತಾಣಗಳ ಮೂಲಕ ಗ್ರಾಹಕ ಹಕ್ಕುಗಳ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು. ಕಡಿಮೆ ಬೆಲೆಯಲ್ಲಿ ವಸ್ತುಗಳು ಸಿಗುತ್ತವೆ ಎಂಬ ಭರದಲ್ಲಿ ಅವುಗಳ ಉಪಯೋಗಕ್ಕೆ ಬಾರದಿದ್ದರೂ ಭಾವುಕರಾಗಿ ಖರೀದಿಸುವ ಗ್ರಾಹಕರೂ ನಮ್ಮಲ್ಲಿದ್ದು, ಈ ಬಗ್ಗೆಯೂ ಎಚ್ಚರಿಕೆ ಅಗತ್ಯ ಎಂದು ಅವರು ಹೇಳಿದರು.

ಗ್ರಾಹಕ ಚಟುವಟಿಕೆಗಳು ಹಾಗೂ ಗ್ರಾಹಕ ಹಕ್ಕುಗಳ ಬಗ್ಗೆ ಡಿಪ್ಲೊಮಾ ಕೋರ್ಸ್‌ಗಳನ್ನು ಆರಂಭಿಸಲು ಮುಂದೆ ಬಂದಲ್ಲಿ ಸಂಪೂರ್ಣ ಸಹಕಾರವನ್ನು ಒದಗಿಸುವುದಾಗಿ ಎಂ.ಎ. ಖಾನ್ ಅವರು ಈ ಸಂದರ್ಭ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ಜೆ. ಸಾಲಿಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ ಒಕ್ಕೂಟ ನಡೆದು ಬಂದ ದಾರಿ ಹಾಗೂ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಶಾಲೆಗಳಿಗೆ ಗ್ರಾಹಕ ಶಿಕ್ಷಣ ಪ್ರಮಾಣ ಪತ್ರ, ಉತ್ತಮ ಸಂಯೋಜಕ ಶಿಕ್ಷಕ ಪ್ರಶಸ್ತಿ ಪ್ರದಾನ, ಶಾಲಾ ವಿದ್ಯಾರ್ಥಿಗಳಿಗೆ ಗ್ರಾಹಕ ಜಾಗೃತಿ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಣೇಶ ಬಿ, ಗೋವಿಂದ ದಾಸ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ. ಮುರಳೀಧರ ರಾವ್, ಎಸ್‌ಡಿಎಂ ಬಿಬಿಎಂ ಕಾಲೇಜಿನ ಪ್ರಾಂಶುಪಾಲ ಅರುಣಾ ಪಿ. ಕಾಮತ್ ಉಪಸ್ಥಿತರಿದ್ದರು. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಕೆ. ರಾಜು ಮೊಗವೀರ ಸ್ವಾಗತಿಸಿದರು.