ರಾಷ್ಟ್ರೀಯ

ಪ್ರತಿ ಶುಕ್ರವಾರ ಕೇಂದ್ರ ಸರ್ಕಾರಿ ನೌಕರರು ಖಾದಿ ವಸ್ತ್ರ ಧರಿಸುವುದು ಕಡ್ಡಾಯ

Pinterest LinkedIn Tumblr

employment_and_free_trade_zones_in_dubai
ನವದೆಹಲಿ, ಮಾ.9-ಇನ್ನು ಮುಂದೆ ಪ್ರತಿ ಶುಕ್ರವಾರ ಕೇಂದ್ರ ನೌಕರರು ಕಡ್ಡಾಯವಾಗಿ ಖಾದಿ ವಸ್ತ್ರ ಧರಿಸಬೇಕು.  ಶೀಘ್ರದಲ್ಲೇ ಈ ಸಂಬಂಧ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲಿದ್ದು,  ಇನ್ನು ಮುಂದೆ ಕೇಂದ್ರ ನೌಕರರು ಕಡ್ಡಾಯವಾಗಿ ವಾರದಲ್ಲಿ ಒಂದು ದಿನ(ಶುಕ್ರವಾರ) ಖಾದಿವಸ್ತ್ರ ಧರಿಸಲೇಬೇಕು.  ಅಳಿವಿನಂಚಿನಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಈಗಾಗಲೇ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ ಕಾರ್ಯದರ್ಶಿಗಳ ಜೊತೆ ಮಾತುಕತೆ ನಡೆಸಲಾಗಿದೆ.   ಆದಷ್ಟು ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ಖಾದಿ ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷ ವಿ.ಕೆ.ಸಕ್ಸೇನ ತಿಳಿಸಿದ್ದಾರೆ.

ಕಾರಣವೇನು:

ದೇಶದ ಪ್ರತಿಯೊಬ್ಬ ಪ್ರಜೆಯೂ ಖಾದಿ ಧರಿಸುವಂತೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಕರೆ ಕೊಟ್ಟಿದ್ದರು. ಬೂಟಾಟಿಕೆಗೋ ಅಥವಾ ತೋರ್ಪಡಿಕೆಗೋ ಕಾರಣಕ್ಕೋ ರಾಜಕಾರಣಿಗಳು ಗರಿಗರಿಯಾದ ಖಾದಿ ಬಟ್ಟೆ ಧರಿಸುತ್ತಿದ್ದರು.  ಆದರೂ ಖಾದಿ ಗ್ರಾಮೋದ್ಯೋಗ  ಆರಕ್ಕೂ ಏರದೆ, ಮೂರಕ್ಕೂ ಇಳಿಯದೆ ನಶಿಸುವ ಹಂತಕ್ಕೆ ತಲುಪಿತ್ತು. ಇದನ್ನು ಮನಗಂಡ ಕೇಂದ್ರ ಸರ್ಕಾರ ಈ ಉದ್ಯೋಗವನ್ನು ಅವಲಂಬಿತವಾಗಿರುವವರಿಗೆ ಉತ್ತೇಜನ ನೀಡಲು ಈ ಉಪಾಯ ಕಂಡುಕೊಂಡಿದೆ.  ವಾರದಲ್ಲಿ ಕನಿಷ್ಠ ಒಂದು ದಿನವಾದರೂ ಕೇಂದ್ರ ನೌಕರರು ಕಡ್ಡಾಯವಾಗಿ ಖಾದಿ ಧರಿಸಬೇಕು. ಅದರಲ್ಲೂ ವಿಶೇಷವಾಗಿ ಶುಕ್ರವಾರವೇ ಧರಿಸುವಂತೆ ಸೂಚನೆ ಹೊರಬೀಳಲಿದೆ.

