
ಮುಂಬೈ: ಅಪ್ರಾಪ್ತ ಬಾಲಕಿಯರಿಗೆ ಮುಂಬೈ ಸುರಕ್ಷಿತ ತಾಣವಲ್ಲ ಎಂಬುದು ಪದೇಪದೇ ಸಾಬೀತಾಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಕೇವಲ ಎರಡೇ ತಿಂಗಳಲ್ಲಿ 80 ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಹಾಗೂ 157 ಬಾಲಕಿಯರು ಅಪಹರಣವಾಗಿರುವುದಾಗಿ ವರದಿಯಾಗಿವೆ.
ಇದರಂತೆ ಈ ಹಿಂದಿನ ವರ್ಷಗಳ ವರದಿಯನ್ನು ನೋಡಿದರೆ 2014 ರಲ್ಲಿ 350 ಬಾಲಕಿಯರ ಮೇಲೆ ಅತ್ಯಾಚಾರ, 2015ರಲ್ಲಿ 447, 2016 ಮೊದಲನೇ ಎರಡು ತಿಂಗಳಲ್ಲಿ 80 ಬಾಲಕಿಯರ ಮೇಲೆ ಅತ್ಯಾಚಾರವಾಗಿರುವುದಾಗಿ ವರದಿಗಳು ತಿಳಿಸಿವೆ.
ಇದರಂತೆ ಅಪರಹರಣ ಪ್ರಕರಣಗಳೂ ಕೂಡ ಹೆಚ್ಚಾಗಿದ್ದು, 2014ರಲ್ಲಿ 289, 2015ರಲ್ಲಿ 9922 ಹಾಗೂ ಈ ವರ್ಷದ ಮೊದಲ ಎರಡು ತಿಂಗಳಲ್ಲಿ 157 ಅಪ್ರಾಪ್ತ ಬಾಲಕಿಯರ ಅಪರಹಣ ಪ್ರಕರಣಗಳು ದಾಖಲಾಗಿವೆ.
ಇನ್ನು ಕಳೆದ ಎರಡು ವಾರಗಳ ಹಿಂದಷ್ಟೇ ಮ್ಯಾನ್ಖುರ್ದ್ ಹಾಗೂ ಕುರ್ಲಾ ಪ್ರದೇಶಗಳಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೃತದೇಹ ಪತ್ತೆಯಾಗಿತ್ತು. ಬಾಲಕಿಯರನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಿರುವುದಾಗಿ ತಿಳಿದುಬಂದಿತ್ತು. ಇದರಂತೆ ಪೊಲೀಸರು ಮಾದಕ ವ್ಯಸನಕ್ಕೀಡಾಗಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದರು.
ವಿಚಾರಣೆ ವೇಳೆ ತಮ್ಮ ಮೇಲಿನ ಅಧಿಕಾರಿಯೊಬ್ಬರು ಸೆಕ್ಸ್ ಗಾಗಿ ಮಕ್ಕಳನ್ನು ಕೇಳುತ್ತಿದ್ದರು. ಹೀಗಾಗಿ ಬಾಲಕಿಯನ್ನು ಅಪಹರಿಸುತ್ತಿರುವುದಾಗಿ ಹೇಳಿಕೊಂಡಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಅಪಹರಣಕ್ಕೊಳಗಾದ ಹೆಣ್ಣು ಮಕ್ಕಳನ್ನು ಬಲವಂತದಿಂದ ಭಿಕ್ಷೆ ಬೇಡಲು ಕಳುಹಿಸಲಾಗುತ್ತಿದ್ದು. ಕಳೆದ ವರ್ಷ ಈ ದಂಧೆಯ ಗುಂಪು ಇರುವ ಸ್ಥಳದ ಮೇಲೆ ದಾಳಿ ಮಾಡಿ ಅಪಹರಣಕ್ಕೊಳಗಾಗಿದ್ದ ಸುಮಾರು 1000ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಲಾಗಿತ್ತು. ನಂತರ ಅವರ ಪೋಷಕರಿಗೆ ಒಪ್ಪಿಸಲಾಗಿತ್ತು. ಇದೀಗ ನಗರದಲ್ಲಿ ಮಕ್ಕಳ ಅಪಹರಣ ಹಾಗೂ ಅತ್ಯಾಚಾರ ಪ್ರಕರಣಗಳನ್ನು ನಿಯಂತ್ರಿಸುವುದು ಹರಸಾಹಸ ಕೆಲಸವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ.
ಈ ಸಂಬಂಧ ಮಾತನಾಡಿರುವ ಸಾಮಾಜಿಕ ಕಾರ್ಯಕರ್ತೆ ಪ್ರೀತಿ ದಂಡೆಕರ್ ಅವರು, ಮಕ್ಕಳ ಮೇಲೆ ದೌರ್ಜನ್ಯವೆಸಗುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಮಕ್ಕಳ ಅಪಹರಣ ಹಾಗೂ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಸಾಕಷ್ಟು ಆತಂಕವನ್ನುಂಟು ಮಾಡಿದೆ. ಪೊಲೀಸರು ಆರೋಪಿಗಳನ್ನು ಬಂಧಿಸುವ ಕುರಿತಂತೆ ನನಗೆ ನಂಬಿಕೆಯಿದೆ. ಪೊಲೀಸರು ಸಾಧ್ಯವಾದಷ್ಟು ಶೀಘ್ರಗತಿಯಲ್ಲಿ ಆರೋಪಿಗಳನ್ನು ಬಂಧಿಸಬೇಕು ಎಂದು ಹೇಳಿದ್ದಾರೆ.