ಮಿಯಾಮಿ (ಪಿಟಿಐ): ಅಮೆರಿಕ ಅಧ್ಯಕ್ಷ ಗಾದಿಗೇರುವ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರುವ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ನಡುವಿನ ವಾಕ್ಸಮರ ಮುಂದುವರಿದಿದೆ.
ನಿರ್ಣಾಯಕ ‘ಮಲ್ಟಿ ಸ್ಟೇಟ್ ಸೂಪರ್ ಟ್ಯೂಸ್ ಡೇ ಪ್ರೈಮರೀಸ್’ ಗೆಲುವಿನ ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಇವರಿಬ್ಬರು ಪರಸ್ಪರ ಆರೋಪ–ಪ್ರತ್ಯಾರೋಪ ಮಾಡಿದ್ದಾರೆ.
‘ಮತ್ತೊಮ್ಮೆ ಅಮೆರಿಕವನ್ನು ಉನ್ನತ ಮಟ್ಟಕ್ಕೆ ತರುತ್ತೇನೆ’ ಎಂದು ಟ್ರಂಪ್ ಹೇಳಿದ್ದಾರೆ. ಆದರೆ, ಅಮೆರಿಕ ಯಾವತ್ತೂ ಉನ್ನತ ಮಟ್ಟದಲ್ಲೇ ಇದೆ. ಈಗ ಆಗಬೇಕಿರುವುದು ಸೋರಿ ಹೋಗಿರುವ ದೇಶದ ಅಂತಸ್ಸತ್ವವನ್ನು ಮರಳಿ ತುಂಬುವ ಕೆಲಸ. ಉದ್ಯೋಗಾವಕಾಶ ಸೃಷ್ಟಿಯ ಮೂಲಕ ದೇಶದ ಪ್ರತಿಯೊಬ್ಬರಲ್ಲೂ ಸಬಲೀಕರಣ ಮೂಡಿಸಬೇಕು. ಆ ಮೂಲಕ ದೇಶವನ್ನು ಒಗ್ಗೂಡಿಸಬೇಕು’ ಎಂದು ಹಿಲರಿ ಪ್ಲೊರಿಡಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದರು.
ಪ್ರಾಥಮಿಕ ಸುತ್ತಿನಲ್ಲಿ ಅಲಸ್ಕಾ, ಅರ್ಕನ್ಸಾಸ್, ಜಾರ್ಜಿಯಾ, ಟೆನ್ನೆಸ್ಸಿ, ಟೆಕ್ಸಾಸ್, ಮೆಸ್ಸಾಚುಸೆಟ್ ಮತ್ತು ವರ್ಜಿನಿಯಾ ಸೇರಿದಂತೆ 7 ರಾಜ್ಯಗಳಲ್ಲಿ ಹಿಲರಿ ಗೆಲುವು ಕಂಡಿದ್ದಾರೆ. ಪ್ರತಿಸ್ಪರ್ಧಿ ಟ್ರಂಪ್, ಜಾರ್ಜಿಯಾ, ವರ್ಜಿನಿಯಾ, ಮೆಸ್ಸಾಚುಸೆಟ್, ಟೆನ್ನೆಸ್ಸಿ, ಅರ್ಕನ್ಸಾಸ್ ಮತ್ತು ಅಲಬಾಮ ರಾಜ್ಯಗಳಲ್ಲಿ ಗೆಲುವು ದಾಖಲಿಸಿದ್ದಾರೆ.