ಪುರುಷರು ಖಾದಿ ಶರ್ಟ್ ಮತ್ತು ಪ್ಯಾಂಟ್ ಹಾಗೂ ಮಹಿಳೆಯರು ಖಾದಿ ಸೀರೆ ಹಾಗೂ ರವಿಕೆ ಹಾಕಬೇಕು.ಕೇಂದ್ರದಲ್ಲಿ ವಿವಿಧ ಇಲಾಖೆಗಳಲ್ಲಿ ಸರಿಸುಮಾರು ಎರಡು ಕೋಟಿಗೂ ಹೆಚ್ಚು ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ.  ಖಾದಿ ಧರಿಸಬೇಕೆಂಬ ಪ್ರಸ್ತಾವನೆಯನ್ನು ನೌಕರರು ವಿರೋಧಿಸಿಲ್ಲ.  ಖಾದಿಯು ನಮ್ಮ ದೇಶದ ಪ್ರತೀಕವೂ ಹೌದು. ರಾಷ್ಟ್ರಪಿತ ಮಹಾತ್ಮಗಾಂಧೀ ದೇಶದ ಪ್ರಥಮ ರಾಷ್ಟ್ರಪತಿ ಬಾಬೂ ರಾಜೇಂದ್ರ ಪ್ರಸಾದ್, ಪ್ರಥಮ ಪ್ರಧಾನಿ ಪಂಡಿತ್ ಜವಹಾರ್ಲಾಲ್ ನೆಹರು, ಸರ್ದಾರ್ ವಲ್ಲಭ ಭಾಯ್ ಪಟೇಲ್, ಲಾಲ್ ಬಹುದ್ದೂರು ಶಾಸ್ತ್ರಿ ಸೇರಿದಂತೆ ಅನೇಕರು ಖಾದಿಗೆ ಮೊರೆ ಹೋಗಿದ್ದರು.

ಮೋದಿಯೂ ಖಾದಿ ಪ್ರಿಯ:
ಹಾಲಿ ಪ್ರಧಾನಿ ನರೇಂದ್ರ ಮೋದಿ ಕೂಡ ವಿವಿಧ ಬಗೆಯ ಖಾದಿ ಉಡುಪುಗಳನ್ನು ಧರಿಸುತ್ತಾರೆ. ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಬಿಜೆಪಿ ಸರ್ಕಾರವನ್ನು ಸೂಟುಬೂಟಿನ ಸರ್ಕಾರವೆಂದು ಟೀಕಿಸಿದ ಮೇಲೆ ಮೋದಿ ತಮ್ಮ ದಿರಿಸನ್ನು ಬದಲಾಯಿಸಿದ್ದಾರೆ.  ವಿದೇಶಕ್ಕೆ ಹೋದ ವೇಳೆ ಇಲ್ಲವೆ ಯಾವುದಾದರೂ ಗಣ್ಯರು ಆಗಮಿಸಿದ ವೇಳೆ ಸೂಟು ಹಾಕಿಕೊಳ್ಳುತ್ತಾರೆ. ಉಳಿದ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಮೋದಿ ಖಾದಿ ಧರಿಸುತ್ತಾರೆ.

ಒಪ್ಪಂದ:
ಖಾದಿ ಗ್ರಾಮೋದ್ಯೋಗವನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಈಗಾಗಲೇ ವಿವಿಧ ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದರ ಜೊತೆಗೆ ಕೆಲವು ಖಾಸಗಿ ಕಂಪನಿಗಳು ತಮ್ಮ ನೌಕರರು ವಾರದಲ್ಲಿ ಒಂದು ದಿನ ಖಾದಿ ಧರಿಸುವಂತೆ ಸೂಚನೆ ಕೊಟ್ಟಿವೆ. ಅಂದ ಹಾಗೆ ಖಾದಿ ಪ್ರಚಾರಕ್ಕೆ ನರೇಂದ್ರ ಮೋದಿಯೇ ರಾಯಭಾರಿಯಾಗಲಿದ್ದಾರೆ.   ಭಾರತದಲ್ಲೇ ಅತಿ ಹೆಚ್ಚು ಸಿಬ್ಬಂದಿಯನ್ನು ಹೊಂದಿರುವ ರೈಲ್ವೆ ಮತ್ತು ರಕ್ಷಣಾ ಇಲಾಖೆ ತಮ್ಮ ಸಿಬ್ಬಂದಿಗೆ ಖಾದಿ ಉಡುಪು ಧರಿಸುವ ಕುರಿತು ಈವರೆಗೂ ಯಾವುದೇ ಸೂಚನೆ ನೀಡಿಲ್ಲ. ಒಂದು ವೇಳೆ ಈ ಎಲ್ಲ ಇಲಾಖೆಗಳು ಖಾದಿ ವಸ್ತ್ರ ಧರಿಸುವ ಬಗ್ಗೆ ಒಲವು ತೋರಿದರೆ ಖಾದಿ ಉದ್ಯಮ ಹೊಸ ಆಯಾಮ ಪಡೆದುಕೊಳ್ಳಲಿದೆ.

Write A Comment