
ನವದೆಹಲಿ (ಪಿಟಿಐ): ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯತಂತ್ರ ಹೆಣೆಯುತ್ತಿರುವ ಬಿಜೆಪಿ, ಪ್ರಸಕ್ತ ಸಾಲಿನ ಬಜೆಟ್ ಅಂಶಗಳನ್ನು ಜನರು ಅರಿತುಕೊಳ್ಳಲು ನಿಟ್ಟಿನಲ್ಲಿ ಶ್ರಮಿಸುವಂತೆ ಪಕ್ಷದ ಸಂಸದರಿಗೆ ಕೋರಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತರಿದ್ದ ಬಿಜೆಪಿ ಸಂಸದೀಯ ಸಭೆಯಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಈ ಜನಪ್ರಿಯ ಬಜೆಟ್ನ ಯೋಜನೆಗಳ ಮೇಲೆ ಬೆಳಕು ಚೆಲ್ಲಿ. ಸಮಾಜದ ಎಲ್ಲ ವರ್ಗದವರಿಗೂ ಇದರಲ್ಲಿ ಪ್ರಯೋಜನವಿದೆ ಎಂದು ವಿವರಿಸುವ ಮೂಲಕ ಬಜೆಟ್ನ್ನು ಜನರಿಗೆ ತಲುಪಿಸಿ ಎಂದು ಸಂಸದರಿಗೆ ಸೂಚಿಸಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಕೇಂದ್ರ ಸಚಿವ ಎಂ.ವೆಂಕಯ್ಯನಾಯ್ಡು ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದರು.
‘ಬಜೆಟ್ ಅನ್ನು ಜನರ ಬಳಿಗೆ ಕೊಂಡೊಯ್ಯುಬೇಕು. ಪ್ರಧಾನಿ ಅವರ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಯೋಜನೆಯಲ್ಲಿ ಜನರು ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಸಂಸದರಿಗೆ ಷಾ ಹೇಳಿದ್ದಾರೆ’ ಎಂದು ನಾಯ್ಡು ತಿಳಿಸಿದರು.
ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆ, ಮುದ್ರಾ ಬ್ಯಾಂಕ್, ಗ್ರಾಮೀಣ ವಿದ್ಯುದ್ದೀಕರಣ ಯೋಜನೆ ಹಾಗೂ ಜನಧನದಂಥ ಯೋಜನೆಗಳ ಅನುಷ್ಠಾನ ಹಾಗೂ ಪರಿಶೀಲನೆಗೆ ಗಮನ ಕೇಂದ್ರೀಕರಿಸುವಂತೆ ಸಭೆಯಲ್ಲಿ ಸಂಸದರಿಗೆ ಸೂಚಿಸಲಾಗಿದೆ.