ಅಂತರಾಷ್ಟ್ರೀಯ

ಬಚ್ಚನ್ ಗೆ ಸ್ಪಾರ್ಟನ್ ಕಂಪನಿಯ ಸ್ವರ್ಣ ಲೇಪಿತ ಬ್ಯಾಟ್ ಉಡುಗೊರೆ ನೀಡಿದ ಕ್ರಿಸ್ ಗೇಯ್ಲ್

Pinterest LinkedIn Tumblr

chris-gayle-big-B

ಮುಂಬೈ: ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಗೆ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸಮನ್ ಕ್ರಿಸ್ ಗೇಯ್ಲ್ ಸ್ಮರಣೀಯ ಉಡುಗೊರೆಯೊಂದನ್ನು ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಕ್ರಿಸ್ ಗೇಯ್ಲ್ ಅವರ ಈ ನಡೆ ಕೇವಲ ಕ್ರೀಡಾಭಿಮಾನಿಗಳಿಗಷ್ಟೇ ಅಲ್ಲದೆ ಸಿನಿಮಾ ಅಭಿಮಾನಿಗಳಿಗೂ ಅಚ್ಚರಿ ತಂದಿದೆ. ಈ ಹಿಂದೆ ಬಿಗ್‌ಬಾಷ್ ಲೀಗ್ ಟಿ20 ಟೂರ್ನಿಯಲ್ಲಿ ಬಳಸಿದ್ದ ಸ್ವರ್ಣ ಲೇಪಿತ ಬ್ಯಾಟ್‌ಅನ್ನು ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಸ್ಪಾರ್ಟನ್ ಕಂಪನಿಯ ಈ ಬ್ಯಾಟ್‌ನಲ್ಲಿ ಕ್ರಿಸ್ ಗೇಯ್ಲ್ ರ ಹಸ್ತಾಕ್ಷರವೂ ಇದ್ದು, ‘ನನ್ನ ಸ್ಪಾರ್ಟನ್ ಬ್ಯಾಟ್‌ ಅನ್ನು ದಂತಕಥೆಯಾಗಿರುವ ಅಮಿತಾಭ್ ಬಚ್ಚನ್‌ಗೆ ನೀಡುತ್ತಿರುವುದಕ್ಕೆ ಹೆಮ್ಮೆ ಆಗುತ್ತಿದೆ. ಅವರ ಸಿನಿಮಾಗಳು, ಸ್ಟೈಲ್‌ಅನ್ನು ನಾನು ಇಷ್ಟಪಡುತ್ತೇನೆ. ನಿಜವಾಗಿಯೂ ಅವರೊಬ್ಬ ದಂತಕಥೆ’ ಎಂದು ಗೇಯ್ಲ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದಕ್ಕೆ ಉತ್ತರಿಸಿರುವ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು, ‘ಮಿಸ್ಟರ್ ಗೇಯ್ಲ್ ಇದೊಂದು ಅದ್ಭುತ ಗೌರವ. ನಾನು ನಿಮಗೆ ಗೊತ್ತಿರಬಹುದೆಂದೇ ಅಂದುಕೊಂಡಿರಲಿಲ್ಲ. ನಾವೆಲ್ಲರೂ ನಿಮ್ಮ ದೊಡ್ಡ ಅಭಿಮಾನಿಗಳು’ ಎಂದು ಬಚ್ಚನ್ ಉತ್ತರಿಸಿದ್ದಾರೆ. ಅಲ್ಲದೆ, ಶೀಘ್ರದಲ್ಲೇ ಭಾರತದಲ್ಲಿ ಭೇಟಿಯಾಗೋಣ ಎಂದು ಗೇಯ್ಲ್ ಟ್ವೀಟ್‌ಗೆ ಅಮಿತಾಬ್, ಸಮ್ಮತಿ ಸೂಚಿಸಿದ್ದಾರೆ. ಉಡುಗೊರೆಯಾಗಿ ನೀಡಿರುವ ಬ್ಯಾಟ್ ಮತ್ತು ಬಚ್ಚನ್ ಬ್ಯಾಟ್ ಪಡೆಯುತ್ತಿರುವ ಚಿತ್ರವನ್ನು ಕ್ರಿಸ್ ಗೇಯ್ಲ್ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.
ಬಹುಷಃ ಇವರಿಬ್ಬರೂ ಮುಂದಿನ ಟಿ20 ವಿಶ್ವಕಪ್ ಟೂರ್ನಿ ವೇಳೆ ಭೇಟಿಯಾಗುವ ನಿರೀಕ್ಷೆಯಿದೆ.

Write A Comment