
ಕಲಬುರಗಿ: ಇಷ್ಟು ದಿನ ನೀವು ಚಿನ್ನ, ಬೆಳ್ಳಿ, ಬೈಕ್, ದೇವಸ್ಥಾನದ ಹುಂಡಿ ಕಳ್ಳತನದ ಬಗ್ಗೆ ಕೇಳಿದ್ದೀರಿ. ಆದ್ರೆ ಕಲಬುರಗಿಯಲ್ಲಿ ಬರೋಬ್ಬರಿ 39 ವರ್ಷಗಳ ಬಳಿಕ ನಿಂಬೆಹಣ್ಣು ಕಳ್ಳನನ್ನು ಬಂಧಿಸಲಾಗಿದೆ.
ಹೌದು. ಆಳಂದ ತಾಲೂಕಿನ ಗೋಳಾ ಗ್ರಾಮದಲ್ಲೊಬ್ಬ ಖತರ್ನಾಕ್ ಅಜ್ಜ ಇದ್ದಾನೆ. ಆತ 1976ರಲ್ಲಿ ಎಂದರೆ ಬರೋಬ್ಬರಿ 39 ವರ್ಷದ ಹಿಂದೆ ಶಂಕರರಾವ್ ಪಾಟೀಲ್ ಎಂಬುವರ ಹೊಲದಲ್ಲಿ ಅಂದಿಗೆ 300 ರೂಪಾಯಿ ಮೌಲ್ಯದ ನಿಂಬೆಹಣ್ಣು ಕಳ್ಳತನ ಮಾಡಿದ್ದ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಕಳ್ಳನನ್ನು ಹಿಡಿದಿದ್ದಾರೆ.
ದಶರಥ ಪಾರದಿ ಅಂದು ನಿಂಬೆಹಣ್ಣು ಕದ್ದಿದ್ದ. ಇದೀಗ ಡಿವೈಎಸ್ಪಿ ಎಂ.ಸೂರ್ಯವಂಶಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ 39 ವರ್ಷದ ಹಿಂದಿನ ಕಳ್ಳತನವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ ನಿಂಬೆಹಣ್ಣು ಕಳ್ಳನಿಗೆ ಏನು ಶಿಕ್ಷೆ ವಿಧಿಸುತ್ತಾರೆ ಎನ್ನುವುದೇ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.